ಬಿಜ್ಜರಗಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ | ಧರ್ಮಸಭೆ | ನುಡಿನಮನ
ತಿಕೋಟಾ: ಶತಮಾನದ ಶ್ರೇಷ್ಠ ಸಂತ ಲಿಂ.ಸಿದ್ದೇಶ್ವರ ಸ್ವಾಮೀಜಿಯವರಿಗೆ ನಮ್ಮ ಸತ್ವಹೀನ ಶಬ್ದಗಳಿಂದ ನುಡಿ ನಮನ ಮಾಡಲು ಸಾಧ್ಯವಿಲ್ಲ. ನುಡಿಯಿಂದ ನಮನ ಸಲ್ಲಿಸುವುದು ಸಾಕು. ನಾವು ನಡೆಯಿಂದ ಅವರಿಗೆ ನಮನ ಸಲ್ಲಿಸಿ ಗೌರವಿಸೋಣ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಧರ್ಮಸಭೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳಿಗೆ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.
ಶ್ರೀಗಳ ಜೀವನವೇ ಒಂದು ಪೂಜೆ, ನಾವು ಹಚ್ಚಿದ ದೀಪ ಆರಿವೆ. ಶ್ರೀಗಳ ಜ್ಞಾನದ ದೀಪ ಆರಿಲ್ಲ, ಅವರು ಆರದ ಜ್ಞಾನದ ದೀಪ ಹಚ್ಚಿದ್ದಾರೆ. ಸ್ವಂತಕ್ಕೆ ಏನೂ ಇರಲಿಲ್ಲ ಸಂತೋಷಕ್ಕೆ ಏನೂ ಕಮ್ಮಿ ಇರಲಿಲ್ಲ. ಸದಾ ಸಂತೋಷದಿಂದ, ಶಾಂತತೆಯಿಂದ, ದೊಡ್ಡ ಮನಸ್ಸು ಉಳ್ಳ, ಲೋಕ ಕಲ್ಯಾಣ ಕೆಲಸ ಮಾಡುವವರೇ ನಿಜವಾದ ಸಂತರು. ಶ್ರೀಗಳ ಹೊರಗೆ ಏನೂ ಇರಲಿಲ್ಲ. ಅವರ ಒಳಗಡೆ ಜ್ಞಾನದ ಬೆಳಕು ತುಂಬಿ ತುಳುಕುತ್ತಿತ್ತು. ಶ್ರೀಗಳ ಮನಸ್ಸಿಗೆ ಇಡೀ ಜಗತ್ತು ತಲೆ ಬಾಗಿದೆ ಎಂದರು.
ಸದಾ ಒಳ್ಳೆಯದನ್ನ ಮಾಡುವ ಮನಸ್ಸು ನಮ್ಮದಾಗಬೇಕು. ದೇಹಕ್ಕೆ ಏನೂ ಕಿಮ್ಮತ್ತಿಲ್ಲ, ಒಳಗಡೆ ಏನು ತುಂಬಿದೆ ಅದರ ಮೇಲೆ ಕಿಮ್ಮತ್ತಿದೆ. ಜಗತ್ತು ಇರುವಂಗ ನಾವು ಹೊಂದಿಕೊಳ್ಳಬೇಕು. ಆದರೆ ನಾವು ಅಂದಕೊಂಡಂಗ ಜಗತ್ತು ಇರುವದಿಲ್ಲ. ನಾನು ಜಗತ್ತಿನಲ್ಲಿ ಚಿಕ್ಕ ಅಣು ಮಾತ್ರ ಎಂಬ ಅರಿವು ಇರಬೇಕು. ಮನುಷ್ಯನಿಗೆ ಮನಸ್ಸು ದೊಡ್ಡದಿರಬೇಕು, ಶ್ರೀಮಂತಿಕೆಯೂ ನಮ್ಮ ಮನಸ್ಸಿನ ಮೇಲೆ ನಿಂತಿದೆ. ಹಳ್ಳಿಗರ ಹೃದಯದಲ್ಲಿ ಭಾರತ ನೋಡಬೇಕು, ಶ್ರೀಗಳ ಹುಟ್ಟಿದ ಊರಿಗೆ ಬರುವ ಸೆಳೆತ ನನ್ನನ್ನು ಇಲ್ಲಿಗೆ ಕರೆ ತಂದಿತು ಎಂದು ಶ್ರೀಗಳು ಹರ್ಷ ವ್ಯಕ್ತಪಡಿಸಿದರು.
