ದೇವರಹಿಪ್ಪರಗಿ: ಸಾತಿಹಾಳ ಗ್ರಾಮದ ಎಸ್.ಸಿ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೊಳಚೆ ಹಾಗೂ ಮಳೆ ನೀರು ನಿಂತು ಸಾರ್ವಜನಿಕರು ನಡೆಯಲು ಬಾರದಂತಾಗಿದ್ದು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ತಾಲ್ಲೂಕಿನ ಸಾತಿಹಾಳ ಗ್ರಾಮದ ಎಸ್.ಸಿ.ಕಾಲೋನಿಗೆ ತೆರಳುವ ರಸ್ತೆಯನ್ನು ಈ ಮೊದಲೇ ಸಿ.ಸಿ ರಸ್ತೆಯಾಗಿ ನಿರ್ಮಿಸಿ ಸಾಕಷ್ಟು ಹಣ ಖರ್ಚು ಮಾಡಲಾಗಿದೆ. ಈಗ ಸಿ.ಸಿ ರಸ್ತೆ ಕಾಣದಂತಾಗಿದ್ದು ಕಳಪೆ ಕಾಮಗಾರಿಗೆ ನಿದರ್ಶನವಾಗಿದೆ. ಪ್ರತಿವರ್ಷ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆಯೇ ಗ್ರಾಮದ ರಸ್ತೆಗಳಲ್ಲಿ ಕೊಳಚೆ ಹಾಗೂ ಮಳೆ ನೀರು ನಿಂತು ಕೆಸರಿನ ಗದ್ದೆಗಳಂತಾಗುತ್ತಿವೆ. ಜೊತೆಗೆ ಮನೆಗಳಲ್ಲಿಯೂ ನೀರು ನುಗ್ಗುತ್ತಿದೆ.
ಸಾತಿಹಾಳ ಡೋಣಿ ನದಿ ತೀರದ ಗ್ರಾಮವಾಗಿದ್ದು ಎರೆಮಣ್ಣಿನಿಂದ ಕೂಡಿದ್ದಾಗಿದೆ. ಸ್ವಲ್ಪವೇ ಮಳೆ ಆದರೆ ಸಾಕು ರಸ್ತೆಗಳೆಲ್ಲಾ ಕೆಸರುಮಯವಾಗಿ ನಡೆಯಲು ಬಾರದಂತಾಗುತ್ತವೆ. ಇಂಥ ರಸ್ತೆಗಳಲ್ಲಿಯೇ ವೃದ್ಧರು, ಅಂಗವಿಕಲರು ನಡೆದಾಡಲು ಹರಸಾಹಸ ಪಡುವಂತಾಗಿದೆ. ಓಣಿಗಳೆಲ್ಲಾ ನಿಂತ ಗಲೀಜು ನೀರಿನಿಂದ ಗಬ್ಬೆದ್ದು ನಾರುತ್ತಿವೆ. ಪರಿಸ್ಥಿತಿ ಆಯೋಮಯವಾಗಿದೆ. ಇದು ಮುಂದೆ ಮಲೇರಿಯಾ, ಡೆಂಗ್ಯೂ, ಕಾಲರಾದಂತ ರೋಗಳಿಗೆ ಆಹ್ವಾನ ನೀಡುವಂತಿದ್ದು, ಈ ಕುರಿತು ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಕೇವಲ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಕೊಳ್ಳುತ್ತೇವೆ ಎಂಭ ಭರವಸೆ ಮಾತ್ರ ನೀಡುತ್ತಿದ್ದಾರೆ.
ಗ್ರಾಮದಲ್ಲಿನ ಎಲ್ಲ ರಸ್ತೆಗಳನ್ನು ಬರುವ ಸೋಮವಾರ ಒಳಗಾಗಿ ಸ್ವಚ್ಛಗೊಳಿಸಬೇಕು. ರಸ್ತೆಗಳ ಮೇಲೆ ನಿಂತ ಮಲೀನ ನೀರು ಸರಾಗವಾಗಿ ಸಾಗುವಂತೆ ಮಾಡಿ ರಸ್ತೆಗಳನ್ನು ಸ್ವಚ್ಛಗೊಳಿಸದಿದ್ದರೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಅಧ್ಯಕ್ಷ ಪ್ರಕಾಶ ಡೋಣೂರಮಠ, ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಸೇರಿದಂತೆ ಇತರರು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

