ಸೋರುವ ಕೊಠಡಿಗಳು | ಶಾಲಾ ಆವರಣದಲ್ಲಿ ನಿಲ್ಲುವ ನೀರು | ವಾಹನಗಳ ಓಡಾಟದ ಕಿರಿಕಿರಿ | ಶೌಚಾಲಯದ ಸಮಸ್ಯೆ

– ಚೇತನ ಶಿವಶಿಂಪಿ
ಮುದ್ದೇಬಿಹಾಳ: ಕೇವಲ ಅಂಕಗಳ ಹಿಂದೆ ಬೆನ್ನು ಹತ್ತಿರುವ ಸಾರ್ವಜನಿಕರು ತಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುವ ಶಾಲೆಯ ಆವರಣ ಅಚ್ಚುಕಟ್ಟಾಗಿರಬೇಕು. ಕೊಠಡಿಗಳ ಕೋಣೆಗಳಲ್ಲಿ ಗಾಳಿ ಬೆಳಕು ಸರಿಯಾಗಿ ಇರಬೇಕು ಎಂದು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗಿರುವ ಸಧ್ಯದ ಪರಿಸ್ಥಿತಿಯಲ್ಲಿ ಶಾಲೆಯ ಆವರಣ ಹೇಗಾದರೂ ಇರಲಿ, ಗಾಳಿ ಬೆಳಕು ಬಂದ್ರೂ ಸರಿ ಬರದಿದ್ರೂ ಸರಿ, ನಮ್ಮ ಮಗು ವಿದ್ಯಾಭ್ಯಾಸ ಮಾತ್ರ ಪಡೆಯಬೇಕು ಎಂದು ಅದೆಷ್ಟೋ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸರ್ಕಾರಿ ಶಾಲೆಗಳೇ ಆಸರೆ.
ಬಡ ಮಕ್ಕಳು ವಿದ್ಯಾರ್ಜನೆಯಿಂದ ವಂಚಿತರಾಗಬಾರದು ಮತ್ತು ದೇಶದ ಭವಿಷ್ಯದ ಹಿತದೃಷ್ಠಿಯಿಂದ ಸರ್ಕಾರ, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸಾಕಷ್ಟು ಯೋಜನೆಗಳನ್ನು ರೂಪಿಸಿಕೊಂಡಿದೆ. ಆದರೆ ಆ ಯೋಜನೆಗಳು ಮಾತ್ರ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂಬ ಸಾರ್ವಜನಿಕರ ಮಾತನ್ನು ತಳ್ಳಿಹಾಕುಂತಿಲ್ಲ. ಇದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ ನೋಡಿ.
ಮಳೆಯಾದರೆ ಸಾಕು ಸೋರುವ ಕೊಠಡಿಗಳು, ವಿದ್ಯಾರ್ಥಿಗಳಿಗಾಗಿ ಗೋಡೆಯ ಮೇಲೆ ಅಂಟಿಸಿದ ಕಲಿಕಾ ಚಿತ್ರಗಳ ಮೇಲೆಲ್ಲ ನೀರು ಸೋರಿ ಹಾಳು, ಆವರಣದಲ್ಲೆಲ್ಲ ಹತ್ತಾರು ದಿನಗಳವರೆಗೆ ನಿಲ್ಲುವ ನೀರು, ಈ ಅವ್ಯವಸ್ಥೆ ಒಂದೆಡೆಯಾದರೆ ಮತ್ತೊಂದೆಡೆ ಖಾಸಗಿ ಶಾಲೆಯ ವಾಹನಗಳ ಓಡಾಟದ ಕಿರಿಕಿರಿ ಇನ್ನೊಂದೆಡೆ, ಅಲ್ಲದೇ ಶೌಚಾಲಯದ ಸಮಸ್ಯೆ. ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ಪಟ್ಟಣದ ಮುಖ್ಯ ಬಜಾರನಲ್ಲಿರುವ ಸರ್ಕಾರಿ ಕನ್ನಡ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ.
ಮೇಲಿನ ಸಮಸ್ಯೆಗಳು ಒಂದು ರೀತಿಯದ್ದಾದರೆ ಮುಖ್ಯ ರಸ್ತೆಯಲ್ಲಿ ಶಾಲೆ ಇರೋದರಿಂದ ತಳ್ಳು ಗಾಡಿಗಳ ವ್ಯಾಪಾರಿಗಳು ಶಾಲೆಯ ಮುಖ್ಯ ದ್ವಾರದ ಬಳಿಯೇ ವ್ಯಾಪಾರಕ್ಕೆ ಮುಂದಾಗುತ್ತಾರೆ. ಆವರಣದಲ್ಲಿ ಕಸ ತಂದು ಎಸೆಯುತ್ತಾರೆ. ಇದೆಲ್ಲ ಸಮಸ್ಯೆಗಳಿಗೆ ಪರಿಹಾರ ಬೇಕಾಗಿದೆ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.