ಮಾಂಜರಿ ಕಾಡಸಿದ್ದೇಶ್ವರ ಮಠದ ಗುರುಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭರತ ಖಂಡದಲ್ಲಿ ಶ್ರೇಷ್ಟ ಪವಿತ್ರ ಮೇಧಾವಿಗಳಾದ ಭಾಸ್ಕರಾಚಾರ್ಯ ಹಾಗೂ ಸಿದ್ದೇಶ್ವರ ಶ್ರೀಗಳನ್ನು ಜಗತ್ತಿಗೆ ನೀಡಿದ ಪುಣ್ಯ ಭೂಮಿ ಈ ಬಿಜ್ಜರಗಿ ಗ್ರಾಮ ಎಂದರು.
ಯಡೂರ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯ ಶ್ರೀಶೈಲ ಹಿರೇಮಠ ಮಾತನಾಡಿ ಭಾರತ ಅನೇಕ ಜ್ಞಾನಿ, ವಿಜ್ಞಾನಿ, ಸಂತ, ಶರಣರನ್ನು ಕೊಟ್ಟ ಭೂಮಿ. ಪೂಜ್ಯರ ಅನುಭಾವದ ನುಡಿ ಕೇಳಿದಾಗ ಮನಸ್ಸಿನ ಮಲಿನತೆ ಸ್ವಚ್ಚವಾಗುವದು. ಭಾರತೀಯರಲ್ಲಿ ವಿಶೇಷ ಸಂಸ್ಕಾರ ಇರುವದರಿಂದಲೇ ವಿದೇಶಿಗರು ತಲೆ ಬಾಗುತ್ತಾರೆ. ಪ್ರವಚನ ಅಂದರೆ ಸಿದ್ದೇಶ್ವರ ಶ್ರೀಗಳು ಅನ್ನುವಂತಾಗಿದೆ ಎಂದರು.
ಸಿದ್ದೇಶ್ವರ ಶ್ರೀಗಳ ಸಹೋದರ ಅಮರೇಶ ಪಾಟೀಲ್ ಮಾತನಾಡಿ, ನಮ್ಮ ದೇಹ ಹಾಗೂ ಬಟ್ಟೆ ಮಲಿನವಾದಾಗ ಸ್ವಚ್ಚ ಮಾಡುತ್ತೇವೆ. ಅದರಂತೆ ನಮ್ಮ ಮನಸ್ಸು ಕೂಡಾ ಮಲೀನ ಆಗುತ್ತದೆ. ಅದನ್ನು ಸ್ವಚ್ಚ ಮಾಡಿಕೊಳ್ಳಬೇಕಾದರೆ ಧರ್ಮ ಸಭೆ, ಸತ್ಸಂಗ, ಭಗವಂತನ ಸೇರುವ ಮಾರ್ಗ ಆದಾಗ ಮನಸ್ಸಿನ ಮಲೀನತೆ ಕಳೆಯಬಹುದು. ಸಿದ್ದೇಶ್ವರ ಶ್ರೀಗಳು ಸಹ ಜಗತ್ತು ಸುತ್ತಾಡಿ ಶಾಂತಿ, ಪ್ರೀತಿ ತುಂಬಿರುವಂತೆ ಮಾಡಲು ಪ್ರವಚನ ಮೂಲಕ ಸಾರಿದರು ಎಂದರು.
ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು.