ವಿಜಯಪುರ: ನಗರದ ಮನಗೂಳಿ ಅಗಸಿ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಹಾಗೂ ಭವನಕ್ಕೆ ಹೆಚ್ಚುವರಿ ಜಾಗ ನೀಡಲು ಒತ್ತಾಯಿಸಿ, ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಕಳೆದ ೨೯ ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ, ಮಂಗಳವಾರ ಭೇಟಿ ನೀಡಿದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನೀಡಿರುವ ಭರವಸೆಗೆ ಸ್ಪಂಧಿಸಿ, ಧರಣಿ ಕೈಬಿಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಮನಗೂಳಿ ಅಗಸಿ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಉದ್ದೇಶಿತ ಜಾಗ ಸರ್ಕಾರದ್ದಾಗಿದೆ. ಆ ಜಾಗವನ್ನು ವಕ್ಪ ಆಸ್ತಿಯನ್ನಾಗಿ ಮಾಡಿಕೊಂಡಿದ್ದು, ಮರಳಿ ಸರ್ಕಾರಿ ಆಸ್ತಿಯನ್ನಾಗಿ ಮಾಡಲು ಎಲ್ಲಾ ರೀತಿಯ ಹೋರಾಟ ಮಾಡಲಾಗುವುದು. ಅದಕ್ಕೆ ಸಂಬಂಧಿಸಿದಂತೆ ಸಾಕಷ್ಟು ದಾಖಲೆಗಳು ಸಹ ನಮ್ಮಲ್ಲಿವೆ. ಸರ್ಕಾರಿ ಜಾಗ ಆದ ಬಳಿಕ, ಅದೇ ಜಾಗದಲ್ಲಿ ದಲಿತ ಸಮುದಾಯದವರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
೨೯ ದಿನಗಳ ಅಂಬೇಡ್ಕರ ಸಮುದಾಯ ಭವನದ ಹೋರಾಟ ಯಾವುದೇ ರೀತಿಯಿಂದ ವಿಫಲವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಇಡೀ ದೇಶದಲ್ಲೇ ವಕ್ಪ ಆಸ್ತಿಯನ್ನು ಮರಳಿ ತೆಗೆದುಕೊಳ್ಳುವ ದೊಡ್ಡ ಹೋರಾಟಕ್ಕೆ ಮುನ್ನುಡಿ ಬರೆಯಲಿದೆ. ಇಡೀ ದೇಶದಲ್ಲಿರುವ ವಕ್ಪ ಆಸ್ತಿಯನ್ನು ಮರಳಿ ಸರ್ಕಾರಕ್ಕೆ ಪಡೆದುಕೊಂಡು, ಅದರಲ್ಲಿ ದಲಿತರು, ಹಿಂದುಳಿದವರು, ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಪ್ರಧಾನಮಂತ್ರಿಗಳಿಗೂ ಪತ್ರ ಬರೆಯುವೆ ಎಂದು ಹೇಳಿದರು.
ನೆಹರು ಜಾರಿಗೆ ತಂದಿರುವ ಈ ಕೆಟ್ಟ ವಕ್ಪ ಬೋರ್ಡ ಕಾನೂನನ್ನು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ಕೂಡ ವಿರೋಧಿಸಿದ್ದರು. ಈ ವಕ್ಪ ಆಸ್ತಿ ಬಗ್ಗೆ ವಿಜಯಪುರ ಮಾತ್ರವಲ್ಲ, ಇಡೀ ದೇಶದಲ್ಲೇ ಬಹುದೊಡ್ಡ ಚರ್ಚೆ ನಡೆದಿದೆ ಎಂದು ತಿಳಿಸಿದರು.
