ವಿಜಯಪುರ: ಮತ್ತಿಹಳ್ಳಿ ಮದನಮೋಹನ ಪತ್ರಿಕೋದ್ಯಮದ ಸರ್ವಕಾಲಿಕ ಆದರ್ಶ ಪತ್ರಕರ್ತರಾಗಿದ್ದರು. ಸುಮಾರು ೪೫ ವರ್ಷಗಳ ವೃತ್ತಿ ಬದುಕಿನಲ್ಲಿ ಯಾವುದೇ ಭಿಡೆ ಇಲ್ಲದೆ ಬರೆದವರು. ಅವರು ಪತ್ರಿಕೋದ್ಯಮದ ವಿಶ್ವಕೋಶವೇ ಆಗಿದ್ದರು ಎಂದು ಹಿರಿಯ ಪತ್ರಕರ್ತ ಗೋಪಾಲ ನಾಯಕ ಹೇಳಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಇತ್ತೀಚೆಗೆ ಮೃತಪಟ್ಟ ಹಿರಿಯ ಪತ್ರಕರ್ತರಾದ ಮದನ್‌ಮೋಹನ ಹಾಗೂ ರಾಮೋಜಿರಾವ್ ಅವರಿಗೆ ಹಮ್ಮಿಕೊಂಡಿದ್ದ ಸಂತಾಪ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಮದನಮೋಹನ ನನ್ನ ಗುರುವಾಗಿದ್ದರು. ಸ್ನೇಹಿತರಾಗಿದ್ದರು. ಆತ್ಮಬಂಧುವಾಗಿದ್ದರು. ಅವರನ್ನು ಕಳೆದುಕೊಂಡು ಪತ್ರಿಕೋದ್ಯಮ ಬಡವಾಗಿದೆ ಎಂದರು.
ತಮ್ಮ ಅವರ ಬಾಂಧವ್ಯ ಐದು ದಶಕಗಳದ್ದು. ಆಗ ಮದನಮೋಹನ ಉತ್ತರ ಕರ್ನಾಟಕ, ಗೋವಾ ರಾಜ್ಯ ಸೇರಿದಂತೆ ೧೬ ಜಿಲ್ಲೆಗಳಿಗೆ ದಿ.ಹಿಂದೂ ಪತ್ರಿಕೆಯ ಪ್ರತಿನಿಧಿಯಾಗಿದ್ದರು. ಎಲ್ಲಿಯೇ ದೊಡ್ಡ ಕಾರ್ಯಕ್ರಮಗಳಾಗಲಿ, ಅನಾಹುತಗಳಾಗಲಿ, ಸಮಸ್ಯೆಗಳಾಗಲಿ ಅಲ್ಲಿ ಅವರು ಹಾಜರಿದ್ದು ವರದಿ ಮಾಡುತ್ತಿದ್ದರು. ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಲ್ಯಾಪ್ಟಾಪ್ ಬಳಸಿದವರು. ಅವರಲ್ಲಿ ದಾಖಲೆಗಳ ಬಹುದೊಡ್ಡ ಸಂಗ್ರಹವೇ ಇರುತ್ತಿತ್ತು. ಪ್ರತಿಯೊಂದು ಸೂಕ್ಷ್ಮ ವಿಷಯಗಳನ್ನು ಅಂಕಿ ಅಂಶಗಳನ್ನು ತಮ್ಮ ಡೈರಿಯಲ್ಲಿ ಬರೆದಿಟ್ಟುಕೊಳ್ಳುತ್ತಿದ್ದರು. ಅದಕ್ಕೆ ಅವರು ಪಂಚಾಂಗ ಎಂದು ತಮಾಷೆಯಾಗಿ ಕರೆಯುತ್ತಿದ್ದರು. ವಿಜಯಪುರಕ್ಕೆ ಬಂದಾಗಲೆಲ್ಲ ನಮ್ಮ ಮನೆಯಲ್ಲಿಯೇ ವಾಸ್ತವ್ಯ ಮಾಡುತ್ತಿದ್ದರು. ಅಂಥ ಸ್ನೇಹಿತನನ್ನು ಕಳೆದುಕೊಂಡು ನನಗೆ ಅನಾಥ ಪ್ರಜ್ಞೆ ಕಾಡುವಂತಾಗಿದೆ ಎಂದರು.
