ಮಹಿಳಾ ವಿಶ್ವವಿದ್ಯಾಲಯದಿಂದ ಕಲಕೇರಿಯಲ್ಲಿ ಪರಿಸರ ದಿನಾಚರಣೆ
ಕಲಕೇರಿ: ವಿದ್ಯಾರ್ಥಿಗಳು ಕೇವಲ ವನಮಹೋತ್ಸವದ ಸಂದರ್ಭದಲ್ಲಿ ಸಸಿ ನೆಡುವುದು ಅಷ್ಟೇ ಅಲ್ಲ, ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ವಿದ್ಯಾರ್ಥಿಗಳು ಪ್ರತಿನಿತ್ಯ ತಪ್ಪದೇ ಮಾಡಬೇಕಾಗಿದೆ ಎಂದು ವಿಜಯಪುರದ ಕ.ರಾ.ಅ.ಮ.ವಿ.ವಿಯ ದೈಹಿಕ ಶಿಕ್ಷಣ ವಿಭಾಗದ ಪ್ರೋ.ಜ್ಯೋತಿ ಉಪಾಧ್ಯೆ ಹೇಳಿದರು.
ಕಲಕೇರಿಯ ಶ್ರೀ ಬಸವೇಶ್ವರ ಮಹಿಳಾ ಮಹಾವಿದ್ಯಾಲಯಕ್ಕೆ ಶುಕ್ರವಾರ ಭೇಟಿ ನೀಡಿದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ “ಸ್ಥಾನಿಕ ವಿಚಾರಣಾ ಸಮಿತಿಯ ಪರಿಶೀಲನಾ ನಿಮಿತ್ಯವಾಗಿ ಆಗಮಿಸಿದ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟು ನೀರುಣಿಸಿ ಅವರು ಮಾತನಾಡಿದರು.
ಶ್ರೀ ಬಸವೇಶ್ವರ ಮಹಿಳಾ ಕಾಲೇಜಿನ ಅಭಿವೃದ್ಧಿ ಪರಿಶೀಲನಾ ತಂಡದ ಸದಸ್ಯರಾಗಿ ಆಗಮಿಸಿ ಮಾತನಾಡಿದ ಅವರು ನಾವೆಲ್ಲರೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಎಷ್ಟು ಮಹತ್ವ ನೀಡುತ್ತೇವೆಯೋ ಹಾಗೆಯೇ ಸಸ್ಯ ಸಂಪತ್ತು ಮತ್ತು ಮಣ್ಣಿನ ಸಂರಕ್ಷಣೆ ಮಾಡಿ ಪರಿಸರದ ರಕ್ಷಣೆ ಮಾಡಿದಾಗ ಮಾತ್ರ ನಾವು ಸುಂದರ ಪರಿಸರದಲ್ಲಿ ಆರೋಗ್ಯಯುತ ಜೀವನ ನಡೆಸಲು ಸಾಧ್ಯವಾಗುತ್ತದೆ ಆದ್ದರಿಂದ ಮಳೆ ಬೆಳೆ ಚೆನ್ನಾಗಿ ಬರಲು ಮತ್ತು ಪರಿಸರದ ಸಮತೋಲನ ಕಾಪಾಡಲು ಪರಿಸರ ರಕ್ಷಣೆ ನಮ್ಮ ದಿನನಿತ್ಯದ ಕಾಯಕವಾಗಿಸಿಕೊಳ್ಳೋಣ ಎಂದರು.
ಈ ವೇಳೆ ಸಮಿತಿಯ ಚೇರಮನ್ ಪ್ರೋ.ಬಸವರಾಜ ಲಕ್ಕಣ್ಣನವರ, ಪ್ರೋ.ಲಕ್ಷ್ಮಿದೇವಿ. ವಾಯ್, ಸಂಸ್ಥೆಯ ಅಧ್ಯಕ್ಷ ಎಸ್.ಬಿ.ಪಾಟೀಲ, ಕಾರ್ಯದರ್ಶಿಗಳಾದ ಎಮ್.ಎಸ್.ಜೋಗೂರ, ಎಸ್.ಜಿ.ಝಳಕಿ, ಎಸ್.ಸಿ.ಚಳ್ಳಗಿ ಪ್ರಾಚಾರ್ಯರಾದ ಜೆ.ಎಸ್.ಕಾದಳ್ಳಿ ಪ್ರೋ|| ಎಮ್.ಎ.ಪಾಟೀಲ, ಪ್ರೋ|| ಎಸ್.ಎಸ್.ದುರ್ಗಿ, ಆರ್.ವ್ಹಿ.ಕುಲಕರ್ಣಿ ಸೇರಿದಂತೆ ಕಾಲೇಜಿನ ಸಿಬ್ಭಂದಿವರ್ಗ ಇದ್ದರು.

