ಕರ್ನಾಟಕ ಬಾಲ ವಿಕಾಸ ಅಕಾಡೆಮಿ ನೂತನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರಿಗೆ ’ಉದಯರಶ್ಮಿ’ ಬಳಗದ ಪರವಾಗಿ ಸನ್ಮಾನ

ವಿಜಯಪುರ: ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ನೂತನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ದಂಪತಿಗೆ ’ಉದಯರಶ್ಮಿ’ ಪತ್ರಿಕಾ ಬಳಗದ ಪರವಾಗಿ ಸಂಪಾದಕ ಇಂದುಶೇಖರ ಮಣೂರ ದಂಪತಿ ಸೋಮವಾರ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಂಪಾದಕರೊಂದಿಗೆ ಹಲವು ವಿಚಾರಗಳನ್ನು ಹಂಚಿಕೊಂಡ ಸಂಗಮೇಶ ಬಬಲೇಶ್ವರ ಅವರು, ಮೂರು ವರ್ಷದ ತಮ್ಮ ಅಧಿಕಾರಾವಧಿಯಲ್ಲಿ ಬಾಲ ಮಂದಿರದ ನಿರ್ಗತಿಕ ಮಕ್ಕಳ ಮನಸ್ಸು ಅರಳಿಸುವ ಜೊತೆ ಬಾವ, ಸಂಸ್ಕಾರ, ಸಂಸ್ಕೃತಿ ಕಲಿಸಿ ಸಮಾಜಕ್ಕೆ ಬೆಳಕಾಗುವಂತೆ ಹೊಸ ಭಾಷ್ಯ ಬರೆಯುವ ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ “ಅಮ್ಮನ ಮಡಿಲು” ಟ್ರಸ್ಟ್ ಸ್ಥಾಪಿಸಿ ಅನಾಥ ಮಕ್ಕಳಿಗೆ ವಸತಿ, ಶಿಕ್ಷಣ ನೀಡಿ ಆತ್ಮವಿಶ್ವಾಸ ತುಂಬಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ್ದೇನೆ ಎಂದರು.
ಈ ಹುದ್ದೆಗಾಗಿ ತಾವು ಯಾವುದೇ ತೆರನಾದ ಪ್ರಯತ್ನ ಮಾಡಿರಲಿಲ್ಲ. ಇದು ಅನಿರೀಕ್ಷಿತವಾಗಿ ಒದಗಿದ ಗೌರವ. ತಾವು ಈ ಹುದ್ದೆಗೆ ನ್ಯಾಯ ಒದಗಿಸಿ ಅಕಾಡೆಮಿಗೆ ಹೊಸ ಸ್ವರೂಪ ನೀಡುವ ಕನಸು ಹೊಂದಿರುವುದಾಗಿ ತಿಳಿಸಿದರು.
ಈ ವೇಳೆ ಶ್ರೀಮತಿ ಶ್ವೇತಾ ಸಂಗಮೇಶ ಬಬಲೇಶ್ವರ, ಪ್ರದೀಪ ಲಿಂಗದಳ್ಳಿ, ಗೌರಮ್ಮ ಬಬಲೇಶ್ವರ, ಮಾ.ಅಪ್ಪು ಬಬಲೇಶ್ವರ ಹಾಗೂ ’ಉದಯರಶ್ಮಿ’ ಪ್ರಕಾಶಕಿ ಶ್ರೀಮತಿ ಶೈಲಾ ಮಣೂರ ಇದ್ದರು.

” ಬಾಲ ವಿಕಾಸ ಅಕಾಡೆಮಿಗೆ ಸರ್ಕಾರದಿಂದ ಹೆಚ್ತು ಅನುದಾನ ತಂದು ರಚನಾತ್ಮಕ ಕಾರ್ಯಗಳಿಗೆ ಬಳಕೆ ಮಾಡುವೆ. ೦-೧೮ ವರ್ಷದ ಮಕ್ಕಳು ಈ ಅಕಾಡೆಮಿ ವ್ಯಾಪ್ತಿಗೆ ಬರಲಿದ್ದು ಅವರಿಗೆ ಫೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಕಾಡೆಮಿಯ ನೌಕರರಿಗೆ ಅಭದ್ರತೆ ಕಾಡದಂತೆ ನೋಡಿಕೊಳ್ಳುವೆ.”
– ಸಂಗಮೇಶ ಬಬಲೇಶ್ವರ
ನೂತನ ಅಧ್ಯಕ್ಷರು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡ
ಸರ್ಕಾರಿ ಕಾರು ಬಳಕೆ ಖಾಸಗಿ ಕಾರ್ಯಕ್ಕಲ್ಲ :ಬಬಲೇಶ್ವರ
ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ನೂತನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಸರ್ಕಾರಿ ಕಾರಿನಲ್ಲಿ ಬಾರದೇ ತಮ್ಮ ಸ್ವಂತ ವಾಹನದಲ್ಲಿ ಆಗಮಿಸಿ ಮಾದರಿಯ ನಡೆ ಅನುಸರಿಸಿದರು.
ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಿ ವಾಹನ ಅಕಾಡೆಮಿ ಕಾರ್ಯಗಳಿಗಾಗಿ ಅದರ ಅಧ್ಯಕ್ಷನಾದ ನನಗೆ ಉಪಯೋಗಿಸಲು ಸರ್ಕಾರ ನನಗೆ ಕೊಡಮಾಡಿದೆ. ಹೀಗಿರುವಾಗ ಅದನ್ನು ನನ್ನ ಕುಟುಂಬ ವರ್ಗದವರಿಗಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದರು.
ಅನೇಕ ಅಧಿಕಾರಿಗಳು, ಜನಪ್ರತಿನಿಧಿಗಳು ಸರ್ಕಾರಿ ವಾಹನಗಳನ್ನು ತಮ್ಮ ಖಾಸಗಿ ಕಾರ್ಯಗಳಿಗೆ ಎಗ್ಗಿಲ್ಲದೇ ಉಪಯೋಗಿಸುವ ಇಂಥವರು ನಮ್ಮ ನಡುವೆ ಇರುವಾಗ ಸಂಗಮೇಶ್ವರ ಬಬಲೇಶ್ವರ ಅವರ ನಡೆ ಅಂಥವರಿಗೆ ಮಾದರಿಯಾಗುವಂತಿದೆ.

