ಪ್ರಮುಖ ರಸ್ತೆಗಳಲ್ಲೇ ಕತ್ತಲು |ಸ್ಥಗಿತಗೊಂಡ ಟ್ರಾಫಿಕ್ ಸಿಗ್ನಲ್ ದೀಪಗಳು | ಜಾಣ ಕುರುಡಿನ ಅಧಿಕಾರಿಗಳು
–ಶಂಕರಲಿಂಗ ಜಮಾದಾರ
ಇಂಡಿ: ಕತ್ತಲೆ.. ಕತ್ತಲೆ.. ಬರೀ ಕತ್ತಲೆ.. ಇದು ಇಂಡಿ ಮಿನಿ ವಿಧಾನಸೌಧದ ರಸ್ತೆಯ ಹಣೆಬರಹ.
ಹೌದು! ಕತ್ತಲಿನ ದಾರಿಯಲ್ಲಿ ಹಲವು ತಾಲ್ಲೂಕು ಕಛೇರಿ ಹಾಗೂ ತಾಲ್ಲೂಕು ಆಡಳಿತದ ಚಂದದ ಮಿನಿ ವಿಧಾನ ಸೌಧದ ರಸ್ತೆ ಮತ್ತು ಕಛೇರಿಗಳು ಕಡು ಕತ್ತಲಲ್ಲಿ ನಿಂತಿವೆ. ಭವಿಷ್ಯದ ಜಿಲ್ಲಾ ಕೇಂದ್ರದ ಕನಸು ಕಾಣುತ್ತಿರುವ ಇಂಡಿ ತಾಲ್ಲೂಕು ಜನಸಂಖ್ಯೆಯಲ್ಲಿ ಜಿಲ್ಲೆಯಲ್ಲಿಯೇ ಮೊದಲ ಸ್ಥಾನ ಹೊಂದಿದೆ. ಆದರೆ ಸೌಲಭ್ಯಗಳಲ್ಲಿ ಹಿಂದುಳಿದದ್ದು ವಿಪರ್ಯಾಸವಾಗಿದೆ.
ಇಂಡಿ ಪಟ್ಟಣದ ಕತ್ತಲೆಯ ರಸ್ತೆಯ ಸಂಚಾರದ ನೈಜ ಕಥೆ ಇದಾಗಿದೆ.

ಪಟ್ಟಣದ ಮೂಲಭೂತ ಸೌಕರ್ಯಗಳಲ್ಲಿ ಅತೀ ಅಗತ್ಯವಾದವುಗಳಲ್ಲಿ ಬೀದಿ ದೀಪದ ಸೌಕರ್ಯವೂ ಪ್ರಮುಖವಾಗಿದೆ. ಆದರೆ ಇಂಡಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಲ್ಲಲ್ಲಿ ವಿದ್ಯುತ್ ದೀಪದ ಸಮರ್ಪಕ ನಿರ್ವಹಣೆ ಕೊರತೆಯಿಂದ ಬೀದಿ ದೀಪಗಳು ನೋಡಲು ಮಾತ್ರ ಎನ್ನುವಂತಿವೆ. ಆದರೆ ಉರಿಯುವುದಿಲ್ಲ. ಜನನಿಬಿಡ ರಸ್ತೆಗಳಲ್ಲಿ ಸುಮಾರು ದಿನಗಳಿಂದ ಜನರು ಕತ್ತಲಲ್ಲಿಯೇ ತಿರುಗಾಡುವಂತಹ ಕೆಟ್ಟ ಪರಿಸ್ಥಿತಿ ಎದುರಾಗಿದ್ದು, ಪಾದಚಾರಿಗಳು ಆತಂಕದಲ್ಲೇ ಸಂಚರಿಸುವಂತಾಗಿದೆ.
ಎಲ್ಲೆಲ್ಲಿ ಗಾಡಾಂಧಕಾರ..?
ಪಟ್ಟಣದ ತಾಲ್ಲೂಕು ಆಡಳಿತ ಸೌಧದ ರಸ್ತೆ, ಪಟ್ಟಣದ ಹೃದಯಭಾಗದ ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಜಗಜೀವನರಾಮ ವೃತ್ತ, ಟಿಪ್ಪು ಸುಲ್ತಾನ ವೃತ್ತ, ಮಹಾವೀರ ಸರ್ಕಲ್, ಎಸ್ ಬಿ ಐ ಬ್ಯಾಂಕ್ , ಅಗರಖೇಡ ರಸ್ತೆಯ ಸಿದ್ದಲಿಂಗ ಮಹಾರಾಜರ ದ್ವಾರ ಬಾಗಿಲು, ಅಪ್ಸರಾ ಹೊಟೆಲ್, ಗಜಾಕೋಶ ಆಸ್ಪತ್ರೆ ಎದುರು ಈ ಪ್ರದೇಶಗಳಲ್ಲೆಲ್ಲ ಸಂಪೂರ್ಣ ಕತ್ತಲು ಆವರಿಸಿಕೊಂಡಿದೆ. ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ವೃತ್ತ ದ ಹೈಮಾಸ್ಕನಲ್ಲಿ ಕೆಲವು ಬಲ್ಪ್ ಮಾತ್ರ ಉರಿಯುವುದರಿಂದ ಇನ್ನುಳಿದ ಭಾಗ ಕತ್ತಲಲ್ಲಿ ಮುಳುಗಿ ಹೋಗಿರುತ್ತದೆ. ಹಾಗಾಗಿ ಪಟ್ಟಣದ ಪ್ರಮುಖ ರಸ್ತೆಯ ಮಾರ್ಗವಾಗಿರುವ ವಿಜಯಪುರ, ಸಿಂದಗಿ, ಸ್ಟೇಷನ್ ರೋಡ, ಅಗರಖೇಡ ರಸ್ತೆಯ ಮಾರ್ಗದಲ್ಲಿರುವ ಉರಿಯದ ವಿದ್ಯುತ್ ದೀಪಗಳ ಬದಲಾವಣೆ ಅತೀ ಅವಶ್ಯಕವಾಗಿರುತ್ತದೆ.
ಕಗ್ಗತ್ತಲಲ್ಲಿ ತಾಲ್ಲೂಕು ಕಛೇರಿ ಮತ್ತು ಸರಕಾರಿ ಆಸ್ಪತ್ರೆ..