ಹಿರಿಯ ಪತ್ರಕರ್ತ ವಾಸುದೇವ ಹೆರಕಲ್ಲ ಮಾತನಾಡಿ, ಮತ್ತಿಹಳ್ಳಿ ಮದನಮೋಹನ ನಿರ್ಮೋಹಿಯಾಗಿದ್ದರು. ಅವರ ಪತ್ರಿಕೋದ್ಯಮದಲ್ಲಿ ಸಂತನಂತೆ ಬದುಕಿದರು. ಯಾರ ಋಣದಲ್ಲಿ ಇರಲಿಲ್ಲ. ನಿವೃತ್ತಿಯ ನಂತರದಲ್ಲಿ ಹುಬ್ಬಳ್ಳಿಯ ಪಂ.ಕೊರಳಹಳ್ಳಿ ನರಸಿಂಹಾಚಾರ್ಯರ ಶಿಷ್ಯತ್ವ ವಹಿಸಿ ಶ್ರೀಮನ್ನಾಯಸುಧಾ ಅಧ್ಯಯನ ಮಾಡುತ್ತಿದ್ದರು. ವೇದ ವೇದಾಂತದ ಬಗ್ಗೆ ಅಪಾರ ಗೌರವ ಹೊಂದಿದ್ದರು ಎಂದರು.
ಹಿರಿಯ ಪತ್ರಕರ್ತ ಅಶೋಕ ಯಡಹಳ್ಳಿ ಮಾತನಾಡಿ, ಕೆಲವೇ ದಿನಗಳ ಅಂತರದಲ್ಲಿ ಮದನಮೋಹನ ಹಾಗೂ ರಾಮೋಜಿರಾವ್ ಅವರನ್ನು ಕಳೆದುಕೊಂಡು ಮಾಧ್ಯಮ ಲೋಕ ಶೂನ್ಯ ಸ್ಥಿತಿಯನ್ನು ಅನುಸರಿಸುವಂತಾಗಿದೆ. ಪತ್ರಿಕೋದ್ಯಮದಲ್ಲಿ ಮದನಮೋಹನ ಅವರ ಹೆಸರು ಚಿರಸ್ಥಾಯಿ. ಅವರ ಆದರ್ಶಗಳನ್ನು ಪಾಲಿಸುವುದೇ ಅವರಿಗೆ ಸಲ್ಲಿಸುವ ಗೌರವ ಎಂದರು.
ಅದೇ ರೀತಿ ರಾಮೋಜಿರಾವ್ ದೃಶ್ಯಮಾಧ್ಯಮದ ಮೇರು ಪರ್ವತ. ಅವರ ಸಂಸ್ಥೆ ಪತ್ರಿಕೋದ್ಯಮಿಗಳ ಪಾಠಶಾಲೆಯಂತಿತ್ತು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಅಧ್ಯಕ್ಷತೆ ವಹಿಸಿ, ತಾವು ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮದನಮೋಹನ ಅವರ ಸಂಪರ್ಕ ದೊರಕಿತ್ತು. ನಾಲ್ಕಾರು ಬಾರಿ ಅವರನ್ನು ಭೇಟಿಯಾಗುವ ಸೌಭಾಗ್ಯವೂ ನನ್ನದಾಗಿತ್ತು. ಅವರ ಭಾಷಣಗಳಿದ್ದಲ್ಲಿಗೆ ನಾನು ಹುಡುಕಿಕೊಂಡು ಹೋಗುತ್ತಿದ್ದೆ. ಕಿರಿಯ ಪತ್ರಕರ್ತರನ್ನು ಸ್ನೇಹಿತರಂತೆ ಕಾಣುವ ದೊಡ್ಡ ಗುಣ ಅವರಲ್ಲಿತ್ತು ಎಂದು ಸ್ಮರಿಸಿದರು. ಜೊತೆಗೆ ರಾಮೋಜಿರಾವ್ ಕರ್ನಾಟಕದ ಅದೆಷ್ಟೋ ಪತ್ರಕರ್ತರ ಕುಟುಂಬಕ್ಕೆ ಅನ್ನದಾತರಾಗಿದ್ದನ್ನು ಮೆಲುಕು ಹಾಕಿದರು.
ಕಾನಿಪ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಖಜಾಂಚಿ ರಾಹುಲ ಆಪ್ಟೆ, ಶರಣು ಮರನೂರ, ಎಸ್.ಬಿ.ಪಾಟೀಲ ಮತ್ತಿತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

