ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ರಾತ್ರಿ ೧೦ ಗಂಟೆಯ ನಂತರ ಆರಂಭವಾದ ರೋಹಿಣಿ ಮಳೆ ನಿರಂತರವಾಗಿ ಕೆಲ ಗಂಟೆಗಳ ಕಾಲ ಸುರಿಯಿತು. ಈ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ವರ್ಷ ಮಳೆ ಇಲ್ಲದೇ ಸರಿಯಾಗಿ ಬಿತ್ತನೆಯಾಗಿರಲಿಲ್ಲ. ಈಗ ಉತ್ತಮ ಮಳೆಯಾಗಿರುವದರಿಂದ ಬಿತ್ತನೆ ಚಟುವಟಿಕೆಗಳು ಆರಂಭವಾಗುತ್ತವೆ.
ಪಟ್ಟಣದ ಹಿರಿಯರಾದ ಬಸವರಾಜ ಹಾರಿವಾಳ ಅವರನ್ನು ಮಾತನಾಡಿಸಿದಾಗ, ನಿನ್ನೆ ರಾತ್ರಿ ಸುರಿದ ರೋಹಿಣಿ ಮಳೆಯು ಉತ್ತಮವಾಗಿದೆ. ಇದು ಬಿತ್ತನೆ ಮಾಡಲು ಬೇಕಾದ ಮಳೆ ನೀಡಿದೆ. ಇಂದು ಜೂ.೭ ರಂದು ಮೃಗಾ ಮಳೆ ಕೂಡುತ್ತದೆ. ಗುರುವಾರ ಮಧ್ಯಾನ್ಹವೂ ಪಟ್ಟಣ ಹೊರವಲಯದ ಸುತ್ತಮುತ್ತ ಮೃಗಾ ಮಳೆಯು ಸಹ ಆಗಿದೆ. ಇದರಿಂದಾಗಿ ಬಿತ್ತನೆ ಮಾಡಲು ಅಗತ್ಯ ತಯಾರಿ ಮಾಡಿಕೊಳ್ಳಲಾಗುವುದು. ಈ ವರ್ಷ ಮಳೆಯಾಗುವ ಭರವಸೆ ಮೂಡಿದೆ. ಎಲ್ಲ ರೈತ ಬಾಂಧವರು ಬಿತ್ತನೆ ಮಾಡಲು ಮುಂದಾಗುತ್ತಾರೆ. ಉತ್ತಮ ಮಳೆಯಾಗಿರುವದರಿಂದ ನಮಗೆ ಹರ್ಷ ಉಂಟು ಮಾಡಿದೆ ಎಂದರು.
ನಿನ್ನೆ ರಾತ್ರಿ ಸುರಿದ ಮಳೆಯಿಂದ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಎರಡು ಮನೆ ಭಾಗಶಃ, ಯರನಾಳ ಗ್ರಾಮದಲ್ಲಿ ಒಂದು ಕಚ್ಚಾ ಮನೆ ಭಾಗಶಃ ಹಾನಿಯಾಗಿದೆ. ಮಳೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾಹಿತಿ ನೀಡಿದರು.
ತಾಲೂಕಿನ ವಿವಿಧೆಡೆಗಳಿರುವ ಮಳೆ ಮಾಪನ ಕೇಂದ್ರದಲ್ಲಿ ದಾಖಲಾದ ಮಳೆ ವಿವರಃ ಬಸವನಬಾಗೇವಾಡಿ ಮಳೆ ಮಾಪನ ಕೇಂದ್ರದಲ್ಲಿ ೫೩.೨ ಎಂಎಂ, ಹೂವಿನಹಿಪ್ಪರಗಿ ಮಳೆ ಮಾಪನ ಕೇಂದ್ರದಲ್ಲಿ ೧೬.೨ ಎಂಎಂ., ಮನಗೂಳಿ ಮಳೆ ಕೇಂದ್ರದಲ್ಲಿ ೧೭ ಎಂಎಂ. ಮಳೆ ದಾಖಲಾಗಿದೆ ಎಂದು ತಹಸೀಲ್ದಾರ ಕಾರ್ಯಾಲಯದ ಮೂಲಗಳು ತಿಳಿಸಿವೆ.
Subscribe to Updates
Get the latest creative news from FooBar about art, design and business.
Related Posts
Add A Comment

