ಉಪನ್ಯಾಸಕರಿಗೆ ಪಪೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ. ಸಿ.ಕೆ. ಹೊಸಮನಿ ಸಲಹೆ
ಚಡಚಣ: ಪಿಯುಸಿ ದ್ವಿತೀಯ ವರ್ಷ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು ಈ ವರ್ಷದ ಪರೀಕ್ಷೆಯನ್ನು ವಿದ್ಯಾರ್ಥಿಗಳು ಧೈರ್ಯವಾಗಿ ಎದುರಿಸುವಂತೆ ಉಪನ್ಯಾಸಕರು ಅವರಿಗೆ ಮಾರ್ಗದರ್ಶನ ಮಾಡಬೇಕು ಎಂದು ಪಪೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ. ಸಿ.ಕೆ. ಹೊಸಮನಿ ಹೇಳಿದರು.
ಚಡಚಣದ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ(ಪಪೂ ವಿಭಾಗ) ವಿಜಯಪೂರ ಹಾಗೂ ಸಂಗಮೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಚಡಚಣ ಇವರ ಆಶ್ರಯದಲ್ಲಿ ನಡೆದ ಇಂಡಿ ಮತ್ತು ಚಡಚಣ ತಾಲೂಕುಗಳ ಪಪೂ ಕಾಲೇಜುಗಳ ಪ್ರಾಚಾರ್ಯರು ಮತ್ತು ಉಪನ್ಯಾಸಕರಿಗಾಗಿ ಹಮ್ಮಿಕೊಂಡ ಕಾರ್ಯಗಾರವನ್ನು ಉಧ್ಘಾಟಿಸಿ ಅವರು ಮಾತನಾಡಿದರು.
೨೪-೨೫ ಸಾಲಿನಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಶಾಲಾ ಶಿಕ್ಷಣ ಇಲಾಖೆ ಅತ್ಯಂತ ಕಟ್ಟುನಿಟ್ಟಾಗಿ ನಡೆಸಲಿರುವದರಿಂದ ವಿದ್ಯಾರ್ಥಿಗಳಿಗೆ ಈಗಿನಿಂದಲೆ ಮಾರ್ಗದರ್ಶನ ಮಾಡಬೇಕು. ಶಾಲಾ ಶಿಕ್ಷಣ ಇಲಾಖೆಯು ಪಿಯುಸಿ ಪರೀಕ್ಷೆಯಲ್ಲಿಯೂ ವೆಬ್ ಕಾಸ್ಟಿಂಗ ತಂತ್ರಜ್ಞಾನವನ್ನು ಉಪಯೋಗಿಸುತ್ತಿರುವದರಿಂದ ಎಲ್ಲ ಪ್ರಾಚಾರ್ಯರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಈಗಲೆ ಇದರ ಮಾಹಿತಿಯನ್ನು ನೀಡಬೇಕು ಮತ್ತು ಅವರು ನಕಲು ರಹಿತ ಪರೀಕ್ಷಾ ವ್ಯವಸ್ಥೆಯನ್ನು ದೈರ್ಯದಿಂದ ಎದುರಿಸುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಶೈಕ್ಷಣಿಕ ವರ್ಷದಿಂದ ತಾವು ಜಿಲ್ಲೆಯ ಎಲ್ಲ ಪಪೂ ಕಾಲೇಜುಗಳಿಗೆ ಮೇಲಿಂದ ಮೇಲೆ ಭೇಟಿ ನೀಡುವ ಯೋಜನೆಯನ್ನು ಹಾಕಿಕೊಂಡಿದ್ದು, ಪ್ರಾಚಾರ್ಯರು ಮತ್ತು ಉಪನ್ಯಾಸಕರು ಇಲಾಖೆಯ ಮಾರ್ಗ ಸೂಚಿಯ ಅನ್ವಯ ಕೆಲಸ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಸ್.ಎಸ್.ಚೋರಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯರಾದ ಎಸ್ .ಎಸ್. ತೆಗ್ಗಿಹಳ್ಳಿ, ಸಿ.ಕೆ.ಯಳಸಂಗಿ, ಎಸ್.ಎನ್ ನಾರಾಯಣಕರ, ಡಿ.ಬಿ.ತಿಕೋಟಿ, ಎಸ್.ಎಂ ಎಮ್ಮೆ ಆಗಮಿಸಿದ್ದರು.
ಸಂಗಮೇಶ್ವರ ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ಮನೋಜ ಕಟಗೇರಿ ಸ್ವಾಗತಿಸಿದರು, ಉಪನ್ಯಾಸಕ ಬಸವರಾಜ ಗೌರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಚ್.ಎಸ್.ಮಕಾಂದಾರ ವಂದಿಸಿದರು, ಡಾ. ಬಿ.ಎಸ್.ಅಂಡಗಿ ಕಾರ್ಯಕ್ರಮ ನಿರೂಪಿಸಿದರು.
ಅವಳಿ ತಾಲೂಕುಗಳ ನೂರಾರು ಉಪನ್ಯಾಸಕರು ಭಾಗವಹಿಸಿದ್ದರು.

