ವಿಜಯಪುರ: ಜಿಲ್ಲೆಯ ಗ್ರಾಮೀಣ ಭಾಗಕ್ಕೆ ನೀರು ಹಾಗೂ ಉದ್ಯೋಗಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಅಕುಶಲ ಕಾರ್ಮಿಕರಿಗೆ ನಿರಂತರ ಉದ್ಯೋಗ ನೀಡುವ ಉದ್ದೇಶದಿಂದ ಕೂಲಿ ಆಧಾರಿತ ಹಾಗೂ ಜಲಮೂಲ ಆಧಾರಿತ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಬೇಸಿಗೆಯಲ್ಲಿನ ಬಿಸಿಲಿನ ತಾಪಮಾನಕ್ಕೆ ಜಿಲ್ಲೆಯಲ್ಲಿ ಕೆರೆಗಳು ಸಂಪೂರ್ಣ ಬತ್ತಿಹೋಗಿ, ಬೆಟ್ಟ-ಗುಡ್ಡಗಳಲ್ಲಿ ವಾಸ ಮಾಡುವ ವನ್ಯಜೀವಿಗಳು ಹಾಗೂ ಮೇಯಲು ಹೋಗುವ ಜಾನುವಾರುಗಳು, ಮೇಕೆ-ಕುರಿಗಳಿಗೆ ಕುಡಿಯಲು ನೀರು, ಗ್ರಾಮೀಣ ಜನರು ಉದ್ಯೋಗ ಅರಸಿ ದೂರದ ಊರುಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಆದೇಶದ ಮೇರೆಗೆ ಏಪ್ರಿಲ್, ಮೇ ಮತ್ತು ಜೂನ್ ಮಾಹೆಗಳಲ್ಲಿ ಗ್ರಾಮೀಣ ಭಾಗದ ಅಕುಶಲ ಕಾರ್ಮಿಕರಿಗೆ ನಿರಂತರ ಉದ್ಯೋಗ ನೀಡುವ ಉದ್ದೇಶದಿಂದ ಕೂಲಿ ಆಧಾರಿತ ಕಾಮಗಾರಿಗಳ ಅನುಷ್ಟಾನಕ್ಕೆ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿ ಮತ್ತು ಅನುಷ್ಠಾನ ಇಲಾಖೆ ವ್ಯಾಪ್ತಿಗಳಲ್ಲಿ ಕೈಗೆತ್ತಿಕೊಂಡಿರುವ ಕೆರೆ,ನಾಲಾ,ಹಳ್ಳ ಹೂಳೆತ್ತುವುದು,ಕೃಷಿ ಹೊಂಡ, ಬದು ನಿರ್ಮಾಣ, ತೋಟಗಾರಿಕೆ ಪ್ರದೇಶ ವಿಸ್ತರಣೆ, ಅರಣ್ಯೀಕರಣಕ್ಕಾಗಿ ಮುಂಗಡ ಗುಂಡಿ ತೋಡುವುದು, ಮಣ್ಣು ಮತ್ತು ಜಲಸಂರಕ್ಷಣ ಕಾಮಗಾರಿಗಳಲ್ಲಿ ಗ್ರಾಮೀಣ ಅಕುಶಲ ಕೂಲಿಕಾರರಿಗೆ ನಿರಂತರ ಉದ್ಯೋಗ ನೀಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ.
ಜಿಲ್ಲೆಯಲ್ಲಿ ಇತ್ತೀಚೆಗೆ ನಿರಂತರವಾಗಿ ಸುರಿದ ವರ್ಷಧಾರೆಯಿಂದಾಗಿ ಜಿಲ್ಲೆಯ ಜಲಮೂಲಗಳಿಗೆ ಜೀವಕಳೆ ಬಂದಿದೆ. ಕೆರೆ, ನಾಲಾ, ಬಾಂದಾರ, ಹಳ್ಳ-ಕೊಳ್ಳ, ಕೃಷಿಹೊಂಡ, ಬದು, ಕಾಲುವೆಗಳು ಭರ್ತಿಯಾಗಿವೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹೂಳೆತ್ತಿದ್ದ ಕೆರೆಗಳು ಹಾಗೂ ಅಮೃತ ಸರೋವರಗಳು ಮಳೆ ನೀರಿನಿಂದ ತುಂಬಿವೆ.
