ಬಸವನಬಾಗೇವಾಡಿ: ರಾಜ್ಯದ ಸಾಂಸ್ಕ್ರತಿಕ ನಾಯಕ ಬಸವೇಶ್ವರರ ತತ್ವಗಳನ್ನು ಪ್ರತಿಯೊಬ್ಬರೂ ಮನಸಾಕ್ಷಿಯಾಗಿ ಅಳವಡಿಸಿಕೊಳ್ಳುವ ಮೂಲಕ ಅವರನ್ನು ಮನದ ಒಡೆಯನನ್ನಾಗಿ ಮಾಡಿಕೊಳ್ಳುವ ಅಗತ್ಯವಿದೆ ಎಂದು ಬಸವ ಸಮಿತಿಯ ಅರವಿಂದ ಜತ್ತಿ ಹೇಳಿದರು.
ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಬಸವೇಶ್ವರ ವಚನ ಶಿಲಾ ಮಂಟಪದಲ್ಲಿ ಗುರುವಾರ ಸಂಜೆ ಶ್ರೀಮಠದ ಹಿರಿಯ ಶ್ರೀಗಳಾದ ಚನ್ನಬಸವ ಸ್ವಾಮೀಜಿಗಳ ಅಭಿನಂದನಾ ಗ್ರಂಥ ನಿರಂಜನ ಜ್ಯೋತಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಅಂತರಂಗ-ಬಹಿರಂಗ ಶುದ್ಧಿ ಇಟ್ಟುಕೊಳ್ಳಬೇಕು. ನಮ್ಮೆಲ್ಲರ ಬದುಕು ಬಸವಮಯವಾಗಬೇಕು. ವಚನ ಸಾಹಿತ್ಯದ ತಾತ್ಪರ್ಯವನ್ನು ಅರಿತುಕೊಳ್ಳಬೇಕು. ವಚನ ಸಾಹಿತ್ಯ ವಿಜ್ಞಾನವಾಗಿದೆ. ಇಂದಿನ ಜನಾಂಗಕ್ಕೆ ಲಿಂಗಧಾರಣೆ ಮಾಡಿ ಲಿಂಗದ ಕಲ್ಪನೆ ಕೊಡಬೇಕು. ಅಂತರಂಗ ಶುದ್ಧಿಯಾಗಿ, ಲಿಂಗಸಾಕ್ಷಿಯಾಗಿ ಮಾತನಾಡುವ ಮೂಲಕ ಎಲ್ಲರೂ ಸಾರ್ಥಕ ಬದುಕನ್ನು ಸಾಗಿಸುವಂತಾಗಬೇಕು. ಬಸವ ಜಯಂತಿ ಆಚರಣೆ ರಾಷ್ಟ್ರಮಟ್ಟಕ್ಕೆ ಮುಟ್ಟುವಂತಾಗಬೇಕಿದೆ. ರಾಜ್ಯದ ಸಾಂಸ್ಕ್ರತಿಕ ನಾಯಕ ಬಸವೇಶ್ವರರರು ಪ್ರಜಾಪ್ರಭುತ್ವ ನಾಯಕನೂ ಆಗಿದ್ದಾನೆ ಎಂದರು.
ಗ್ರಂಥ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಮಾತನಾಡಿ, ಇಂಗಳೇಶ್ವರ ವಿರಕ್ತಮಠದಲ್ಲಿ ಹಿರಿಯ ಶ್ರೀಗಳಾದ ಚನ್ನಬಸವ ಸ್ವಾಮೀಜಿಗಳು ವಿಶ್ವಕ್ಕೆ ಮಾದರಿಯಾಗುವ ಬಸವೇಶ್ವರರ ವಚನ ಶಿಲಾ ಮಂಟಪ ನಿರ್ಮಾಣ ಮಾಡಿದ್ದು ಸ್ತುತ್ಯಾರ್ಹ ಕಾರ್ಯ. ವಚನ ಸಾಹಿತ್ಯ ಶಿಲೆಯಲ್ಲಿ ಇದ್ದರೆ ಅದು ಅಜರಾಮರವಾಗಿ ಇರುತ್ತದೆ ಎಂಬುವದು ಶ್ರೀಗಳ ಆಶಯ. ಅವರು ಪಾದಯಾತ್ರೆ ಮೂಲಕ ದೇಶದ ಅನೇಕ ಪುಣ್ಯಕ್ಷೇತ್ರಗಳಿಗೆ ಸಂಚರಿಸಿದ್ದಾರೆ. ತಮ್ಮ ೯೩ ನೇ ಇಳಿವಯಸ್ಸಿನಲ್ಲಿಯೂ ಅವರು ನಿರಂತರ ಸಂಚಾರ ಮಾಡುವ ಮೂಲಕ ಭಕ್ತರಿಗೆ ಆಶೀರ್ವಾದ ನೀಡುತ್ತಿರುವುದು ಎಲ್ಲರೂ ಭಾಗ್ಯಶಾಲಿಗಳಾಗಿದ್ದಾರೆ. ಇವರಿಗೆ ಅಭಿನಂದನೆ ಗ್ರಂಥ ಲೋಕಾರ್ಪಣೆಯಾಗುವ ಮೂಲಕ ಅವರ ಬದುಕು ಮುಂದಿನ ಪೀಳಿಗೆಗೆ ಮುಟ್ಟಿಸುವ ಕಾರ್ಯ ಕಿರಿಯ ಶ್ರೀಗಳು ಮಾಡಿಸಿದ್ದು ಶ್ಲಾಘನೀಯ ಎಂದರು.
ಸೋಪ ಮತ್ತು ಡಿಟರ್ಜಂಟ್ ಲಿಮಿಟೆಡ್ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡ ಮಾತನಾಡಿ, ಬಸವ ತತ್ವಗಳನ್ನು ಕೇಳಿ ತಲೆಯಲ್ಲಿ ಕಲ್ಮಶಗಳನ್ನು ಇಟ್ಟುಕೊಂಡು ಹೋಗುತ್ತಾರೆ. ಇದು ಸರಿಯಲ್ಲ. ಹಿಂದೆ ಗ್ರಾಮದಲ್ಲಿ ಭಾವನಾತ್ಮಕವಾಗಿ ಸಂಬಂಧಗಳನ್ನು ಬೆಳೆಸುವಲ್ಲಿ ಒಳ್ಳೆಯ ಸಂಸ್ಕ್ರತಿ ಇತ್ತು. ಇಂದು ಇದು ನಶಿಸಿಹೋಗುತ್ತಿರುವುದು ವಿಷಾದನೀಯ ಸಂಗತಿ. ಹಿಂದಿನ ಸಮಾಜದಲ್ಲಿ ಬಸವ ಜಾಗೃತಿ ಹೆಚ್ಚಿತ್ತು. ಇಂದು ಸಮಾಜ ಬಹಳ ಕೆಳಮಟ್ಟಕ್ಕೆ ಹೋಗುತ್ತಿದೆ. ಇಂದು ಬಸವ ಜಾಗೃತಿ ತುಂಬಾ ಅಗತ್ಯವಿದೆ. ವಿರಕ್ತಮಠದ ಚನ್ನಬಸವ ಸ್ವಾಮೀಜಿಗಳು ನಿರಂತರವಾಗಿ ಎಲ್ಲ ಜನರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಇವರು ಬಸವ ತತ್ವವನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡಿದ್ದಾರೆ. ಇವರು ದೀರ್ಘಕಾಲ ನಮ್ಮೊಂದಿಗೆ ಇರುವಂತಾಗಲೆಂದು ಆಶಯ ವ್ಯಕ್ತಪಡಿಸಿದರು.
ನೆಲೋಗಿಯ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ವಿರಕ್ತಮಠದ ಪರಂಪರೆ ವಿಶಿಷ್ಠವಾಗಿದೆ. ಲಿಂಗಾಯತ ಸಂಪ್ರದಾಯವನ್ನು ನಾಡಿನಲ್ಲಿ ಬಹಳಷ್ಟು ಮಠಗಳು ಮುಂದುವರಿಸಿಕೊಂಡು ಹೋಗುತ್ತಿವೆ. ಲಿಂಗಾಯತ ಮಠಗಳು ಕೊಡುಗೆ ಅಪಾರ. ಬಸವಣ್ಣನವರು ನೀಡಿದ ಕಾಯಕ-ದಾಸೋಹವನ್ನು ಮಠಗಳು ಮುಂದುವರಿಸಿಕೊಂಡು ಹೋಗುತ್ತಿವೆ. ಇಂದಿನ ಕಾಲದಲ್ಲಿ ನಾಡಿನಲ್ಲಿ ಅನೇಕ ದುರಂಹಕಾರಿ ಸ್ವಾಮೀಜಿಗಳಿದ್ದಾರೆ. ಅವರು ಭಕ್ತರೊಂದಿಗೆ ಹೇಗೆ ಇರಬೇಕು. ಮಠಗಳನ್ನು ಹೇಗೆ ಇಟ್ಟುಕೊಳ್ಳಬೇಕೆಂಬ ಅರಿವು ಇಲ್ಲ. ಇಂಗಳೇಶ್ವರದ ೯೩ ನೇ ವಯಸ್ಸಿನ ಚನ್ನಬಸವ ಸ್ವಾಮೀಜಿಗಳು ಬಸವ ತತ್ವ ಅಳವಡಿಸಿಕೊಂಡು ಸರಳ ಜೀವನ ನಡೆಸುವ ಮೂಲಕ ಎಲ್ಲ ಸ್ವಾಮೀಜಿಗಳಿಗೆ ಮಾದರಿಯಾಗಿದ್ದಾರೆ. ಇವರ ಶತಮಾನೋತ್ಸವವನ್ನು ನಾವೆಲ್ಲರೂ ಕೂಡಿಕೊಂಡು ಆಚರಣೆ ಮಾಡುವಂತಾಗಲಿ ಎಂದರು.
