ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ನೌಕರ ಸಂಘದಿಂದ ಮನವಿ
ವಿಜಯಪುರ: ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಮೊಟ್ಟೆ, ಬಾಳೆ ಹಣ್ಣು, ಶೇಂಗಾ ಚಿಕ್ಕಿ ಹಾಗೂ ತರಕಾರಿ ದರಗಳು ಗಗನಕ್ಕೆ ಏರಿದ್ದು ಸರ್ಕಾರ ನೀಡುವ ಸಾದಿಲ್ವಾರು ಹಣ ಸಾಕಾಗುತ್ತಿಲ್ಲ. ಶಿಕ್ಷಕರಿಗೆ ಕಾರ್ಯ ನಿರ್ವಹಿಸುವದು ಕಷ್ಟ ಆಗುತ್ತಿದ್ದು, ದರವನ್ನು ಏರಿಸಿ ಹಣ ನಿಗದಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಗುರುವಾರ ಮನವಿ ಸಲ್ಲಿಸಿತು.
ನಂತರ ಮಾತನಾಡಿದ ಜಿಲ್ಲಾಧ್ಯಕ್ಷ 2023ನೇ ಸಾಲಿನಲ್ಲಿ ಬೇಸಿಗೆ ರಜೆಯಲ್ಲಿ ಬಿಲ್ಒ ಆಗಿ ಕಾರ್ಯ ನಿರ್ವಹಿಸಿದ ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಮಾಡಬೇಕು. ದೈಹಿಕ ನ್ಯೂನತೆ ಹಾಗೂ ಐವತ್ತು ವರ್ಷ ಮೇಲ್ಪಟ್ಟ ಎಲ್ಲ ಶಿಕ್ಷಕರಿಗೆ ಬಿಎಲ್ಓ ಕಾರ್ಯದಿಂದ ವಿನಾಯಿತಿ ನೀಡಬೇಕು. ಹಲವು ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಶೌಚಾಲಯ, ಮೂತ್ರಾಲಯ ವ್ಯವಸ್ಥೆ ಇರುವದಿಲ್ಲ, ಅನುದಾನ ಮಂಜೂರಾತಿಗಾಗಿ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದರು.
ವಿಜಯಪುರ ನಗರ ವಲಯದಲ್ಲಿ ಬೇಸಿಗೆ ಅವಧಿಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದ ಬಿಎಲ್ಓಗಳಿಗೆ ತಹಶೀಲ್ದಾರ ವಿಜಯಪುರ ಅವರು ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದ ಬಿಎಲ್ಓಗಳ ಪಟ್ಟಿಯೊಂದಿಗೆ ಗಳಿಕೆ ರಜೆ ಮಂಜೂರು ಮಾಡುವಂತೆ ಆದೇಶ ನೀಡಿರುತ್ತಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಗಳಿಕೆ ರಜೆಗಳನ್ನು ಸೇವಾ ಪುಸ್ತಕದಲ್ಲಿ ನಮೂದಿಸುತ್ತಿಲ್ಲ. ತಹಶೀಲ್ದಾರ ಆದೇಶದಂತೆ ಬೇಸಿಗೆಯಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ ಬಿಎಲ್ಓಗಳಿಗೆ ಗಳಿಕೆ ರಜೆ ಮಂಜೂರಿಸಿ ಸೇವಾ ಪುಸ್ತಕದಲ್ಲಿ ನಮೂದಿಸಲು ನಿರ್ದೇಶನ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ನೌಕರರ ಸಂಘ ಜಿಲ್ಲಾ ಖಜಾಂಚಿ ಜುಬೇರ ಕೆರೂರ, ಪ್ರಧಾನ ಕಾರ್ಯದರ್ಶಿ ರಾಜಶೇಖರ ದೈವಾಡಿ, ಜಗದೀಶ ಬೋಳಸೂರ, ವಿಜಯಕುಮಾರ ಹತ್ತಿ, ಗಂಗಾಧರ ಜೇವೂರ, ಅಜೀಜ್ ಅರಳಿಮಟ್ಟಿ, ಎಸ್.ಎನ್.ಪಡಶೆಟ್ಟಿ, ಬಿ.ಎಲ್.ನಿವರಗಿ, ಜೆ.ಎಸ್.ಅಕ್ಕಿ, ನೀಜು ಮೇಲಿನಕೇರಿ, ಬಸೀರ್ ನದಾಪ್, ಬಿ.ಸಿ.ಚಲವಾದಿ, ಆರ್.ಯು.ರಾಠೋಡ, ಬಿ.ಕೆ.ತೌಸೆ, ಮಂಜುನಾಥ ಅರೆಶಂಕರ, ಎಂ.ಎಸ್.ಮಠಪತಿ, ರಿಯಾಜ್ ತಮದಡ್ಡಿ, ರಂಗನಾಥ ದೇಸಾಯಿ ಇದ್ದರು.