ಅಮೃತ ಸರೋವರ: ಕಳೆದ ಎರಡು ವರ್ಷಗಳ ಹಿಂದೆ ವಿವಿಧ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆರೆಗಳನ್ನು ಅಮೃತ ಸರೋವರಗಳನ್ನಾಗಿಸಲು ಸರಕಾರದಿಂದ ನಿರ್ದೇಶನಗಳು ಬಂದಿದ್ದು, ಈ ಅಮೃತ
ಸರೋವರಗಳನ್ನು ಹೂಳು ತೆಗೆದು, ಬದು ನಿರ್ಮಾಣ, ಕಲ್ಲಿನಿಂದ ಪಿಚ್ಚಿಂಗ್ ಮಾಡಿ ಅಭಿವೃದ್ಧಿ ಸ್ಪರ್ಶ ನೀಡಲಾಗಿತ್ತು. ಈ ಕೆರೆಗಳಲ್ಲಿ ಅಪಾರ ಪ್ರಮಾಣದ ಮಳೆ ನೀರು ಸಂಗ್ರಹಗೊಂಡು ಭರ್ತಿಯಾಗಿದೆ. ಕೆರೆಗಳ ಸುತ್ತಲಿನ ರೈತರ ಜಮೀನುಗಳಲ್ಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲಮಟ್ಟ ಹೆಚ್ಚಿದೆ.
ಫಲಶೃತಿ ಈ ವರ್ಷ ಜಿಲ್ಲೆ ತೀವ್ರ ಬರಗಾಲಕ್ಕೆ ತುತ್ತಾಗಿರುವುದರಿಂದ ಹಲ ಯೋಜನೆಯಡಿ ಮಳೆ ನೀರು ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಮುಖ್ಯವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೋರವೆಲ್ ಗಳಿಗೆ ರೀಚಾರ್ಜ್ ಪಿಟ್, ಸರ್ಕಾರಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಘಟಕ, ಹೊಸದಾಗಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳ ಅನುಷ್ಠಾನಕ್ಕೆ ಆದೇಶಿಸಲಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳಾದ ಕೆರೆ, ನಾಲಾ, ಹಳ್ಳಗಳಲ್ಲಿ ಮತ್ತು ಕೃಷಿ ಹೊಂಡ, ಬದುಗಳಲ್ಲಿ ಮಳೆ ನೀರು ಸಂಗ್ರಹವಾಗಿ ಅಂತರ್ಜಲ ಅಭಿವೃದ್ಧಿಗೆ ಸಹಕಾರಿಯಾಗಿದೆ. ಜಲಮೂಲ ಆಧಾರಿತ ಕಾಮಗಾರಿಗಳ ಅನುಷ್ಠಾನದಿಂದ ಜಾನುವಾರುಗಳಿಗೆ, ಕೆರೆಯ ಅಂಚಿನ ಪ್ರದೇಶದ ರೈತರಿಗೆ ಸಹಕಾರಿಯಾಗಿದೆ ಮತ್ತು ಜಿಲ್ಲೆಯ ಗ್ರಾಮೀಣ ಕೂಲಿ ಕಾರ್ಮಿಕ ಕುಟುಂಬಗಳಿಗೆ ನಿತ್ಯ ಕೆಲಸ ನೀಡಲಾಗಿದೆ. ಕಾಮಗಾರಿ ಅನುಷ್ಠಾನದಲ್ಲಿ ಮಹಿಳೆಯರು ಹೆಚ್ಚು-ಹೆಚ್ಚು ಭಾಗವಹಿಸಿ ಮಹಿಳಾ ಸಬಲೀಕರಣ ದ್ವಿಗುಣಗೊಂಡಿದೆ ಹಾಗೂ ಯೋಜನೆಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.