ನಿಡಸೋಸಿಯ ಜಗದ್ಗುರು ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ನಾಡಿನಲ್ಲಿ ಮಠ-ಮಾನ್ಯಗಳು ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿವೆ. ಸಮಾಜದಲ್ಲಿರುವ ಅeನವನ್ನು ತೊಡೆದುಹಾಕುವಲ್ಲಿ ಮಠಗಳ ಪಾತ್ರ ಅಮೂಲ್ಯವಾಗಿದೆ. ಸಮಾಜಕ್ಕೆ ಶಿಕ್ಷಣವೆಂಬ ಅಪರಿಮಿತವಾದ ಬೆಳಕಿನ ಅಗತ್ಯವಿದೆ. ಎಲ್ಲ ಮಾರ್ಗದಲ್ಲಿ ವಚನ ಸಾಹಿತ್ಯವಿದೆ. ವಚನ ಸಾಹಿತ್ಯ ಮುಂದಿನ ಜನಾಂಗಕ್ಕೆ ಸಿಗುವಂತಾಗಬೇಕು. ಎಲ್ಲರೂ ಬಸವ ತತ್ವ ಮೈಗೂಡಿಸಿಕೊಳ್ಳಬೇಕು. ಮುಸ್ಲಿಂ ಬಾಂಧವರು ಬಸವ ತತ್ವ ಓದುತ್ತಿದ್ದಾರೆ. ಸ್ವಾಮೀಜಿಗಳು, ಭಕ್ತರು ಕೂಡಿಕೊಂಡು ನಮ್ಮ ಧರ್ಮವನ್ನು ಉಳಿಸಬೇಕೆಂದರು.
ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಸಿಂದಗಿಯ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ, eನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಇಳಕಲ್ಲದ ಗುರುಮಹಾಂತ ಸ್ವಾಮೀಜಿ ಮಾತನಾಡಿದರು.
ಡಾ.ಸೋಮನಾಥ ಯಾಳವಾರ ಅವರು ನಿರಂಜನ ಜ್ಯೋತಿ ಗ್ರಂಥವನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಚನ್ನಬಸವ ಸ್ವಾಮೀಜಿ, ಡಾ.ಸಿದ್ದಲಿಂಗ ಸ್ವಾಮೀಜಿ, ವಡವಡಗಿಯ ವೀರಸಿದ್ದ ಸ್ವಾಮೀಜಿ, ಪಡೇಕನೂರಿನ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ, ಮಸಬಿನಾಳದ ಸಿದ್ದರಾಮ ಶಿವಯೋಗಿಗಳು, ಚಡಚಣದ ಷಡಕ್ಷರಿ ಸ್ವಾಮೀಜಿ, ಲೋಕಾಪುರದ ಮಹಾಂತ ಸ್ವಾಮೀಜಿ, ಗ್ರಂಥದ ಸಂಪಾದಕ ಮಂಡಳಿಯ ಈರಣ್ಣ ಬೆಕಿನಾಳ, ವ್ಹಿ.ಡಿ.ಐಹೊಳ್ಳಿ, ಅಶೋಕಗೌಡ ಪಾಟೀಲ, ಜಂಭುನಾಥ ಕಂಚ್ಯಾಣಿ, ಸಿದ್ದಬಸವ ಕುಂಬಾರ, ನಿಂಗಪ್ಪ ಬೊಮ್ಮನಹಳ್ಳಿ ಇತರರು ಇದ್ದರು. ಬಿ.ಬಿ.ಬಾಗೇವಾಡಿ ಸ್ವಾಗತಿಸಿದರು. ಎಚ್.ಬಿ.ಬಾರಿಕಾಯಿ ನಿರೂಪಿಸಿದರು.
ಬಾಲ ಕಲಾವಿದರಾದ ಸಾಕ್ಷಿ ಪಾಟೀಲ, ಶ್ರಾವ್ಯ ಪಾಟೀಲ ಅವರ ಭರತನಾಟ್ಯ ಜನಮನಸೂರೆಗೊಂಡಿತ್ತು. ಚನ್ನಬಸವ ಸ್ವಾಮೀಜಿಗಳಿಗೆ ವಿವಿಧ ಭಕ್ತರಿಂದ ತುಲಾಭಾರ ಜರುಗಿತು.
Subscribe to Updates
Get the latest creative news from FooBar about art, design and business.
Related Posts
Add A Comment

