ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಕಟ್ಟುನಿಟ್ಟಿನ ಸೂಚನೆ
ವಿಜಯಪುರ: ಜಿಲ್ಲೆಯ ಅಭಿವೃದ್ದಿಗಾಗಿ ಎಲ್ಲ ಅಧಿಕಾರಿಗಳು ಚುರುಕಿನಿಂದ ಕಾರ್ಯನಿರ್ವಹಿಸುವ ಮೂಲಕ ಉತ್ತಮ ಆಡಳಿತ ನೀಡಬೇಕು. ಅಭಿವೃದ್ದಿ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಅಭಿವೃದ್ದಿ ವಿಷಯದಲ್ಲಿ ಅಸಡ್ಡೆ, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜರುಗಿದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ತ್ರೆöÊಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪ್ರತಿಯೊಂದು ಕಾರ್ಯಕ್ಕೆ ನೀತಿ ಸಂಹಿತೆ ನೆಪ ಹೇಳಬೇಡಿ ನೀತಿ ಸಂಹಿತೆ ಯಾವುದೇ ಅಭಿವೃದ್ದಿ ಕಾರ್ಯಗಳಿಗೆ ಅಡ್ಡಿ ಬರುವುದಿಲ್ಲ. ನೀತಿ ಸಂಹಿತೆ ನೆಪ ನೀಡಿ ನುಣುಚಿಕೊಳ್ಳಬೇಡಿ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸಚಿವರು ಅಧಿಕಾರಿಗಳಿಗೆ ತರಾಟೆಗೆ ತೆಗದುಕೊಂಡರು.
ಕೆಡಿಪಿ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳ ನಿರ್ದೇಶನವಿರುವ ಹಿನ್ನಲೆಯಲ್ಲಿ ಉತ್ತಮ ಆಡಳಿತ ಒದಗಿಸಲು ಅಧಿಕಾರಿಗಳು ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಅವರು ಹೇಳಿದರು.
ಇತ್ತೀಚೆಗೆ ನಗರದ ಇಂಡಿ ರಸ್ತೆಯಲ್ಲಿರುವ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಮೂರು ಮಕ್ಕಳು ಬಿದ್ದು ಸಾವನ್ನಪ್ಪಿರುವ ಕುರಿತ ಘಟನೆಗೆ ಸಂಬಂಧಿಸಿದಂತೆ ಸಚಿವರು ಪ್ರಶ್ನಿಸಿ ಈ ಮಕ್ಕಳ ಸಾವಿಗೆ ಯಾರೂ ಹೊಣೆ, ಅಲ್ಲಿ ಮೊದಲೇ ಅಗತ್ಯ ಸುರಕ್ಷಾ ವ್ಯವಸ್ಥೆ ಕೈಗೊಂಡಿದ್ದರೆ ಈ ಅನಾಹುತವನ್ನು ತಪ್ಪಿಸಬಹುದಿತ್ತು. ಯಾವುದೇ ಅನಾಹುತವಾದ ಮೇಲೆ ಅಧಿಕಾರಿಗಳು ಎಚ್ಚರಿಕೆಯಾದರೆ ಹೇಗೆ ಎಂದು ಪ್ರಶ್ನಿಸಿದ ಸಚಿವರು, ಅಲ್ಲಿರುವ ಸೆಕ್ಯೂರಿಟಿ ಗಾರ್ಡಗಳನ್ನು ತೆಗೆದು ಹಾಕಿ ಎಂದು ಸೂಚನೆ ನೀಡಿದರು. ಇದಕ್ಕೆ ಆಯುಕ್ತರು, ಈಗಾಗಲೇ ಬೇರೆ ಸೆಕ್ಯೂರಿಟಿ ಗಾರ್ಡಗಳನ್ನು ನಿಯೋಜಿಸಲಾಗಿದೆ. ಸೂಕ್ತ ನಿಗಾ ಇಡಲು ಸಿಸಿಟಿವಿ ಸಹ ಅಳವಡಿಸಲಾಗಿದೆ ಹಾಗೂ ಎಲ್ಲ ಅಗತ್ಯ ಸುರಕ್ಷಾ ಕ್ರಮಗಳನ್ನು ಸಹ ವಹಿಸಲಾಗಿದೆ ಎಂದು ಹೇಳಿದರು.