ನರೇಗಾ ಯೋಜನೆಯ ಮೂಲ ಆಶಯದಂತೆ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಜೊತೆಗೆ ಸರಕಾರಿ ಆಸ್ತಿಗಳ ಸೃಜನೆಗೆ ಮುನ್ನುಡಿ ಬರೆದ ಜಿಲ್ಲೆ, ನರೇಗಾ ಕೂಲಿಕಾರರ ಹಿತದೃಷ್ಟಿ ಕಾಯ್ದುಕೊಳ್ಳುವಲ್ಲಿಯೂ ಸಹ ಯಶಸ್ವಿಯಾಗಿದೆ. ಉದ್ಯೋಗ ಬೇಡಿಕೆಗೆ ತಕ್ಕಂತೆ ನರೇಗಾ ಕೂಲಿಕಾರರಿಗೆ ಕೆಲಸ ಒದಗಿಸಿ ಆರ್ಥಿಕ ಸಾವಲಂಬನೆಗೆ ಸಹಕಾರಿಯಾಗಿದೆ.
ಅಮೃತ ಸರೋವರದ ಅಂಗಳದಲ್ಲಿ ಹಾರಿದ ತಿರಂಗಾ: ಸರಕಾರದ ನಿರ್ದೇಶನಗಳಂತೆ ಕಳೆದ ಎರಡು ವರ್ಷಗಳಿಂದ ಪ್ರತಿ ವರ್ಷ ಅಗಸ್ಟ್ 15 ಸ್ವಾತಂತ್ರ್ಯೋತ್ಸವ ಹಾಗೂ ಜನವರಿ 26 ಗಣರಾಜ್ಯೋತ್ಸವ ದಿನಗಳಂದು ಅಮೃತ ಸರೋವರದ ಅಂಗಳದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಗಳ ಮಾಜಿ ಸೈನಿಕರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಗ್ರಾಮದ ಹಿರಿಯ ನಾಗರಿಕರಿಂದ ನೆರವೇರಿಸಲಾಗುತ್ತಿದೆ. ಅಲ್ಲದೇ “ಅಂತರಾಷ್ಟ್ರೀಯ ಯೋಗ ದಿನ ಜೂನ್ 21” ದಿನದಂದು ಅಮೃತ ಸರೋವರಗಳ ಅಂಗಳದಲ್ಲಿ ಆಚರಿಸುವುದು, “ವಿಶ್ವ ಪರಿಸರ ದಿನ”ದಂದು ಅಮೃತ ಸರೋವರ ಅಂಗಳದಲ್ಲಿ ವಿವಿಧ ಸಸಿಗಳನ್ನು ನೆಟ್ಟು ಪೋಷಿಸುವುದು ಹೀಗೆ ಅಮೃತ ಸರೋವರಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತಹ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.
ಒಟ್ಟಾರೆಯಾಗಿ, ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನರೇಗಾ ಕೂಲಿಕಾರರಿಂದ ಕೆರೆ, ನಾಲಾ, ಅಮೃತ ಸರೋವರಗಳ ಹೂಳೆತ್ತಲು ಪ್ರಥಮಾದ್ಯತೆ ನೀಡಲಾಗಿತ್ತು. ಕಳೆದ ಒಂದು ವಾರದಿಂದ ಉತ್ತಮ ವರ್ಷಧಾರೆ ಸುರಿದ ಪರಿಣಾಮ ಕೆರೆ, ನಾಲಾಗಳು ತುಂಬಿ ಹರಿಯುತ್ತಿದ್ದು, ಅಂತರ್ಜಲ ವೃದ್ಧಿಯಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ವರ್ಷಧಾರೆಯಿಂದ ನರೇಗಾ ಜಲಮೂಲಗಳಿಗೆ ಜೀವಕಳೆ :ಸಿಇಓ ರಿಷಿ ಆನಂದ
Related Posts
Add A Comment

