ಗ್ರಾಪಂ ಜನಪ್ರತಿನಿಧಿಗಳಿಗೆವಿಜಯಪುರ ಜಿಪಂ ಸಿಇಒ ರಿಷಿ ಆನಂದ ಸೂಚನೆ
ದೇವರಹಿಪ್ಪರಗಿ: ಡೋಣಿ ನದಿಯಿಂದ ಯಾಳವಾರ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ನೀರು ಸರಾಗವಾಗಿ ಹೋಗಲು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ವಿಜಯಪುರ ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ಹೇಳಿದರು.
ತಾಲ್ಲೂಕಿನ ಸಾತಿಹಾಳ ಹಾಗೂ ಯಾಳವಾರ ಗ್ರಾಮಗಳ ಪಂಚಾಯಿತಿ ಹಾಗೂ ಸೇತುವೆಗಳಿಗೆ ಬುಧವಾರ ಭೇಟಿ ನೀಡಿ ಮಾತನಾಡಿದರು.
ಈ ವರ್ಷ ಅತೀ ಹೆಚ್ಚು ಮಳೆಯಾಗುವ ನಿರೀಕ್ಷೆ ಇರುವುದರಿಂದ ಗ್ರಾಮದಲ್ಲಿ ಮಣ್ಣಿನ ಮನೆ ಮತ್ತು ಶಿಥಿಲಗೊಂಡ ಮನೆಗಳನ್ನು ಗುರುತಿಸಿ ಅಂಥ ಮನೆಗಳ ಸದಸ್ಯರನ್ನು ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಜೊತೆ ಮಾತನಾಡಿ, ಮಳೆಯಿಂದಾಗಿ ಆಗಬಹುದಾದ ಅನಾಹುತಗಳನ್ನು ತಡೆಗಟ್ಟಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನ ತಾವೆಲ್ಲರೂ ಸೇರಿ ನಿರ್ಧರಿಸಬೇಕು ಎಂದು ಹೇಳಿದರು.
ನಂತರ ಯಾಳವಾರ ಸೇತುವೆಗೆ ಭೇಟಿ ನೀಡಿ, ಹೆಚ್ಚಾಗಿ ಮಳೆಯಾದ ಸಂದರ್ಭದಲ್ಲಿ ಗ್ರಾಮಸ್ಥರು ಸೇತುವೆಯಲ್ಲಿ ಸಂಚಾರ ಮಾಡದಂತೆ ನೋಡಿಕೊಳ್ಳಬೇಕು. ಇದರಿಂದಾಗುವ ಅನಾಹುತಗಳನ್ನು ಮುಂಜಾಗ್ರತ ಕ್ರಮ ಕೈಗೊಂಡು ಜಿಲ್ಲಾ ಪಂಚಾಯತಿ ವರದಿ ನೀಡಬೇಕು ಎಂದು ಪಿಡಿಓ ಅವರಿಗೆ ಸೂಚಿಸಿದರು.
ತಾಲ್ಲೂಕಿನ ಶಾಲಾ ಕಾಲೇಜುಗಳಲ್ಲಿ ಶಿಥಿಲಗೊಂಡ ಕೊಠಡಿಗಳನ್ನು ದುರಸ್ತಿ ಮಾಡಬೇಕು. ಅಪಾಯದಲ್ಲಿರುವ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸಬಾರದು ಎಂದು ಬಸವನ ಬಾಗೇವಾಡಿ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಸಾತಿಹಾಳ ಗ್ರಾಮದ ಸೇತುವೆ ಮೇಲ್ದರ್ಜೆಗೇರಿಸಲು ಶಿಫಾರಸ್ಸು ಮಾಡಿ ಎಂದು ಎಇ ಅವರಿಗೆ ಹೇಳಿದರು.
ಗ್ರಾಮಗಳ ಭೇಟಿ ನಂತರ ಪಟ್ಟಣದ ತಾಲ್ಲೂಕು ಪಂಚಾಯಿತಿಗೆ ಭೇಟಿ ನೀಡಿ, ಹಳೆಯ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಪಂಚಾಯಿತ ಕಚೇರಿಯನ್ನು ಹೊಂದಿದ್ದು, ಈ ಕಟ್ಟಡ ಹಳೆಯದಾಗಿದೆ. ಹೊಸ ತಾಲ್ಲೂಕು ಪಂಚಾಯಿತಿ ಸ್ಥಳಾವಕಾಶಕ್ಕೆ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಕಳುಹಿಸಿ ಎಂದು ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.
ಪ್ರತಿ ಶನಿವಾರ ತಾಲ್ಲೂಕು ಪಂಚಾಯಿತಿ ಸ್ವಚ್ಛತಾ ದಿನವನ್ನಾಗಿ ಆಚರಿಸಿ ಆವರಣವನ್ನು ಶುಚಿತ್ವದಿಂದ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ, ಸಹಾಯಕ ನಿರ್ದೇಶಕ ಶಿವಾನಂದ ಮೂಲಿಮನಿ (ಪಂಚಾಯತ್ ರಾಜ್), ಆರ್‌ಎನ್‌ಎಸ್ ಎಇ ಎಚ್.ಎಮ್.ಸಾರವಾಡ, ಬಸವನ ಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಪಿಆರ್‌ಇಡಿ ಎಇಇ ಜಿ.ವಾಯ್.ಮುರಾಳ, ಐಇಸಿ ಸಂಯೋಜಕ ಸಿದ್ದು ಕಾಂಬಳೆ, ಸಾತಿಹಾಳ ಪಿಡಿಓ ಎಂ.ಎನ್.ಕತ್ತಿ, ಯಾಳವಾರ ಪಿಡಿಓ ಮಲ್ಲು ಮಸಳಿ, ಗ್ರಾಮ ಪಂಚಾಯಿತಿ ಹಾಗೂ ತಾಲೂಕಾ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

