ಬಸವನಬಾಗೇವಾಡಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಈರಕಾರ ಮುತ್ಯಾ ದೇವಸ್ಥಾನದ ಈರಕಾರ ಮುತ್ಯಾರ ಜಡಿ ತೊಳೆಯುವ ಕಾರ್ಯಕ್ರಮ ಹಾಗೂ ಜಾತ್ರಾಮಹೋತ್ಸವ ಭಾನುವಾರ, ಸೋಮವಾರ ಎರಡು ದಿನಗಳ ಕಾಲ ಸಂಭ್ರಮ, ಸಡಗರದಿಂದ ಜರುಗಿತು.
ಜಾತ್ರಾಮಹೋತ್ಸವದಂಗವಾಗಿ ಭಾನುವಾರ ಡೊಳ್ಳುವಾದ್ಯಗಳ ಮೇಳಗಳೊಂದಿಗೆ ಪಲ್ಲಕ್ಕಿಯು ಶಿವಪ್ಪ ಈರಕಾರ ಮುತ್ಯಾರ ದೇವರಮನಿಯಿಂದ ಪಟ್ಟಣದ ಪ್ರಮುಖ ಬೀದಿಗಳ ಮೆರವಣಿಗೆ ಮೂಲಕ ಬಸವೇಶ್ವರರ ದೇವಸ್ಥಾನದ ಬಸವ ತೀರ್ಥ ಬಾವಿಗೆ ತೆರಳಿ ಗಂಗಸ್ಥಳ ಪೂಜೆ ನೆರವೇರಿಸಲಾಯಿತು. ನಂತರ ಮೂಲನಂದೀಶ್ವರ(ಬಸವೇಶ್ವರರ) ದೇವರ ದರ್ಶನ ಪಡೆದುಕೊಂಡ ನಂತರ ಪಲ್ಲಕ್ಕಿ ಉತ್ಸವ ಡೊಳ್ಳಿನ ವಾದ್ಯಮೇಳದೊಂದಿಗೆ ಬಸವೇಶ್ವರರ ಭಾವಚಿತ್ರದೊಂದಿಗೆ ಈರಕಾರ ಮುತ್ಯಾರ ದೇವಸ್ಥಾನಕ್ಕೆ ಸಂಜೆ ತಲುಪಿತು. ಭಾನುವಾರ ರಾತ್ರಿ ಇಡೀ ಸುಪ್ರಸಿದ್ದ ಡೊಳ್ಳಿನ ಹಾಡಕಿ ಕಾರ್ಯಕ್ರಮ ಜರುಗಿದವು.
ಪಟ್ಟಣದ ಶಿವಪ್ಪ ಮುತ್ಯಾರ ದೇವರಮನಿಯಿಂದ ಸೋಮವಾರ ಸಂಪ್ರದಾಯದಂತೆ ಶಿವಾನಂದ ಈರಕಾರ ಮುತ್ಯಾರನ್ನು ಡೊಳ್ಳಿನ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಈರಕಾರ ಮುತ್ಯಾರ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಶಿವಾನಂದ ಈರಕಾರ ಮುತ್ಯಾ ಅವರು ಈ ವರ್ಷದ ಮಳೆ-ಬೆಳೆ ಕುರಿತಾಗಿ ಹೇಳಿಕೆಗಳನ್ನು ನುಡಿದರು.
