ಎಕ್ಸಲಂಟ್ ಪ.ಪೂ ಕಾಲೇಜ್ ಸಮಾರಂಭದಲ್ಲಿ ರಾಜ್ಯ ಬಾಲ ವಿಕಾಸ ಅಕಾಡೆಮಿಯ ನೂತನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ

ವಿಜಯಪುರ: ಮಕ್ಕಳ ಸೇವೆಯೇ ಬಗವಂತನ ಸೇವೆ ಎಂದು ನಂಬಿರುವವನು ನಾನು. ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ನಾನೆಂದು ಭಾವಿಸದೆ, ಮಕ್ಕಳ ಪರಿಚಾರಕನಾಗಿ ಬಾಲ ಮಂದಿರದ ಬಡ ಮಕ್ಕಳ ಬದುಕು ಅರಳಿಸುವ ಕೆಲಸ ಮಾಡುವೆ. ಯಾವುದಕ್ಕೂ ಆಸೆಪಡದೆ, ನಾಡು ಗುರುತಿಸುವಂತೆ ಪ್ರಾಮಾಣಿಕ ಸೇವೆಗೈಯುವ ವಿಶ್ವಾಸ ನನ್ನದು ಎಂದು ಬಾಲ ವಿಕಾಸ ಅಕಾಡೆಮಿಯ ನೂತನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಭರವಸೆ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ವಿಕಾಸ ಸಂಸ್ಥೆಯ ಎಕ್ಸಲಂಟ್ ಪದವಿ ಪೂರ್ವವಿದ್ಯಾಲಯದಲ್ಲಿ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಜಗತ್ತಿನ ಸಂತೋಷದ ದೊಡ್ಡ ಮೂಲವೆಂದರೆ ಅದು ಮಗುವಿನ ನಿಷ್ಕಲ್ಮಷ ನಗು. ಅಂತಹ ಮಕ್ಕಳ ಸೇವೆ ಮಾಡುವ ಸೌಭಾಗ್ಯ ನನಗೆ ದೊರೆತಿದೆ. ಮಕ್ಕಳಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳನ್ನು ಸಂಪರ್ಕಿಸಿ, ಅಕಾಡೆಮಿಗೆ ಪುನಶ್ಚೇತನ ನೀಡಿ ನಾಡಿನ ಮಕ್ಕಳ ಮೊಗದಲ್ಲಿ ನಗೆ ಅರಳಿಸುವ ಇರಾದೆ ನನ್ನದು ಎಂಬ ಆಶಯ ವ್ಯಕ್ತಪಡಿಸಿದರು.
ಸ್ನೇಹ ತುಂಬ ಪವಿತ್ರವಾದದ್ದು. ನಿಮ್ಮ ಸಂಕಷ್ಠದ ಸಮಯದಲ್ಲಿ ತಂದೆ – ತಾಯಿ ನಂತರ ನಿಮ್ಮ ಕೈ ಹಿಡಿಯುವವರು ನಿಮ್ಮ ಗೆಳೆಯರು ಮಾತ್ರ. ನನ್ನ ಬದುಕಿಗಿಂತ ನನ್ನ ಗೆಳೆಯರೇ ದೊಡ್ಡವರೆಂದು ಜೀವಿಸುತ್ತಿರುವವನು ನಾನು. ನೀವೆಲ್ಲ ಜಾತಿಯ ಸಂಕೋಲೆಗಳನ್ನು ಕಳಚಿ ವಿಶ್ವಮಾನವರಾಗಬೇಕು. ಹೃದಯವಂತ ಗೆಳೆಯರಾಗಬೇಕು ಎಂದು ಬಬಲೇಶ್ವರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಮಾರಂಭ ಉದ್ಘಾಟಿಸಿದ ನಿವೃತ್ತ ಆದರ್ಶ ಶಿಕ್ಷಕ ಚಂದ್ರಶೇಖರಯ್ಯ ಹಿರೇಮಠ ಮಾತನಾಡಿ, ಸಂಗಮೇಶ ಬಬಲೇಶ್ವರ ಅವರು ಲಾಭದಾಯಕ ಹುದ್ದೆಗಳನ್ನು ಬಿಟ್ಟು ಮಕ್ಕಳ ಭವಿಷ್ಯ ರೂಪಿಸುವ ಬಾಲ ವಿಕಾಸ ಅಕಾಡೆಮಿ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಅವರು “ಅಮ್ಮನ ಮಡಿಲು” ಟ್ರಸ್ಟ್ ಸ್ಥಾಪಿಸಿ ಆ ಮೂಲಕ ಅನೇಕ ತಬ್ಬಲಿ, ಬಡ ಮಕ್ಕಳಿಗೆ ಉಚಿತ ವಿದ್ಯೆ, ವಸತಿ ಕಲ್ಪಿಸಿ ಅವರ ಭವಿಷ್ಯಕ್ಕೆ ನೆರವಾಗುತ್ತಿರುವ ವಿಶಾಲ ಹೃದಯಿ ಎಂದು ಶ್ಲಾಘಿಸಿದರು.
ವಿಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ವ್ಹಿ.ಡಿ.ಮಾದನಶೆಟ್ಟಿ ಮಾತನಾಡಿ, ನಮ್ಮ ಜಿಲ್ಲೆಯ ಹೆಸರಾಂತ ಮಕ್ಕಳ ಸಾಹಿತಿ ಸಿಸು ಸಂಗಮೇಶ ಮೊದಲಾದ ಸಾಹಿತಿಗಳ ಹೋರಾಟದ ಪಲವಾಗಿ ೨೦೦೯ ರಲ್ಲಿ ಬಾಲ ವಿಕಾಸ ಅಕಾಡೆಮಿ ಸ್ಥಾಪನೆಯಾಯಿತು. ಇಂದು ಅದರ ಅಧ್ಯಕ್ಷರಾಗಿರುವ ಸಂಗಮೇಶ ಅವರು ಮಕ್ಕಳಿಗಾಗಿ ವಿವಿಧ ಯೋಜನೆಗಳು ಮತ್ತು ತರಬೇತಿ ಕೈಗೊಂಡು ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಸವರಾಜ ಕೌಲಗಿ ಮಾತನಾಡಿದರು.
ನಗರದ ಬಾಲಕರ ಸರಕಾರಿ ಪ.ಪೂ.ಕಾಲೇಜ್ ಉಪನ್ಯಾಸಕ ಶಿವಾನಂದ ಕಲ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜ್ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಸ್ವಾಗತಿಸಿ, ಪರಿಚಯಿಸಿದರು. ಕು.ಆಕಾಂಕ್ಷಾ ಪ್ರಾರ್ಥಿಸಿದರು. ಶರಣಗೌಡ ಪಾಟೀಲ ನಿರೂಪಿಸಿದರು. ರಮೇಶ ಬಾಗೇವಾಡಿ ವಂದಿಸಿದರು.

