– ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ತಾಲೂಕಿನಲ್ಲಿ ಶುಕ್ರವಾರ ಕಾರಹುಣ್ಣಿಮೆಯ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಬಸವೇಶ್ವರ ದೇವಸ್ಥಾನ ಮುಂಭಾಗ ಕಾರಹುಣ್ಣಿಮೆಯಂಗವಾಗಿ ತಾತ್ಕಾಲಿಕವಾಗಿ ಹಾಕಲಾಗಿರುವ ಅಂಗಡಿಗಳಲ್ಲಿ ಜಾನುವಾರುಗಳಿಗೆ ಬೇಕಾದ ಸಾಮಗ್ರಿಗಳ ಮಾರಾಟ ಕಳೆದ ಕೆಲ ದಿನಗಳಿಂದ ನಡೆಯುತ್ತಿದೆ.
ಈ ಸಲ ಮಳೆ ಕೃಪೆಯಾಗಿರುವದರಿಂದ ರೈತ ಬಾಂಧವರು ಇದೀಗ ಮಳೆ ವಿರಾಮ ನೀಡಿದ್ದರಿಂದ ಹೆಚ್ಚಾಗಿ ಬಿತ್ತನೆ ಕಾರ್ಯದಲ್ಲಿ ತೊಡಗಿರುವದರಿಂದಾಗಿ ಜಾನುವಾರುಗಳಿಗೆ ಬೇಕಾದ ಸಾಮಗ್ರಿಗಳನ್ನು ಖರೀದಿಗೆ ಬರುವವರ ಸಂಖ್ಯೆ ವಿರಳವಾಗಿದೆ. ಗುರುವಾರ ಹೊನ್ನುಗ್ಗಿ ಇರುವದರಿಂದಾಗಿ ಹೆಚ್ಚು ರೈತ ಬಾಂಧವರು ಸಾಮಗ್ರಿಗಳನ್ನು ಖರೀದಿಸಲು ಬರುತ್ತಾರೆ ಎಂದು ಅಂಗಡಿಕಾರರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕೆಲ ರೈತ ಬಾಂಧವರು ತಮ್ಮ ಜೀವನಾಡಿ ಜಾನುವಾರುಗಳ ಹಬ್ಬ ಕಾರಹುಣ್ಣಿಮೆಯನ್ನು ಆಚರಿಸಲು ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಾರಹುಣ್ಣಿಮೆಯಂದು ಕರಿ ಹರಿಯುವ ಕಾರ್ಯಕ್ರಮದಲ್ಲಿ ಬಿಳಿ ಎತ್ತು ಮುಂದೆ ಬಂದರೆ ಹಿಂಗಾರಿ ಜೋಳ ಫಲವತ್ತಾಗಿ ಬರುವುದು. ಕರಿ ಎತ್ತು ಬಂದರೆ ಮುಂಗಾರಿ ಜೋಳ ಫಲವತ್ತಾಗಿ ಬರುವುದು ಎಂಬ ನಂಬಿಕೆ ರೈತ ಬಾಂಧವರಲ್ಲಿದೆ.
ಈಚೆಗೆ ಬಹುತೇಕರು ತಮ್ಮ ಹೊಲಗಳನ್ನು ಟ್ಯಾಕ್ಟರ್ ಮೂಲಕ ಬಿತ್ತನೆ ಮಾಡಿಸುವದರಿಂದ ಜಾನುವಾರುಗಳ ಸಂಖ್ಯೆ ಇಳಿಮುಖವಾಗಿದೆ. ಜಾನುವಾರುಗಳನ್ನು ಹೊಂದಿದ ರೈತ ಬಾಂಧವರು ಸಂಪ್ರದಾಯದಂತೆ ಕಾರಹುಣ್ಣಿಮೆಯಂದು ತಮ್ಮ ಎತ್ತುಗಳನ್ನು ಶೃಂಗಾರ ಮಾಡಿ ಪೂಜೆ ಮಾಡುತ್ತಾರೆ. ರೈತರು ತಮ್ಮ ಜಾನುವಾರುಗಳಿಗೆ ಬೇಕಾದ ವಸ್ತುಗಳನ್ನು ಬುಧವಾರ ಖರೀದಿಸುವ ದೃಶ್ಯ ಕಂಡುಬಂದಿತ್ತು.
ವಿವಿಧ ಹಗ್ಗಗಳಾದ ರೇಶ್ಮಿ ಹಗ್ಗ, ನೂಲು ಹಗ್ಗ , ಗರವರಿ ಹಗ್ಗ ರೂ.೨೦೦ ರಿಂದ ಹಿಡಿದು ೨೫೦ ರವರೆಗೆ ತಲಾ ಒಂದು ಕೆಜಿಗೆ ದರದಂತೆ, ಹಣೆಕಟ್ಟು ಒಂದು ಜೋಡಿಗೆ ೨೦೦ ರಿಂದ ೪೦೦ ರೂ., ಲಡ್ಡ್ ೬೦ ರಿಂದ ೧೦೦ ರೂ, ಡಿಸೈನ್ ಬಾರಕೋಲ ೨೦೦ ರೂ., ಗೊಂಡೆ ದೊಡ್ಡದ್ದು ರೂ.೫೦೦, ಸಣ್ಣದು ರೂ.೩೦೦, ಮೂಗುದಾನಿ ರೂ. ೧೦ ರಿಂದ ೫೦ ರೂ.ವರೆಗೆ,ಜತ್ತಗಿ ೧೫೦ ರಿಂದ ೨೦೦ ರೂ., ಕೊಡುಗಳ ಹಿತ್ತಾಳೆಯ ಕೊಂಬಣಸು ರೂ.೧೦೦೦,ಸ್ಟೀಲ್ ಕೊಂಬಣಸು ರೂ.೫೦೦, ಸಾದಾ ಕೊಂಬಣಸು ರೂ.೧೫೦ ಸೇರಿದಂತೆ ವಿವಿಧ ಸಾಮಗ್ರಿಗಳ ಬೇರೆ ಬೇರೆ ದರ ಇದೆ. ರೈತ ಬಾಂಧವರು ತಮಗೆ ಬೇಕಾದ ಸಾಮಗ್ರಿಗಳನ್ನು ಚೌಕಾಸಿ ಮಾಡಿ ಖರೀದಿಸುತ್ತಿದ್ದಾರೆ.
ಖರೀದಿಗೆ ಆಗಮಿಸಿದ್ದ ತಾಲೂಕಿನ ಸೋಲವಾಡಗಿ ಗ್ರಾಮದ ರೈತ ಶಿವನಗೌಡ ಬಿದರಕುಂದಿ ಅವರನ್ನು ಮಾತನಾಡಿಸಿದಾಗ, ಕಾರಹುಣ್ಣಿಮೆಯ ಇರುವದರಿಂದ ನಮ್ಮ ಕರುಗಳಿಗೆ ಹಿಡಿಹಗ್ಗವನ್ನು ಖರೀದಿಸಲು ಬಂದಿದ್ದೇನೆ. ನಮಗೆ ಎತ್ತುಗಳನ್ನು ಮೇಯಿಸಲು ತೊಂದರೆಯಾಗಿರುವದರಿಂದಾಗಿ ಈಚೆಗೆ ಎತ್ತುಗಳನ್ನು ಮಾರಾಟ ಮಾಡಲಾಗಿದೆ. ಇಂದು ಜಾನುವಾರುಗಳ ಸಂಖ್ಯೆ ಇಳಿಮುಖವಾಗಿದೆ. ಇರುವ ಜಾನುವಾರುಗಳಿಗೆ ಅಲಂಕಾರ ಮಾಡಿ ಕರಿ ಹರಿಯುವ ಸಂಪ್ರದಾಯ ಮಾಡಲಾಗುತ್ತಿದೆ. ಈ ವರ್ಷ ಕಳೆದ ಸಲಕ್ಕಿಂತಲೂ ಉತ್ತಮ ಮಳೆಯಾಗಿರುವದರಿಂದಾಗಿ ಈಗಾಗಲೇ ಬಿತ್ತನೆ ಕಾರ್ಯ ಎಲ್ಲೆಡೆ ನಡೆಯುತ್ತಿದೆ. ನಮ್ಮ ೧೬ ಎಕರೆ ಜಮೀನಿನ ಪೈಕಿ ೬ ಎಕರೆಯಲ್ಲಿ ಸಜ್ಜೆ, ೩ ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಉಳಿದ ಜಮೀನಿನಲ್ಲಿ ಸಹ ಬಿತ್ತನೆ ಮಾಡಲಾಗುತ್ತಿದೆ. ಮಳೆ ಉತ್ತಮವಾಗಿರುವದರಿಂದಾಗಿ ರೈತ ಬಾಂಧವರು ಹರ್ಷದಿಂದ ಇದ್ದಾರೆ. ಈಗ ಮಳೆ ವಿರಾಮ ಕೊಟ್ಟಿರುವದರಿಂದಾಗಿ ಬಿತ್ತನೆ ಕಾರ್ಯ ಭರದಿಂದ ನಡೆಯುತ್ತಿದೆ. ಬಿತ್ತನೆಯಾದ ನಂತರ ಮತ್ತೆ ಮಳೆಯಾಗಬಹುದು ಎಂದು ನಿರೀಕ್ಷೆಯಿದೆ. ಈ ಸಲ ಉತ್ತಮ ಮಳೆಯಾಗಿ ಬೆಳೆ ಉತ್ತಮವಾಗಿ ಬರಲೆಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
ಜಾನುವಾರುಗಳ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಕೊಲ್ಹಾರದ ದಾವಲಸಾಬ ಅತ್ತಾರ ಅವರು, ಕಳೆದ ವರ್ಷಕ್ಕಿಂತ ಈ ಸಲ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿಲ್ಲ. ಈ ವರ್ಷ ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿರುವದರಿಂದಾಗಿ ಎಲ್ಲ ರೈತ ಬಾಂಧವರು ಹೆಚ್ಚಾಗಿ ಹೊಲದಲ್ಲಿ ಬಿತ್ತನೆಯಲ್ಲಿ ತೊಡಗಿರುವದರಿಂದಾಗಿ ವ್ಯಾಪಾರ ಅಷ್ಟಾಗಿ ಆಗುತ್ತಿಲ್ಲ. ಗುರುವಾರ, ಶುಕ್ರವಾರ ಹೆಚ್ಚು ವ್ಯಾಪಾರವಾಗುವ ನಿರೀಕ್ಷೆಯಿದೆ. ಈ ವರ್ಷ ಹೊಸದಾಗಿ ಡಿಸೈನ್ ಬಾರಕೋಲ ಮಾರಾಟಕ್ಕೆ ಬಂದಿದೆ. ಇದರ ಬಗ್ಗೆ ರೈತರಿಗೆ ಹೇಳಿ ಮಾರಾಟ ಮಾಡಲಾಗುವುದು. ಉಳಿದ ದಿನಗಳಲ್ಲಿಯೂ ನಾವು ಬಸವನಬಾಗೇವಾಡಿ ಪಟ್ಟಣ ಸೇರಿದಂತೆ ಪ್ರಮುಖ ಸಂತೆ ಮಾರುಕಟ್ಟೆ ಪ್ರದೇಶದಲ್ಲಿ ನಾವು ನಮ್ಮ ಅಂಗಡಿಗಳನ್ನು ಹಾಕಿ ರೈತ ಬಾಂಧವರ ಜಾನುವಾರುಗಳಿಗೆ ಬೇಕಾದ ಸಾಮಗ್ರಿಗಳನ್ನು ವರ್ಷಪೂರ್ತಿ ಮಾರಾಟ ಮಾಡುತ್ತಿರುವುದಾಗಿ ಹೇಳಿದರು.
Subscribe to Updates
Get the latest creative news from FooBar about art, design and business.
Related Posts
Add A Comment