ನಗರದಲ್ಲಿ ಗುಂಟಾ ನಿವೇಶನಗಳು ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಕ್ರಮ ವಹಿಸಬೇಕು. ಈಗಾಗಲೇ ೧೪೧ ಗುಂಟಾ ನಿವೇಶನಗಳಿದ್ದು, ನಿರಂತರವಾಗಿ ಗುಂಟಾ ನಿವೇಶನಗಳು ನಿರ್ಮಾಣವಾಗುತ್ತಿವೆ. ಗುಂಟಾ ನಿವೇಶನ ಕಡಿವಾಣಕ್ಕೆ ಗುಂಟಾ ನಿವೇಶನ ನಿರ್ಮಾಣ ಮಾಡುವ ಮಾಲೀಕರ ಮೇಲೆ ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರ ವಸತಿ ರಹಿತರಿಗೆ ಆಶ್ರಯ ಒದಗಿಸಲು ಆಶ್ರಯ ಮನೆಗಳನ್ನು ಹಂಚಿಕೆ ಮಾಡಿರುತ್ತದೆ. ಆದರೆ ಆಶ್ರಯ ಮನೆಗಳಲ್ಲಿ ನೈಜ ಫಲಾನುಭವಿಗಳು ವಾಸಿಸುವುದೇ ಇಲ್ಲ. ನೈಜ ಫಲಾನುಭವಿಗಳು ಮನೆಗಳಿಂದ ವಂಚಿತರಾಗಿದ್ದಾರೆ. ನಿಜವಾದ ಫಲಾನುಭವಿಗಳಿಲ್ಲದವರು ತಾವು ಪಡೆದ ಮನೆಗಳನ್ನು ಬೇರೊಬ್ಬರಿಗೆ ಬಾಡಿಗೆಗೆ ನೀಡಿರುವುದು ಅತಿ ಹೆಚ್ಚು ಆಗಿದೆ. ಇಂತಹ ಮನೆಗಳ ಕೂಲಕಂಕೂಷವಾಗಿ ಸಮೀಕ್ಷೆ ಮಾಡಿ, ಮನೆ ಪಡೆದುಕೊಂಡ ಮಾಲೀಕರ ಪಟ್ಟಿ ಸಿದ್ಧಪಡಿಸಿಕೊಂಡು ಸೂಕ್ತ ವರದಿಯನ್ನು ೪೫ ದಿನಗಳೊಳಗಾಗಿ ಸಲ್ಲಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದ ಸಚಿವರು ಈ ಕುರಿತು ವಿಶೇಷ ಮುತುವರ್ಜಿ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಗಾಲ ಆರಂಭವಾಗುವುದರಿಂದ ವಿದ್ಯಾರ್ಥಿಗಳ, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯಲ್ಲಿರುವ ವಿವಿಧ ಶಾಲಾ-ಕಾಲೇಜ್ ಕೊಠಡಿಗಳು, ಅಂಗನವಾಡಿ ಕಟ್ಟಡಗಳ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಕಟ್ಟಡಗಳು ಸುಸ್ಥಿತಿಯಲ್ಲಿರುವುದನ್ನು ಮನದಟ್ಟು ಮಾಡಿಕೊಳ್ಳಬೇಕು. ದುರಸ್ತಿಗೊಳಪಡುವ ಕಟ್ಟಡವನ್ನು ಸೂಕ್ತ ದುರಸ್ತಿಗೆ ಕ್ರಮ ವಹಿಸಬೇಕು. ದುರಸ್ತಿಗೆ ಯೋಗ್ಯವಲ್ಲದ ಕಟ್ಟಡಗಳನ್ನು ಡೆಮಾಲಿಸ್ ಮಾಡಲು ಕ್ರಮ ವಹಿಸಬೇಕು. ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ವಿದ್ಯಾರ್ಥಿಗಳ, ಮಕ್ಕಳ ವಿಷಯವಾಗಿರುವುದರಿಂದ ಎಚ್ಚರಿಕೆಯಿಂದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಅಧೀನದ ಪಿಡಿಓ, ಜಿಲ್ಲಾ ಪಂಚಾಯತ್ ಅಭಿಯಂತರ್‌ರೊಂದಿಗೆ ಇಂತಹ ಶಾಲಾ ಕೊಠಡಿಗಳಿಗೆ ಖುದ್ದಾಗಿ ಭೇಟಿ ನೀಡಿ ಸೂಕ್ತ ಪರಿಶೀಲನೆ ನಡೆಸಬೇಕು. ಯಾವುದೇ ಅನಾಹುತಗಳಾಗದಂತೆ ಜಿಲ್ಲಾಧಿಕಾರಿಗಳು ಸಹ ತೀವ್ರ ನಿಗಾ ಇಡುವಂತೆ ಸಚಿವರು ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ಸರ್ಕಾರದ ದೆಹಲಿಯವ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಅವರು ಮಾತನಾಡಿ, ಪದವಿಪೂರ್ವ ಇಲಾಖೆ ಕಟ್ಟಡಗಳಿಗಾಗಿ ಅನುದಾನ ಒದಗಿಸಿದರೂ ಸಹ ಕಳೆದ ಒಂದು ವರ್ಷಗಳಿಂದ ಕಾಮಗಾರಿಯಾಗದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಸಚಿವರು ಈ ಕುರಿತು ಮಾತನಾಡಿ, ಅನುದಾನವಿದ್ದರೂ ಸಹ ಕಾಮಗಾರಿ ಕೈಗೊಳ್ಳಲು ಯಾಕೆ ವಿಳಂಬ ಮಾಡುತ್ತೀರಿ. ಏನಾದರೂ ಸಮಸ್ಯೆಗಳಿದ್ದಲ್ಲಿ ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು, ಅವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದ ಅವರು, ಜಿಲ್ಲಾ ಪಂಚಾಯತ್ ಸಿಇಓ ಅವರೂ ಸಹ ಈ ಕುರಿತಂತೆ ಫಾಲೋಅಪ್ ಮಾಡಿ ಯಾವುದೇ ಅಡೆ-ತಡೆಯಾಗದಂತೆ ನೋಡಿಕೊಂಡು ಕಾಮಗಾರಿ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯಾದ್ಯಂತ ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ಕಬಳಿಕೆ ಪ್ರಕರಣಗಳು, ಅಕ್ರಮ ಮದ್ಯ ಮಾರಾಟ, ಗ್ಯಾಂಬಲಿಂಗ್, ಮಟಕಾ, ಬೆಟ್ಟಿಂಗ್ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಯಾರೇ ತಪ್ಪಿತಸ್ಥರಿದ್ದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿ, ಈಗಾಗಲೇ ಈ ಪ್ರಕರಣಗಳಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಅಧಿಕೃತವಾಗಿ ನೊಂದಣಿಯಾದ ಬಾಂಡ್ ರೈಟರ್‌ಗಳು ಮಾತ್ರ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ನೊಂದಣಾಧಿಕಾರಿಗಳ ಕಚೇರಿಯಲ್ಲಿ ಬಹು ದಿನಗಳಿಂದ ಒಂದೇ ಕಡೆ ಕಾರ್ಯನಿರ್ವಹಿಸುತ್ತಿದ್ದ ಡಾಟ ಎಂಟ್ರಿ ಆಪರೇಟರ್‌ಗಳನ್ನು ವಿವಿಧ ತಾಲೂಕುಗಳಿಗೆ ವರ್ಗಾವಣೆ ಮಾಡಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು. ಇದಕ್ಕೆ ಸಚಿವರು ಈ ವಿಷಯ ಕುರಿತಾಗಿಯೇ ವಿಶೇಷವಾಗಿ ಒಂದು ಸಭೆಯನ್ನು ಮುಂದಿನ ಎರಡ್ಮೂರು ದಿನಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಪ್ರಸಕ್ತ ವರ್ಷದ ಶಾಲಾ-ಕಾಲೇಜ್‌ಗಳು ಆರಂಭವಾಗಿರುವುದರಿಂದ ವಾಯುವ್ಯ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಸಂಬಂಧಿಸಿದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮನ್ವಯತೆ ಸಾಧಿಸಿಕೊಂಡು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬಸ್‌ಗಳ ವ್ಯವಸ್ಥೆ ಮಾಡಬೇಕು. ಅವಶ್ಯವಿದ್ದೆಡೆ ಬಸ್ ಸಂಚಾರ ಆರಂಭಿಸಿ ಅನುಕೂಲ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪಶು ಸಂಗೋಪನೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಸಭೆಗೂ ಮೊದಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ವಿನ್ಯಾಸಗೊಳಿಸಲಾದ ತಂತ್ರಾಂಶ ಹೊಂದಿರುವ ಮೊಬೈಲ್ ಫೋನ್‌ಗಳನ್ನು ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು . ಹಿರಿಯ ನಾರಿಕರು ಹಾಗೂ ವಿಕಲಚೇತನ ಅಭಿವೃದ್ದಿ ಇಲಾಖೆಯಿಂದ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿಕಲಚೇತನರಿಗೆ ಸಾಂಕೇತಿಕವಾಗಿ ಸಚಿವರು ವಿತರಿಸಿದರು.
ಸಭೆಯಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ದೇವರಹಿಪ್ಪರಗಿ ಶಾಸಕರಾದ ರಾಜುಗೌಡ ಪಾಟೀಲ, ವಿಧಾನಪರಿಷತ್ ಸದಸ್ಯರಾದ ಪ್ರಕಾಶ ರಾಠೋಡ, ಜಿಲ್ಲಾ ಪಂಚಾಯತ್ ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಕೊಟಗಸ್ತಿ ಹಾಗೂ ನೂರಅಹ್ಮದ ಅತ್ತಾರ,ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿನ್ಸೆಂಟ್ ಡಿ ಸೋಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

