ಸಿಂದಗಿ: ದೇವರನಾವದಗಿ, ಕುಳೆಕುಮಟಗಿ, ಕುಮಸಗಿ, ದೇವಣಗಾವ ಮಾರ್ಗಗಳಿಗೆ ಸುಮಾರು ೧೦-೨೦ ವರ್ಷಗಳಿಂದ ಈ ಮಾರ್ಗಗಳಿಗೆ ಸಾರಿಗೆ ಸಂಪರ್ಕದ ವ್ಯವಸ್ಥೆ ಇರಲಿಲ್ಲ. ನಾನು ಶಾಸಕನಾದ ಮೇಲೆ ಈ ಕಾರ್ಯ ಮಾಡಿದ್ದೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ವತಿಯಿಂದ ಹಮ್ಮಿಕೊಂಡ ನೂತನ ಮಾರ್ಗಗಳ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮೋರಟಗಿ, ಕುಮಸಗಿ, ಹವಳಗಿ, ದೇವರನಾವದಗಿ, ದೇವಣಗಾವ, ಮಲಘಾಣ ಗ್ರಾಮಗಳ ಜನರ ಬಹುದಿನಗಳ ಬೇಡಿಕೆಯಾದ್ದ ಬಸ್ ಸಂಚಾರಕ್ಕೆ ಇಂದು ಚಾಲನೆ ದೊರಕಿದ್ದು ಜನರಲ್ಲಿ ಸಂತಸ ತಂದಿದೆ. ಚುನಾವಣಾ ಪೂರ್ವದಲ್ಲಿ ಈ ಭಾಗದ ಜನರಿಗೆ ಈ ಮಾರ್ಗಗಳ ಮೂಲಕ ಬಸ್ಸಿನ ಸೌಲಭ್ಯವನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದೆ. ಆ ಕೊಟ್ಟ ಮಾತಿನಂತೆ ಇಂದು ಈ ಮಾರ್ಗಗಳ ಮೂಲಕ ಬಸ್ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ನುಡಿದಂತೆ ನಡೆದಿದ್ದೇನೆ. ಶಕ್ತಿ ಯೋಜನೆ ಬಂದ ಮೇಲೆ ಸಿಂದಗಿ ಮತಕ್ಷೇತ್ರದಲ್ಲಿ ಇಲ್ಲಿಯವರೆಗೂ ೬೫ಲಕ್ಷಕ್ಕೂ ಅಧಿಕ ಮಹಿಳೆಯರು ಶಕ್ತಿ ಯೋಜನೆಯ ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಿಂದಗಿ ಘಟಕ ವ್ಯವಸ್ಥಾಪಕ ರೇವಣಸಿದ್ಧ ಖೈನೂರ, ಕಾಂಗ್ರೆಸ್ ಬ್ಲಾಕ್ ಸಮಿತಿ ತಾಲೂಕಾಧ್ಯಕ್ಷ ಸುರೇಶ ಪ್ರಜಾರ, ಪ್ರವೀಣ ಕಂಟಿಗೊಂಡ, ಸಿಬ್ಬಂದಿ ಈರಣ್ಣ ನಾವಿ ಸೇರಿದಂತೆ ಪಕ್ಷದ ಮುಖಂಡರು, ಸಾರಿಗೆ ಇಲಾಖೆಯ ಸಿಬ್ಬಂದಿಗಳು ಚಾಲಕರು, ನಿರ್ವಾಹಕರು ಇದ್ದರು.
“ನಾನು ಶಾಸಕನಾಗಿ ಈ ಗ್ರಾಮಗಳಿಗೆ ಭೇಟಿ ನೀಡಿದಾಗ ಮಹಿಳೆಯರು ಸರ್ಕಾರದ ಮಹತ್ವ ಯೋಜನೆಯಾದ ಶಕ್ತಿ ಯೋಜನೆ ನಮ್ಮ ಗ್ರಾಮಗಳಿಗೆ ತಲುಪುವಲ್ಲಿ ವಿಫಲವಾಗಿದೆ. ಕೂಡಲೇ ಹೊಸ ಬಸ್ ಸಂಚಾರ ಮಾರ್ಗಗಳನ್ನು ಪ್ರಾರಂಭಿಸಿ ನಮ್ಮ ಹಳ್ಳಿಗಳಿಗೂ ಸಹ ಶಕ್ತಿ ಯೋಜನೆ ಸದುಪಯೋಗ ಪಡೆಯುವ ಹಾಗೆ ಮಾಡಿ ಎಂದು ಅಹವಾಲವನ್ನು ನನ್ನ ಬಳಿ ಹೇಳಿಕೊಂಡಿದ್ದರು. ಕೂಡಲೇ ಅವರ ಮನವಿಗೆ ಸ್ಪಂದಿಸಿ ಈ ೩ ಹೊಸ ಮಾರ್ಗದ ಬಸಗಳ ಸಂಚಾರ ಪ್ರಾರಂಭಿಸಲಾಗಿದೆ.”
– ಅಶೋಕ ಮನಗೂಳಿ, ಶಾಸಕರು