“ಬಾಲ್ಯದಿಂದಲೇ ಹೋರಾಟದ ಮನೋಭಾವ ರೂಢಿಸಿಕೊಂಡಿದ್ದ ಸಂಗಮೇಶ ಬಬಲೇಶ್ವರ ಅವರು “ಅಮ್ಮನ ಮಡಿಲು” ಟ್ರಸ್ಟ್ ಮೂಲಕ ಎಲೆಮರೆಯ ಕಾಯಿಯಂತೆ ಅನೇಕ ಅನಾಥ – ಬಡ ಮಕ್ಕಳ ಸೇವೆ ಮಾಡುತ್ತ ಬಂದವರು. ವಿದ್ಯಾರ್ಥಿಗಳಿಗೆ ಬಬಲೇಶ್ವರ ಅಂಥವರು ಮಾದರಿಯಾಗಬೇಕು.”
– ಬಸವರಾಜ ಕೌಲಗಿ
ಸಂಸ್ಥಾಪಕ ಚೇರಮನ್, ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳು, ವಿಜಯಪುರ

” ನಾನು ಬಸವ ತತ್ವದಂತೆ ಬದುಕು ಕಟ್ಟಿಕೊಂಡವನು. ಸ್ವಾಭಿಮಾನ ತೊರೆದು ಬದುಕಿದ್ದರೆ ರಾಜಕೀಯದಲ್ಲಿ ೧೦ ವರ್ಷಗಳ ಹಿಂದೆಯೇ ಉನ್ನತ ಸ್ಥಾನಮಾನ ಹೊಂದುತ್ತಿದ್ದೆ. ನನ್ನನ್ನು ಅವಮಾನಿಸಿದವರಿಗೆ, ತಿರಸ್ಕಾರದಿಂದ ಕಂಡವರಿಗೂ ಸಹ ಕೇಡು ಬಯಸದೇ ಮುಂದೆ ಸಾಗುವವನು ನಾನು.”
– ಸಂಗಮೇಶ ಬಬಲೇಶ್ವರ
ನೂತನ ಅಧ್ಯಕ್ಷರು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡ

