ಮೋರಟಗಿಯ ಅಮೋಘಸಿದ್ದೇಶ್ವರ ಜಾತ್ರೆ I ಭಂಡಾರದಲ್ಲಿ ಮಿಂದೆದ್ದ ಭಕ್ತ ಸಾಗರ
ಮೋರಟಗಿ: “ರೋಣಿ ಮಿರಗಕ್ಕ ಕೂರಿಗಿ ಸಾಗ, ಪುಷ್ಯ- ಪುನರ್ವಸು ದೇಶಕ್ಕೆ ಸಂಪೂರ್ಣ, ನಂಬಿದ ರೈತಗ ಹಿಂಬಾಳಾಗಿರತೀನಿ..”
ಮಿರಗ ಕೂಡುವ ದಿನವೇ ಗ್ರಾಮದಲ್ಲಿ ಕೇಳಿಬಂದ ಇಂಥದೊಂದು ಹೇಳಿಕೆ ಸುತ್ತಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ‘ಮುತ್ಯಾನ ಮಾತಿನಂತೆ ಮಳೆರಾಯ ಕೈಹಿಡದರ ಬಾಳ ಹಸನಾದಂಗ’ ಎಂದು ಅನ್ನದಾತರು ಆತ್ಮವಿಶ್ವಾಸದಿಂದ ಕೃಷಿ ಚಟುವಟಿಕೆಗೆ ಮುಂದಾಗಿದ್ದಾರೆ.
ಗ್ರಾಮದ ಆರಾಧ್ಯ ದೈವ, ಭಕ್ತಿ ಭಂಡಾರದ ಅವತಾರಿ, ಸಿದ್ಧಿಪುರುಷ ಅಮೋಘಸಿದ್ಧೇಶ್ವರ ಜಾತ್ರೆ ನಿಮಿತ್ತ ಶುಕ್ರವಾರ ನಡೆದ ಹೇಳಿಕೆಯಲ್ಲಿ ಪಟ್ಟದ ದೇವರಾದ ಕನ್ನಯ್ಯ ಮುತ್ಯಾ ಅವರು ಮಳೆ ಭವಿಷ್ಯ ನುಡಿದಿದ್ದಾರೆ. ಅಜ್ಜನ ವಾಣಿಯಂತೆ ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ಗ್ರಾಮಸ್ಥರು ಸಂತಸಗೊಂಡಿದ್ದಾರೆ.
ಹೇಳಿಕೆ ಸಂದರ್ಭದಲ್ಲಿ ಸುತ್ತಲಿನ ಗ್ರಾಮಗಳ ನೂರಾರು ಜನ ನೆರೆದಿದ್ದರು.
ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಕೂಡಾ ಸಂಪ್ರದಾಯದಂತೆ ಅದ್ದೂರಿಯಾಗಿ ನಡೆದ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಂಡಾರದಲ್ಲಿ ಮಿಂದ್ದೆದ್ದರು.
ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು.
ಗುರುವಾರ ರಾತ್ರಿ ೮ ಗಂಟೆಗೆ ಗಂಗಸ್ನಾನ ಮುಗಿಸಿದ ನಂತರ ಗರ್ಭ ಗುಡಿಯಲ್ಲಿ ಹೂವಿನ ಹೇಳಿಕೆ ಜರುಗಿತು. ಶುಕ್ರವಾರ ಬೆಳಿಗ್ಗೆ ಸಕಲ ವಾದ್ಯ ವೈಭವದೊಂದಿಗೆ ಅಮೋಘಸಿದ್ದೇಶ್ವರ ಪಲ್ಲಕ್ಕಿ ಮೆರವಣಿಗೆ ಆರಂಭವಾಯಿತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಪಲ್ಲಕ್ಕಿ ಭಕ್ತರ ಮನೆಗಳನ್ನು ಪ್ರವೇಶಿಸುತ್ತಿದ್ದಂತೆ ಸಂಭ್ರಮ ಮುಗಿಲುಮುಟ್ಟಿತು. ವಿವಿಧ ಜಿಲ್ಲೆಗಳಿಂದ ಬಂದಿದ್ದ ಡೊಳ್ಳು ಕುಣಿತ ಸಂಘಗಳು ಆಕರ್ಷಕ ಕುಣಿತದ ಮೂಲಕ ಜನಮನ ಸೆಳೆದವು. ಚಿತ್ರ ವಿಚಿತ್ರ ಮದ್ದು ಸುಡುವ ಕಾರ್ಯಕ್ರಮ ಕಣ್ಮನ ಸೆಳೆಯಿತು. ನೂರಾರು ಭಕ್ತರು ಹರಕೆ ತೀರಿಸಿದರು.

