ಪೆಟ್ರೋಲ್-ಡೀಸೆಲ್ ದರ ಏರಿಕೆ ಖಂಡಿಸಿ ಹೆದ್ದಾರಿ ತಡೆದು ಪ್ರತಿಭಟನೆ
ದೇವರಹಿಪ್ಪರಗಿ: ಬಿಜೆಪಿ ಮಂಡಲ ವತಿಯಿಂದ ಮಾಜಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ನೇತೃತ್ವದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ, ಹೆದ್ದಾರಿ ತಡೆ ಕೈಗೊಂಡು ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಮೊಹರೆ ಹಣಮಂತ್ರಾಯ ವೃತ್ತದಲ್ಲಿ ಗುರುವಾರ ಸೇರಿದ ಬಿಜೆಪಿ ಮಂಡಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಅಂಬೇಡ್ಕರ್ ವೃತ್ತದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ಕೈಗೊಂಡರು.
ಈ ಸಂದರ್ಭದಲ್ಲಿ ಮಾಜಿಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಮಾತನಾಡಿ, ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿ ಲೀಟರ್‌ಗೆ ತಲಾ ೩ ರಿಂದ ೩.೫೦ ರೂ.ಏರಿಕೆ ಮಾಡಿರುವುದರಿಂದ ರಾಜ್ಯದ ಜನತೆಗೆ ಬರೆ ಎಳೆದಂತಾಗಿದೆ. ಜೊತೆಗೆ ವಾಲ್ಮಿಕಿ ನಿಗಮದ ೧೮೭ ಕೋಟಿಗಳ ಭ್ರಷ್ಟಾಚಾರ ಹಾಗೂ ಬಾಂಡ್ ಪೇಪರ್, ಮದ್ಯದ ಬೆಲೆಗಳ ಹೆಚ್ಚಳ, ಹದಗೆಟ್ಟ ಕಾನೂನು ವ್ಯವಸ್ಥೆಗಳು ಆರ್ಥಿಕ ತಜ್ಞರೆಂದೇ ಬಿಂಬಿಸಿಕೊಳ್ಳುವ ಸಿದ್ಧರಾಮಯ್ಯ ಸರ್ಕಾರದ ಆಡಳಿತ ವೈಖರಿಗೆ ಕೈಗನ್ನಡಿ ಹಿಡಿದಂತಾಗಿದೆ. ಕೂಡಲೇ ರಾಜ್ಯಪಾಲರು ಇಂಥ ಜನವಿರೋಧಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಮೇಶ ಮಸಬಿನಾಳ, ಬಿಜೆಪಿ ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ, ಹಿಂದುಳಿದ ವರ್ಗದ ಮಂಡಲ ಅಧ್ಯಕ್ಷ ಮುತ್ತು ಹಾಲಿಹಾಳ ಮಾತನಾಡಿ, ಕಾಂಗ್ರೆಸ್ ಪಕ್ಷದ ಪೊಳ್ಳು ಭರವಸೆಗಳು, ಬಿಟ್ಟಿ ಭಾಗ್ಯಗಳು ಹಾಗೂ ಜನ ವಿರೋಧಿ ನೀತಿಗಳನ್ನು ಟೀಕಿಸಿದರು. ನಂತರ ಉಪತಹಶೀಲ್ದಾರ ಸುರೇಶ ಮ್ಯಾಕೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಬಸವರಾಜ ಕಲ್ಲೂರ, ಸೋಮಶೇಖರ ಹಿರೇಮಠ, ರಮೇಶ ಈಳಗೇರ, ಸೋಮು ದೇವೂರ, ರಾವುತ ಅಗಸರ, ಹುಸೇನ್ ಗೌಂಡಿ, ಮಲಕಪ್ಪ ಬಾಗೇವಾಡಿ, ಮಹಾಂತೇಶ ಬಿರಾದಾರ, ಶಿವರಾಜ ತಳವಾರ, ಭೀಮನಗೌಡ ಲಚ್ಯಾಣ, ಪ್ರಕಾಶ ಡೋಣೂರಮಠ, ಪಿಂಟೂ ಭಾಸುತ್ಕರ್, ಈರಣ್ಣ ವಸ್ತçದ, ರಾಜು ಪಡಗಾನೂರ, ಮೌಲಾಲಿ ಚಪ್ಪರಬಂದ, ಭೀಮಸಿಂಗ್ ಪವಾರ, ಜೆ.ಎಸ್.ದೊಡ್ಡಿನಿ, ದಯಾನಂದ ರಾಠೋಡ, ಸಂಜೀವ ಹಾರವಾಳ, ಶಿವು ಮೂಲಿಮನಿ, ಶಿವಕುಮಾರ ಬುಳ್ಳಾ, ಶರಣು ದಳವಾಯಿ ಸೇರಿದಂತೆ ಇತರರು ಇದ್ದರು,

