ವಿಶ್ವಕಾರ್ಮಿಕ & ಬಾಲಕಾರ್ಮಿಕ ವಿರೋಧಿ ದಿನಾಚರಣೆಯಲ್ಲಿ ನ್ಯಾಯಾಧೀಶೆ ಸೌಮ್ಯ ಹೂಲಿ ಮಾತು
ಬಸವನಬಾಗೇವಾಡಿ: ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ಯಾವುದೇ ಕಾರಣಕ್ಕೂ ಯಾವುದೇ ಕೆಲಸಕ್ಕೆ ದುಡಿಯುವದಕ್ಕೆ ಕಳಿಸುವದು ಕಾನೂನುರೀತ್ಯ ಅಪರಾಧ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕೆಂದು ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶೆ ಸೌಮ್ಯ ಹೂಲಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ವಿಶ್ವಕಾರ್ಮಿಕ ದಿನಾಚರಣೆ, ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಅವರು, ಜನಸಾಮಾನ್ಯರಲ್ಲಿ ಕಾನೂನು ಅರಿವು ಬಹಳ ಮುಖ್ಯ. ಎಲ್ಲರೂ ಕಾನೂನುಗಳ ಬಗ್ಗೆ ಅರಿವು ಮೂಡಿಸಿಕೊಂಡು ಜಾಗೃತರಾಗಿ ಬಾಲಕಾರ್ಮಿಕರರಾಗುವುದನ್ನು ತಡೆಗಟ್ಟುವಲ್ಲಿ ಪಾತ್ರ ವಹಿಸಬೇಕು. ಯಾವ ಮಕ್ಕಳು ಬಾಲಕಾರ್ಮಿಕರಾಗದಂತೆ ನೋಡಿಕೊಳ್ಳುವದು ಪ್ರತಿಯೊಬ್ಬರ ಜವಾಬ್ದಾರಿ. ಮಕ್ಕಳು ಯಾವುದೇ ಕಾರಣಕ್ಕೂ ಶಾಲೆ ಬಿಡದೇ ನಿರಂತರವಾಗಿ ಶಾಲೆಗೆ ಬಂದು ಉತ್ತಮ ಅಧ್ಯಯನ ಮಾಡುವ ಮೂಲಕ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕೆಂದರು.
ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಮಾತನಾಡಿ, ಸರ್ಕಾರ ಶಿಕ್ಷಣಕ್ಕೆ ಸಾಕಷ್ಟು ಆದ್ಯತೆ ನೀಡಿದೆ. ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಸಮವಸ, ಶೂ, ಸಾಕ್ಸ್, ಬಿಸಿಯೂಟ, ಹಾಲು ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಪಾಲಕರು ಇದನ್ನು ಅರಿತುಕೊಂಡು ಯಾವುದೇ ಕಾರಣಕ್ಕೂ ತಮ್ಮ ಮಕ್ಕಳನ್ನು ಶಾಲೆಯಿಂದ ದೂರ ಇಡಬಾರದು. ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸುವ ಮೂಲಕ ಅವರನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಯಾರೂ ಮಕ್ಕಳನ್ನು ದುಡಿಯಲು ಕಳುಹಿಸಬಾರದು ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ ಮಾತನಾಡಿ, ಕಾನೂನುಗಳ ಬಗ್ಗೆ ಎಲ್ಲರೂ ಅರಿತುಕೊಂಡು ಜಾಗೃತರಾಗುವದು ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಡಿಪಿಓ ನಿರ್ಮಲಾ ಸುರಪುರ ಮಾತನಾಡಿ, ಬಾಲ್ಯ ವಿವಾಹ ನಿಷೇಧ ಕಾಯ್ದೆ ತುಂಬಾ ಕಠಿಣವಾಗಿದೆ. ಎಲ್ಲಿಯಾದರೂ ಬಾಲ್ಯವಿವಾಹ ನಡೆಯುತ್ತಿದ್ದರೆ ಅದರ ಬಗ್ಗೆ ನಮ್ಮ ಇಲಾಖೆಯ ಗಮನಕ್ಕೆ ತಂದರೆ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಮಕ್ಕಳನ್ನು ದುಡಿಯಲು ಕಳುಹಿಸುವದು ಸಹ ತಪ್ಪು. ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟಬೇಕಾದರೆ ಶಿಕ್ಷಣ ತುಂಬಾ ಅಗತ್ಯವಿದೆ. ಪ್ರತಿಯೊಬ್ಬರೂ ಕಾನೂನು ತಿಳಿದುಕೊಂಡರೆ ಅಪರಾಧಗಳನ್ನು ತಡೆಗಟ್ಟಬಹುದು ಎಂದರು.
ವಕೀಲ ಆರ್.ಎಸ್.ಪವಾರ ಅವರು ವಿಶ್ವಕಾರ್ಮಿಕ ದಿನಾಚರಣೆ ಹಾಗೂ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.
ಕಾರ್ಮಿಕ ಇಲಾಖೆಯ ನಿರೀಕ್ಷಕ ಐ.ಹೆಚ್.ಇನಾಂದಾರ, ಸಹಾಯಕ ಸರ್ಕಾರಿ ಅಭಿಯೋಜಕ ರಾಹುಲ ಶಾಹ, ಪ್ರಭಾರಿ ಮುಖ್ಯಗುರು ವೇಣುಗೋಪಾಲ ಅಪಸಂಗಿ, ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ವಿಭಾಗದ ಉಪಪ್ರಾಂಶುಪಾಲ ರಮೇಶ ಪೂಜಾರಿ, ಪ್ರೌಢಶಾಲೆಯ ಸಹಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಂ.ಎಸ್.ಝಳಕಿ ಇತರರು ಇದ್ದರು. ಬಿ.ಎಂ.ಗಂಜಿಹಾಳ ಸ್ವಾಗತಿಸಿದರು. ಶಿವಕುಮಾರ ಹುಲಸೂರ ನಿರೂಪಿಸಿದರು. ವಿದ್ಯಾ ಮನಗೂಳಿ ವಂದಿಸಿದರು. ಕಾರ್ಯಕ್ರಮದಲ್ಲಿ ಬಾಲಕಾರ್ಮಿಕರ ವಿರೋಧಿ ದಿನಾಚರಣೆಯ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಕಾರ್ಯಕ್ರಮ ಮುನ್ನ ವಿಶ್ವ ಕಾರ್ಮಿಕರ ದಿನಾಚರಣೆ ಹಾಗೂ ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆಯ ಕುರಿತು ಜಾಗೃತಿ ಮೂಡಿಸಲು ಪ್ರಮುಖ ಬೀದಿಗಳಲ್ಲಿ ಜಾಥಾ ಜರುಗಿತು.

