ವಿಜಯಪುರ : ಕೃಷ್ಣಾ ಮೇಲ್ದಂಡೆ ಯೋಜನೆಯ ವ್ಯಾಪ್ತಿಗೆ ಬರುವ ಎಲ್ಲ ಕಾಲುವೆಗಳಿಗೆ ಎಪ್ರೀಲ್ ೨೦೨೩ರ ಅಂತ್ಯದವರೆಗೆ ನೀರು ಹರಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ (ರಿ) ಜಿಲ್ಲಾ ಘಟಕ ವಿಜಯಪುರ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಪ್ರಾದೇಶಿಕ ಆಯುಕ್ತರು ಬೆಳಗಾವಿ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯ ವ್ಯಾಪ್ತಿಗೆ ಬರುವ ಎಲ್ಲ ಕಾಲುವೆಗಳಿಗೆ ಏಪ್ರಿಲ್ ಅಂತ್ಯದವರೆಗೆ ನೀರು ಹರಿಸುವುದನ್ನು ಮುಂದುವರೆಸಿ, ಬೇಸಿಗೆ ಸಂದರ್ಭದಲ್ಲಿ ಬೆಳೆಯುವ ಬೆಳೆಗಳಿಗೆ ಅನುವು ಮಾಡಿ ಕೊಡಬೇಕು. ಹಾಗೂ ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳನ್ನು ಹಾಗೂ ಬಾಂದಾರಗಳನ್ನು ಸಂಪೂರ್ಣ ಭರ್ತಿ ಮಾಡಬೇಕು. ಈ ಮೊದಲು ಮಾರ್ಚ್ ೩೦ ರವರೆಗೆ ಮಾತ್ರ ಕಾಲುವೆಗೆ ನೀರು ಹರಿಸುವುದಾಗಿ ನವೆಂಬರ ೨೩ ರಂದು ಬೆಂಗಳೂರಿನಲ್ಲಿ ನಡೆಸಿದ್ದ ಐ.ಸಿ.ಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಎಪ್ರೀಲ್ ಅಂತ್ಯದವರೆಗೂ ಎಲ್ಲ ಕಾಲುವೆಗಳಿಗೂ ನೀರು ಹರಿಸಲು ಸಂಘಟನೆ ವತಿಯಿಂದ ಹಲವು ಭಾರಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗಿತ್ತು. ನಮ್ಮ ಹೋರಾಟಕ್ಕೆ ಸ್ಪಂದಿಸಿದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾಗಿದ್ದ ಮಾಜಿ ಸಚಿವ ಸಿ.ಸಿ. ಪಾಟೀಲ ಮತ್ತು ಎಪ್ರೀಲ್ ೧೦ರವರೆಗೆ ಮಾತ್ರ ನೀರು ಹರಿಸುವುದನ್ನು ಮುಂದುವರೆಸುವುದಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ.
ಒಂದುವೇಳೆ ಎಪ್ರೀಲ್ ೧೦ಕ್ಕೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದರೆ ಬೇಸಿಗೆ ಬೆಳೆಗಳು ರೈತರ ಕೈಗೆ ಸಿಗುವದಿಲ್ಲ. ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದರಿಂದ ಮುಂದೆ ೨೦ ದಿನಗಳಲ್ಲಿ ಎಲ್ಲ ಬೆಳೆಗಳು ಹಾಳಾಗಿ ಹೋಗುತ್ತವೆ. ಜಲಾಶಯದಲ್ಲಿ ಈ ಸದ್ಯ ೩೦.೮.೮.೫ ಟಿ.ಎಂ.ಸಿ ನೀರು ಸಂಗ್ರಹವಿದೆ . ಆದ್ದರಿಂದ ಎಪ್ರೀಲ್ ಅಂತ್ಯದವರೆಗೂ ನೀರು ಹರಿಸಬೇಕು. ವಿಧಾನಸಭೆಯ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಜನ ಪ್ರತಿನಿಧಿಗಳು ಅಧಿಕಾರ ಕಳೆದು ಕೊಂಡಿದ್ದಾರೆ. ನೀರಾವರಿ ಸಲಹಾ ಸಮೀತಿಯು ಕೂಡಾ ರದ್ದಾಗುತ್ತದೆ. ಈಗ ಸದ್ಯ ನೀರು ಹರಿಸಲು ಆದೇಶ ನೀಡುವ ಅಧಿಕಾರ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಇದೆ. ಆದ್ದರಿಂದ ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕು. ಹಾಗೂ ಸದ್ಯ ಕೆ.ಪಿ.ಸಿ.ಎಲ್. ಮೂಲಕ ೧೦೪೧ ಕ್ಯೂಸೆಕ್ ನೀರು ಹಾಗೂ ಗೇಟ್ ಮೂಲಕ ನದಿ ಪಾತ್ರಕ್ಕೆ ನಾರಾಯಣಪುರ ಜಲಾಶಯಕ್ಕೆ ೧೦೪೦ ಕ್ಯೂಸೆಕ್ ನೀರು ಹರಿಬಿಡುವುದನ್ನು ಸ್ಥಗಿತಗೊಳಿಸಬೇಕು.
ಒಂದುವೇಳೆ ನಮ್ಮ ಈ ಬೇಡಿಕೆಗಳನ್ನು ಈಡೇರಿಸದೇ ಹೋದಲ್ಲಿ ಹಾಗೂ ಕ್ರಮ ಕೈಗೊಳ್ಳದೇ ಹೋದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಗಣನೆಗೆ ತೆಗೆದುಕೊಳ್ಳದೇ ಜಿಲ್ಲೆಯ ಎಲ್ಲ ರೈತರೊಂದಿಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭಧಲ್ಲಿ ತಾಲೂಕು ಗೌರವ ಅಧ್ಯಕ್ಷರಾದ ವೀರಣ್ಣ ದೇವರಗುಡಿ, ಹೊನಕೇರಪ್ಪ ತೆಲಗಿ, ಬಾಲಪ್ಪಗೌಡ ಲಿಂಗದಳ್ಳಿ, ವಿಠ್ಠಲ ಬಿರಾದಾರ, ಲಾಲಸಾಬ ಹಳ್ಳೂರ, ರ‍್ಯಾವಪ್ಪಗೌಡ ಪೋಲೇಶಿ, ಶಿವಪ್ಪ ಸುಂಟ್ಯಾನ, ದಾವಲಸಾಬ ನದಾಫ, ಗುರಲಿಂಗಪ್ಪ ಪಡಸಲಗಿ, ಮಲಗೆಪ್ಪ ಸಾಸನೂರ, ಸಂಗಪ್ಪ ಮುಂಡಗನೂರ, ಮಾಳಪ್ಪ ಬೂದಿಹಾಳ,ಯಮನೂರಿ ಸೌದಿ, ರಾಮಣ್ಣ ಮನ್ಯಾಳ, ಸಂಗನಗೌಡ ಬಿರಾದಾರ, ಪ್ರಭು ಹೂಗಾರ, ಸುಮಾರು ೫೦ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.
ಕಾಲುವೆಗಳಿಗೆ ಎಪ್ರೀಲ್ ಅಂತ್ಯದವರೆಗೆ ನೀರು ಹರಿಸಲು ರೈತ ಸಂಘ ಆಗ್ರಹ
Related Posts
Add A Comment