ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿದ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಅಭಿಮತ
ಮುದ್ದೇಬಿಹಾಳ: ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ನೀಡಿ ಬಾಲ ಕಾರ್ಮಿಕ ಪದ್ಧತಿಗೆ ಅಳವಡಿಸಿದಲ್ಲಿ ಅಂತವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವದು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಎಚ್ಚರಿಸಿದರು.
ಪಟ್ಟಣದ ಮುಖ್ಯ ಬಜಾರನಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಕಾರ್ಮಿಕ ಇಲಾಖೆ ಹಾಗೂ ಇತರ ಎಲ್ಲ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳ ಮೇಲೆ ದೈಹಿಕ ಬೆಳವಣಿಗೆ ಮಾತ್ರವಲ್ಲದೇ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತವೆ. ಹಾಗಾಗಿ ಬಾಲ ಕಾರ್ಮಿಕ ನಿಷೇದ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆ ಪ್ರಕಾರ ೧೪ ವರ್ಷದ ಒಳಗಿನ ಮಕ್ಕಳು ದುಡಿಯುವಂತಿಲ್ಲ. ಗ್ಯಾರೇಜ, ಕಾರ್ಖಾನೆ, ಅಂಗಡಿಗಳು ಸೇರಿದಂತೆ ಎಲ್ಲಿಯಾದರೂ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ಸುಳಿವು ಸಿಕ್ಕಲ್ಲಿ ಕೂಡಲೇ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಅಥವಾ ನ್ಯಾಯಾಲಯದಲ್ಲಿರುವ ತಾಲೂಕು ಕಾನೂನು ಸೇವಾ ಸಮಿತಿಗೆ ದೂರು ಸಲ್ಲಿಸಿ ಬಾಲ ಕಾರ್ಮಿಕ ಪದ್ಧತಿ ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ಸಾಮಾಜಿಕ ಪಿಡುಗು. ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ, ಶೈಕ್ಷಣಿಕವಾಗಿ ಬಲಿಷ್ಠರಾಗಬೇಕಾಗಿರುವದು ಅತ್ಯವಶ್ಯ. ಆದರೆ ನಮ್ಮಲ್ಲಿ ಬಡತನದ ಬೇಗೆ ನಿವಾರಿಸಿಕೊಳ್ಳಲು ಅದೆಷ್ಠೋ ಜನ ತಮ್ಮ ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಗೆ ತಳ್ಳಿದ್ದು ನಮ್ಮ ದೇಶದ ಅಭಿವೃದ್ಧಿಗೆ ದೊಡ್ಡ ಹೊಡೆತ ಬಿದ್ದಿದೆ. ಸರ್ಕಾರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುವ ಜೊತೆಗೆ ಬಟ್ಟೆ, ಪುಸ್ತಕ, ಅಹಾರ ಸಹ ನೀಡುತ್ತಿದ್ದು ಎಷ್ಟೇ ಕಷ್ಟ ಬಂದರೂ ಯಾರೂ ತಮ್ಮ ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಗೆ ತಳ್ಳಬಾರದು ಎಂದರು.
ಕಿರಿಯ ಶ್ರೇಣಿ ಸಹಾಯಕ ಸರ್ಕಾರಿ ಅಭಿಯೋಜಕ ಬಸವರಾಜ ಆಹೇರಿ ಮಾತನಾಡಿ ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವ ಉದ್ದೇಶದಿಂದ ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಸಾರ್ವಜನಿಕರನ್ನು ಜಾಗೃತರನ್ನಾಗಿಸಲು ಪ್ರತಿ ವರ್ಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಬಾಲ ಕಾರ್ಮಿಕ ಪದ್ಧತಿ ತಡೆಗಟ್ಟಲು ಸಹಾಯವಾಣಿ ಸಹ ಆರಂಭವಿದೆ. ಮಕ್ಕಳನ್ನು ದುಡಿಸಿಕೊಳ್ಳುವದು ಕಂಡು ಬಂದಲ್ಲಿ ಇದರ ಉಪಯೋಗ ಮಾಡಿಕೊಳ್ಳಬೇಕು ಎಂದರು.
ನ್ಯಾಯವಾದಿ ಎನ್.ಆರ್.ಮೊಕಾಶಿ ವಿಶೇಷ ಉಪನ್ಯಾಸ ನೀಡಿದರು.
ಕಾರ್ಮಿಕ ಇಲಾಖೆಯ ಸಿಬ್ಬಂದಿ ಗುಳಬಾಳ ಮಾತನಾಡಿದರು. ವಿದ್ಯಾರ್ಥಿಗಳ ಸಹಿತ ಎಲ್ಲರೂ ಪ್ರಮಾಣ ವಚನ ಸ್ವೀಕರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಮೂರ್ತಿ ಕುಂಬಾರ, ಹಿರಿಯ ಶ್ರೇಣಿ ಸಹಾಯಕ ಸರ್ಕಾರಿ ಅಭಿಯೋಜಕ ನಾಗರಾಜ ಪೂಜಾರ, ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಚ್.ಜಿ.ನಾಗೋಡ, ಕಾರ್ಯದರ್ಶಿ ಪಿ.ಬಿ.ಗೌಡರ, ಎಎಸ್‌ಐ ಕೆ.ಎಸ್.ಅಸ್ಕಿ, ನ್ಯಾಯಾಲಯದ ಸಿಬ್ಬಂದಿಗಳಾದ ಅರವಿಂದ ಕುಂಬಾರ ಮತ್ತು ಮಹಾಂತೇಶ ಹಚರಡ್ಡಿ, ತಾಲೂಕು ಪಂಚಾಯತ ಮ್ಯಾನೇಜರ ನಿರ್ಮಲಾ ತೋಟದ, ಶಾಲೆಯ ಮುಖ್ಯಗುರು ಎಂ.ಎಸ್.ಕವಡಿಮಟ್ಟಿ, ಶಿಕ್ಷಕ ಎಂ.ಬಿ.ಪಾಟೀಲ ಸೇರಿದಂತೆ ಶಿಕ್ಷಕರು-ವಿದ್ಯಾರ್ಥಿಗಳು ಇದ್ದರು.