ಶಿವಾನಂದ ಈರಕಾರ ಮುತ್ಯಾರು ನುಡಿದ ಹೇಳಿಕೆಗಳುಃ ತುರ್ತು ರೋಹಿಣಿ ಮಿರಗಾ ಮಂಡಿ ಕಟ್ಟಿಸಿನಿ, ಹಿಂಗಾರಿ ಮಳಿ ಪುಷ್ಯ,ಪುನರ್ವಸು ಮಳಿಗೆ ಕುರಗಿ ಕಡಿಯಾಕ ಆಯಿತು, ಮುಂಗಾರಿ ಹತ್ತು ಕಾಳಿನಲ್ಲಿ ಸಜ್ಜಿ ಬೇಳಿ ಕಟ್ಗೆ ವಕ್ಕಳ ಆಯಿತು,ಕೆಂಪು ಕಾಳು ಸಜ್ಜಿ ಬೆನ್ನು ಹತ್ತೆದ, ಹಿಂಗಾರಿ ಮಳಿ ಹುಬ್ಬಿ ಉತ್ತರಿಗೆ ಮಂಡಿ ಕಟ್ಟಿಸಿನಿ, ಸ್ವಾತಿ ಮಳಿ ಸೋಸಿ ನೋಡುವದರೊಳಗ ಒಂದು ಮೂಲಿ ಕಸರ ಉಳಿತು,ಹಿಂಗಾರಿ ಹತ್ತು ಕಾಳಿನಲ್ಲಿ ಬಿಳಿ ಕಾಳು ಮೇಲು, ಗೋಧಿ ,ಕುಸಬಿ, ಕಡ್ಲಿ, ಜೋಳದ ಬೆನ್ನುಹತ್ಯಾವ, ಹತ್ತಿ ಸಾಲಾಗ ಹಮಿಣಿ ಒಗದಿನ್ನಿ …. ಎಂದು ಶಿವಾನಂದ ಈರಕಾರ ಮುತ್ಯಾ ನುಡಿಗಳನ್ನು ನುಡಿದರು. ರೈತ ಬಾಂಧವರು ಮುತ್ಯಾರ ನುಡಿಗಳನ್ನು ಕೇಳಿ ಧನ್ಯತಾ ಭಾವ ಅನುಭವಿಸಿದರು.
ಜಾತ್ರಾಮಹೋತ್ಸವದಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ಜನತೆ ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ನೈವೇದ್ಯ,ಕಾಯಿ-ಕರ್ಪೂರ ಸಮರ್ಪಿಸಿದ ನಂತರ ದೇವಸ್ಥಾನದಲ್ಲಿನ ಪ್ರಸಾದ ಸ್ವೀಕರಿಸಿದರು.
ಜಾತ್ರಾಮಹೋತ್ಸವದಲ್ಲಿ ಬಸವರಾಜ ಹಾರಿವಾಳ, ನಿಂಗಪ್ಪ ಜೈನಾಪೂರ, ಮುರಗೆಪ್ಪ ಪೂಜಾರಿ, ಸಂಗಪ್ಪ ಡಂಬಳ, ಶರಣಪ್ಪ ನಾಡಗೌಡ, ಪಾವಡೆಪ್ಪ ಕರಮಳಕರ, ಅಪ್ಪಾಸಾಹೇಬ ಕಲ್ಲೂರ, ಸಿದ್ದಲಿಂಗಪ್ಪ ಪೂಜಾರಿ, ಆನಂದ ಮೇಟಿ, ಬಸಪ್ಪ ಹೆರಕಲ್ಲ, ಹಣಮಂತ ಅಡಗಿಮನಿ,ಸಂಗಪ್ಪ ಕೋಣಿನ, ಯಲ್ಲಪ್ಪ ಗುಂಡಿ, ಶ್ರೀಕಾಂತ ಪೈಠಾಣ, ಶರಣಪ್ಪ ಗುಡ್ಡದ, ಮುದಕಪ್ಪ ಕುಳಗೇರಿ, ಅಪ್ಪುಸಾ ಮಟ್ಯಾಳ, ಸುರೇಶ ಹಾರಿವಾಳ, ಸಂತೋಷ ಕೂಡಗಿ, ಜಗದೀಶ ನಿಕ್ಕಂ, ಮಲ್ಲಿಕಾರ್ಜುನ ಪಾದಯಾತ್ರಾ ಸಮಿತಿ ಪದಾಧಿಕಾರಿಗಳು ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

