ತಿಕೋಟಾ: ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಳ್ಳ ಕೊಳ್ಳ ಬಾಂದಾರಗಳು ತುಂಬಿ ಹರಿಯುತ್ತಿದ್ದು ತಾಲ್ಲೂಕಿನ ಲೋಹಗಾಂವ ಗ್ರಾಮದ ವಿಜಯಪುರ ರಸ್ತೆಯು ಹಳ್ಳದಿಂದ ಹರಿಯುವ ನೀರಿನ ರಭಸಕ್ಕೆ ಸೇತುವೆ ಕಿತ್ತು ಹೋಗಿದೆ. ಬೆಳ್ಳಂಬೆಳಗ್ಗೆ ವಾಹನ ಸವಾರರು ತೊಂದರೆ ಅನುಭವಿಸಿದ್ದು ರಸ್ತೆ ಬಂದ್ ಆಗಿ ಸಾಲುಗಟ್ಟಲೆ ವಾಹನಗಳು ರಸ್ತೆಯುದ್ದಕ್ಕೂ ನಿಂತಿದ್ದವು.
ರಸ್ತೆ ಬಂದ್ ಆಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವ ವಿಷಯ ತಿಳಿದ ಸಚಿವ ಎಂ.ಬಿ.ಪಾಟೀಲ್ ಅವರು ತಮ್ಮ ಆಪ್ತಸಹಾಯಕ ಸಂತೋಷ ಲೋಕುರೆ ಹಾಗೂ ಪಿಡಬ್ಲುಡಿ ಎಇಇ ರವಿ ಪವಾರ ಅವರನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಎಇಇ ಹಾಳಾದ ಸೇತುವೆ ಹತ್ತಿರ ತಾತ್ಕಾಲಿಕವಾಗಿ ಗರಸು ಹಾಕಿ ಜೆಸಿಬಿ ಮೂಲಕ ಮುಳ್ಳುಕಂಟಿ ತೆಗೆಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ತಾತ್ಕಾಲಿಕ ಪೈಪ್ ಹಾಕಿ ಕಾಮಗಾರಿ ಮಾಡಲಾಗುವದು. ಸೇತುವೆ ಹಾನಿ ಕುರಿತು ಸರ್ಕಾರಕ್ಕೆ ವರದಿ ನೀಡುತ್ತೇವೆ. ಶಾಶ್ವತ ಸೇತುವೆ ಮಂಜೂರಿಗೆ ವರದಿ ನೀಡುತ್ತೇವೆ. ಅನುದಾನ ಮಂಜೂರಾದ ನಂತರ ಶಾಶ್ವತ ಸೇತುವೆ ನಿರ್ಮಿಸಲಾಗುವದು ಎಂದು ಎಇಇ ರವಿ ಪವಾರ ತಿಳಿಸಿದರು.
ಸೇತುವೆ ಹಳೆಯದಾಗಿದ್ದು ನೀರಿನ ರಭಸಕ್ಕೆ ಪೈಪ್ ಕಿತ್ತು ಹೋಗಿವೆ. ಮೇಲಗಡೆ ಡಾಂಬರ್ ಹಾಗೂ ಕಾಂಕ್ರೀಟ್ ಮಾತ್ರ ಉಳಿದುಕೊಂಡಿದ್ದು, ಮೇಲಗಡೆ ವಾಹನ ಸಂಚಾರ ಮಾಡಿದರೆ ಕುಸಿದು ಬೀಳುತ್ತದೆ. ಬೇಗನೆ ಶಾಶ್ವತ ಸೇತುವೆ ನಿರ್ಮಿಸಬೇಕು ಎಂದು ವಾಹನ ಸವಾರರು ತಮ್ಮ ಅಳಲನ್ನು ತೊಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಇದ್ದರು.
ನೀರಲ್ಲಿ ನಿಂತ ದ್ರಾಕ್ಷಿ ಪಡ: ರಾತ್ರಿಯಿಡಿ ಸುರಿದ ಮಳೆಗೆ ಜಮೀನಿನ ಬದುಗಳು ತುಂಬಿಕೊಂಡಿದ್ದು, ತಾಲ್ಲೂಕಿನ ಘೋಣಸಗಿ ಗ್ರಾಮದ ರೈತ ಮಹಾದೇವ ಶ್ಯಾಮಣ್ಣ ಪೂಜಾರಿ ಇವರ ದ್ರಾಕ್ಷಿ ಪಡದಲ್ಲಿ ಮೊನಕಾಲವರೆಗೆ ಮಳೆ ನೀರು ತುಂಬಿತ್ತು.