ವಿಜಯಪುರ ನಗರದ ಮನಗೂಳಿ ರಸ್ತೆಯಲ್ಲಿರುವ ಸರ್ಕಾರಿ ಎರಡು ಎಕರೆ ಜಾಗದ ಪೈಕಿ ಒಂದು ಎಕರೆಯಲ್ಲಿ ಬಾಬು ಜಗಜೀವನ ರಾಮ ಹೆಸರಿನಲ್ಲಿ ಕಲ್ಯಾಣ ಮಂಟಪ ನಿರ್ಮಿಸಲಾಗುತ್ತಿದ್ದು, ಅದರ ಸುತ್ತಲೂ ಕಾಂಪ್ಲೆಕ್ಸ್ ಸಹ ನಿರ್ಮಾಣ ಮಾಡಲಾಗುವುದು. ಆ ಅಂಗಡಿಗಳನ್ನು ಎಸ್.ಸಿ, ಎಸ್.ಟಿ ಸಮುದಾಯವದರಿಗೆ ನೀಡಲಾಗುವುದು. ಅಲ್ಲದೆ, ಇದರ ಪಕ್ಕದಲ್ಲೇ ೧೦೦*೧೦೦ ಅಳತೆಯ ಜಾಗದಲ್ಲಿ ಅಂಬೇಡ್ಕರ್ ಸಮುದಾಯ ಭವನ ಸಹ ನಿರ್ಮಿಸಲಾಗುವುದು. ದಲಿತ ಸಮುದಾಯದವರಿಗೆ ಏನೇ ಅನ್ಯಾಯವಾದರೂ ನ್ಯಾಯ ಕೊಡಿಸಲು ಸದಾ ತಮ್ಮೊಂದಿಗೆ ಇರುವುದಾಗಿ ಭರವಸೆ ನೀಡಿದರು.
ಬಬಲೇಶ್ವರ ನಾಕಾ ಬಳಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನದಲ್ಲಿ ನಿರ್ಮಾಣ ಮಾಡಲಾದ ಸರ್ದಾರ ವಲ್ಲಭಬಾಯಿ ಪಟೇಲ್ ವಾಣಿಜ್ಯ ಸಂಕೀರಣದಲ್ಲಿ ಮುಸ್ಲಿಂ ಸಮುದಾಯದವರಿಗೆ ಅಂಗಡಿಗಳನ್ನು ಹಂಚಿಕೆ ಮಾಡಲು ಮೇಯರ್ ಹೇಳುತ್ತಿದ್ದಾರಂತೆ, ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದೆಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಬೇರೆಯವರಿಗೆ ನೀಡಿದರೆ, ಹೋರಾಟ ಮಾಡುವುದಾಗಿ ತಿಳಿಸಿದ್ದೇನೆ ಎಂದು ಹೇಳಿದರು.
ಧರಣಿ ಸ್ಥಳಕ್ಕೆ ತೆರಳುವ ಮೊದಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರ ಜೊತೆಗೆ ಸಭೆ ನಡೆಸಿದ ಶಾಸಕರು, ಸರ್ಕಾರಿ ಆಸ್ತಿಯನ್ನು ವಕ್ಪ ಬೋರ್ಡಗೆ ಮಾಡಿಕೊಂಡಿರುವುದನ್ನು ಮರಳಿ ಸರ್ಕಾರಕ್ಕೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ರಾಮನಗೌಡ ಪಾಟೀಲ ಯತ್ನಾಳ, ಬಿಜೆಪಿ ನಗರ ಎಸ್.ಸಿ ಮೋರ್ಚಾ ಅಧ್ಯಕ್ಷ ಪ್ರಕಾಶ ಚವ್ಹಾಣ, ಮಹಾನಗರ ಪಾಲಿಕೆ ಸದಸ್ಯರಾದ ವಿಠ್ಠಲ ಹೊಸಪೇಟ, ಜವಾಹಾರ ಗೋಸಾವಿ, ಪ್ರೇಮಾನಂದ ಬಿರಾದಾರ, ಮುಖಂಡರಾದ ಮಡಿವಾಳ ಯಾಳವಾರ, ರಾಜಶೇಖರ ಭಜಂತ್ರಿ, ದಾದಾಸಾಹೇಬ ಬಾಗಾಯತ, ನಾಗಪ್ಪ ಗುಗ್ಗರಿ, ರವಿ ಗರಸಂಗಿ, ತಮ್ಮಣ್ಣ ಗಂಜನ್ನವರ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
ಶಾಸಕ ಯತ್ನಾಳ ಭರವಸೆ; ಧರಣಿ ಕೈಬಿಟ್ಟ ಅಂಬೇಡ್ಕರ್ ಅಭಿಮಾನಿಗಳು
Related Posts
Add A Comment