ಮೊದಲು ಪ್ರಾಥಮಿಕವಾಗಿದ್ದ ಈ ಶಾಲೆಯಲ್ಲಿ ಸನ್ ೨೦೦೫ ರಿಂದ ಪ್ರೌಢ ಶಾಲೆಯನ್ನೂ ಆರಂಭಿಸಲಾಗಿದೆ. ಈ ಶಾಲೆ ೧೭೫ ವರ್ಷದ ಹಳೆಯ ಶಾಲೆ. ಬ್ರಿಟೀಷರ ಕಾಲದಲ್ಲಿ ಸುಸಜ್ಜಿತ ಕಟ್ಟಡ ಹೊಂದಿ ಅಲ್ಲಿಂದ ಇಲ್ಲಿಯವರೆಗೆ ಸಾಕಷ್ಟು ಬಡ ಪ್ರತಿಭಾನ್ವಿತ ವಿಧ್ಯಾರ್ಥಿಗಳ ಬಾಳಿಗೆ ದಾರಿ ದೀಪವಾಗಿದ್ದು ಸಧ್ಯ ಅಭಿವೃದ್ಧಿಯಿಂದ ವಂಚಿತವಾಗಿದೆ.
ಸಮಸ್ಯೆಗಳ ಸರಮಾಲೆಯನ್ನೇ ಎದುರಿಸುತ್ತಿರು ಈ ಶಾಲೆಗೆ ಸಂಬಂಧಿಸಿದ ಅಧಿಕಾರಿಗಳು ಬೇಟಿ ನೀಡಿ ಸೂಕ್ತ ಶಾಶ್ವತ ಪರಿಹಾರ ಕಲ್ಪಿಸುವದರ ಜೊತೆಗೆ ಅಲ್ಲಲ್ಲಿ ಅಳಿವಿನ ಅಂಚಿನತ್ತ ಸಾಗುತ್ತಿರುವ ಸರ್ಕಾರಿ ಶಾಲೆಗಳಕಡೆಗೂ ಗಮನಹರಿಸಬೇಕು ಎನ್ನುವದು ನಮ್ಮ ಆಶಯ.
ಈ ಶಾಲೆಯ ಆವರಣದಲ್ಲಿ ಒಂದೆರಡು ಗೋದಾಮುಗಳಿದ್ದು, ಅಲ್ಲಿ ತಾಲೂಕಿನ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಬಟ್ಟೆ, ಪುಸ್ತಕಗಳನ್ನು ಸರಬರಾಜು ಮಾಡಲು ಬೃಹದಾಕಾರದ ವಾಹನಗಳು ಮತ್ತು ಖಾಸಗಿ ಶಾಲೆಗಳು ತಮ್ಮ ಪುಸ್ತಕಗಳನ್ನು ಹೊತ್ತೊಯ್ಯಲು ತಮ್ಮ ಬಸ್, ಆಟೋ, ಕಾರು, ಜೀಪುಗಳ ಮೂಲಕ ಬರುತ್ತಿದ್ದು ಮೊದಲೇ ಮಳೆಗೆ ಹಸಿಯಾದ ಭೂಮಿ ಈ ವಾಹನಗಳ ಓಡಾಟದಿಂದ ಮತ್ತಷ್ಟು ಅಲೆದಾಡಲು ಬಾರದಂತಾಗುತ್ತಿದೆ.
ಕೋಟ್ ೧ :
” ಎಲ್ಲ ಶಾಲೆಗಳಿಗೆ ಸಂಬಂಧಿಸಿದ ಪುಸ್ತಕ, ಬಟ್ಟೆ ಇಲ್ಲಿರುವ ಗೋದಾಮುಗಳಲ್ಲಿರುವದರಿಂದ ವಾಹನಗಳ ಓಡಾಟವಾಗಿ ಆವರಣ ಅಸ್ತವೆಸ್ತವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮೈದಾನವನ್ನು ಸರಿಪಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.”
– ಬಸವರಾಜ ಸಾವಳಗಿ. ಕ್ಷೇತ್ರ ಶಿಕ್ಷಣಾಧಿಕಾರಿ
ಕೋಟ್ ೨:
” ಪ್ರತೀ ವರ್ಷ ಮಳೆಗಾಲದಲ್ಲಿ ನಾವು ಈ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಇದರಿಂದ ವಿದ್ಯಾರ್ಥಿಗಳು ಆಟವಾಡಲು, ಪ್ರಾರ್ಥನೆ ಮಾಡಲು ಸಾಕಷ್ಟು ತೊಂದರೆಯಾಗುತ್ತಿದೆ. ಬಟ್ಟೆ, ಪುಸ್ತಕಗಳ ಗೋದಾಮನ್ನು ಬೇರೆಡೆ ಸ್ಥಳಾಂತರಿಸಲು ಮನವಿ ಕೊಟ್ಟರೆ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಈ ಗೋದಾಮುಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಆಗುತ್ತಿರುವ ತೊಂದರೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.”
– ಎಂ.ಎಸ್.ಕವಡಿಮಟ್ಟಿ. ಪ್ರೌಢ ಶಾಲಾ ಮುಖ್ಯ ಗುರು.
ಕೋಟ್ ೩:
” ನಾವು ಸೋರುವ ಕೊಠಡಿಗಳ, ಶೌಚಾಲಯದ, ಆವರಣದಲ್ಲಿ ನೀರು ನಿಲ್ಲುವ ಸಮಸ್ಯೆ ಮಾತ್ರವಲ್ಲದೇ ಶಾಲೆಗೆ ಕಂಪೌಂಡ್ ಗೆ ಹತ್ತಿಕೊಂಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಾಲಯ ಇರುವದಿಂದ ಅಲ್ಲಿಂದ ಬರುವ ದುರ್ವಾಸನೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆದಷ್ಟು ಬೇಗ ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸಿಕೊಡಿ.”
– ನಾಗರಾಜ ತೊಂಡಿಹಾಳ. ಪ್ರಾಥಮಿಕ ಶಾಲಾ ಮುಖ್ಯ ಗುರು.

