ವಿಜಯಪುರ: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಅತ್ಯಂತ ಹೇಯ ಕೃತ್ಯ, ಈ ಕೃತ್ಯದಲ್ಲಿ ಪಾಲ್ಗೊಂಡ ಎಲ್ಲರಿಗೂ ಕಠಿಣ ಶಿಕ್ಷೆ ಆಗಬೇಕು. ತಪ್ಪಿತಸ್ಥರೆಲ್ಲರನ್ನೂ ಬಂಧಿಸಿರುವ ಪೊಲೀಸ್ ಇಲಾಖೆಯ ಕಾರ್ಯವೈಖರಿ, ಈ ನೆಲದ ಕಾನೂನಿನ ಮೇಲೆ, ನಮ್ಮ ಹೆಮ್ಮೆಯ ಪೊಲೀಸ್ ಇಲಾಖೆಯ ಮೇಲೆ, ಶ್ರೀಸಾಮಾನ್ಯರ ವಿಶ್ವಾಸಾರ್ಹತೆಯನ್ನು ಇಮ್ಮಡಿಗೊಳಿಸಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಲೆಯಂತಹ ಕಾನೂನು ಬಾಹಿರವಾದ ಹೇಯ ಕೃತ್ಯದಲ್ಲಿ, ಪಾಲ್ಗೊಂಡವನು ಸೆಲೆಬ್ರಿಟಿ ಆಗಿರಲಿ, ಶ್ರೀಸಾಮಾನ್ಯನಾಗಿರಲಿ, ಎಲ್ಲರಿಗೂ ಕಾನೂನು ಒಂದೇ ಎಂಬ ಸ್ಪಷ್ಟ ಸಂದೇಶವನ್ನು ಪೊಲೀಸರು ಈ ಪ್ರಕರಣದಲ್ಲಿ ಪ್ರಚುರಪಡಿಸಿದ್ದಾರೆ. ನಟನಾಗಿ ಈ ನಾಡಿನಲ್ಲಿ ಮನೆ ಮಾತಾಗಿದ್ದ ದರ್ಶನ್, ಇಂಥ ಹೇಯ ಕೃತ್ಯದಲ್ಲಿ ಪಾಲ್ಗೊಂಡಿರುವುದು ನಾಚಿಕೆಗೇಡಿನ ಸಂಗತಿ, ಮೃತ ರೇಣುಕಾ ಸ್ವಾಮಿಯ ಧರ್ಮಪತ್ನಿ,ಆತನ ಮುಗ್ಧ ತಂದೆ, ತಾಯಿ, ಬಂಧುಗಳ ಅಕ್ರಂದನವನ್ನ ಮಾಧ್ಯಮದಲ್ಲಿ ನೋಡಿದವರೆಲ್ಲರ ಕಣ್ಣುಗಳು ಹನಿಗೂಡುತ್ತವೆ. ರೇಣುಕಾ ಸ್ವಾಮಿ ಚಾಟ್ ಮಾಡುವುದರ ಮೂಲಕ ಅಶ್ಲೀಲ ಮೆಸೇಜ್ ಗಳನ್ನು ಕಳಿಸಿದ್ದರೆ, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದಿತ್ತು, ಅದನ್ನು ಬಿಟ್ಟು ಆತನನ್ನ ಹೊತ್ತು ತಂದು, ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದು ಅತ್ಯಂತ ಅಮಾನವೀಯ ಕೃತ್ಯವಾಗಿದೆ. ಪರದೆಯ ಮೇಲೆ ಅನ್ಯಾಯದ ವಿರುದ್ಧ ಹೋರಾಡುವ, ಲಕ್ಷಾಂತರ ಜನ ಅಭಿಮಾನಿಗಳನ್ನ ಹೊಂದಿರುವ ದರ್ಶನ್, ಇಂಥಹ ಹೇಯ ಕೃತ್ಯದಲ್ಲಿ ಪಾಲ್ಗೊಳ್ಳುವುದರ ಮೂಲಕ ತಾನು ಪರದೆಯ ಮೇಲೆ ಮಾತ್ರ ಹೀರೋ, ನಿಜ ಜೀವನದಲ್ಲಿ ಜೀರೋ ಎನ್ನುವುದನ್ನು ತೋರಿಸಿಕೊಟ್ಟಿದ್ದಾನೆ. ಇದರಲ್ಲಿ ಪಾಲ್ಗೊಂಡ ಎಲ್ಲರಿಗೂ ಕಠಿಣ ಶಿಕ್ಷೆ ಆಗಬೇಕು ಎಂದು ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