ತಾಲ್ಲೂಕು ಆಡಳಿತ ಸೌಧ, ಕ್ಷೇತ್ರ ಶಿಕ್ಷಣ ಇಲಾಖೆ ಕಛೇರಿ, ಜಿಲ್ಲಾ ಪಂಚಾಯತ ಕಾರ್ಯಾಲಯ, ಕೃಷಿ ಇಲಾಖೆಯ ಕಛೇರಿ, ಆರೋಗ್ಯ ಇಲಾಖೆಯ ಹಾಗೂ ತಾಲ್ಲೂಕು ಸರಕಾರಿ ಆಸ್ಪತ್ರೆ ಆವರಣದಲ್ಲಿ ವಿದ್ಯುತ್ ದೀಪಗಳು ಉರಿಯದೇ ಕತ್ತಲಾವರಿಸಿಕೊಂಡಿದೆ. ಇನ್ನು ಆರೋಗ್ಯದ ತುರ್ತು ಸೇವೆಗಾಗಿ ರಾತ್ರಿ ಸರಕಾರಿ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ದಿನದ ೨೪ ಘಂಟೆ ಸೇವೆ ಕೊಡುವ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಎದುರೂ ಸಹ ವಿದ್ಯುತ್ ದೀಪ ಉರಿಯದೆ ಇರುವುದು ತುಂಬಾ ನೋವಿನ ಸಂಗತಿಯಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ಒಟ್ಟಾರೆಯಾಗಿ ಸಮರ್ಪಕವಾಗಿ ಬೀದಿ ದೀಪಗಳಿಲ್ಲದೆ ಪಟ್ಟಣದ ಪ್ರಮುಖ ರಸ್ತೆಗಳು, ಹಾಗೂ ಮಹಾನ್ ನಾಯಕರ ಪುತ್ಥಳಿಗಳು ಕತ್ತಲಲ್ಲಿ ಕಾಣದಂತಾಗಿವೆ. ಸಾರ್ವಜನಿಕರು ಆಕ್ರೋಶ ಹೊರಹಾಕುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಪಡಿಸಬೇಕೆಂಬುದು ನಾಗರಿಕರ ಆಶಯವಾಗಿದೆ.

ಇನ್ನು ಬಸ್ ನಿಲ್ದಾಣದ ಬಳಿಯ ಪ್ರಮುಖ ವೃತ್ತದ ಬಳಿ ಇರುವ ಟ್ರಾಫಿಕ್ ಸಿಗ್ನಲ್ ದೀಪಗಳೂ ಸಹ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿವೆ. ಸಿಗ್ನಲ್ ದೀಪಗಳು ಸ್ಥಗಿತಗೊಂಡು ದಿನಗಳುರುಳಿದರೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕಿನ್ನೂ ಬಾರದಿರುವುದು ಸೋಜಿಗವಾಗಿದೆ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇನ್ನಾದರೂ ಸಿಗ್ನಲ್ ದೀಪಗಳ ಕಾರ್ಯಾರಂಭಕ್ಕೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬುದು ವಾಹನ ಸವಾರರ ಆಗ್ರಹವಾಗಿದೆ.