ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದ ಆರಾಧ್ಯದೈವ ವರದಾನಿ ಲಕ್ಕಮ್ಮದೇವಿ ಜಾತ್ರಾಮಹೋತ್ಸವ ಬುಧವಾರ ಆರಂಭಗೊಂಡಿದ್ದು. ಜಾತ್ರಾ ಆರಂಭದ ದಿನ ಬುಧವಾರ ಬೆಳಗ್ಗೆ ಸಕಲ ವಾದ್ಯ ವೈಭವದೊಂದಿಗೆ ಏಳು ಪಾಂಡವರ ಗಿಡಕ್ಕೆ ಹೋಗಿ ಲಕ್ಕಮ್ಮದೇವಿಯನ್ನು ಬರಮಾಡಿಕೊಳ್ಳಲಾಯಿತು. ನಂತರ ವಿವಿಧ ಗ್ರಾಮಗಳಿಂದ ಬರುವ ಒಂಭತ್ತು ಪಲ್ಲಕ್ಕಿಗಳನ್ನು ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು. ಜಾತ್ರೆಯಂಗವಾಗಿ ಬೆಳಗ್ಗೆ ಪಗಡಿ ಪಂದ್ಯಾವಳಿ ಜರುಗಿತು. ರಾತ್ರಿ ಬ್ಯಾಲ್ಯಾಳ ಕೃಷ್ಣ ಪಾರಿಜಾತ ಮಂಡಳಿಯಿಂದ ಶ್ರೀಕೃಷ್ಣ ಪಾರಿಜಾತ ಬಯಲಾಟ ಪ್ರದರ್ಶನಗೊಂಡಿತು.
ಜಾತ್ರೆಯ ಎರಡನೇ ದಿನ ಗುರುವಾರದಂದು ಬೆಳಗ್ಗೆ ಶ್ರೀದೇವಿಯ ಗಂಗಸ್ಥಲ ಪೂಜೆ ಮುಗಿಸಿದ ನಂತರ ಸಕಲ ವಾದ್ಯವೈಭವ, ಡೊಳ್ಳಿನ ವಾಲಗದೊಂದಿಗೆ ಹನ್ನೊಂದು ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಲಕ್ಕಮ್ಮದೇವಿ ದೇವಸ್ಥಾನಕ್ಕೆ ಶ್ರೀದೇವಿಯನ್ನು ಕರೆತರಲಾಯಿತು. ನಂತರ ಗ್ರಾಮದೇವತೆ ಉಡಿ ತುಂಬಲಾಯಿತು. ಪಲ್ಲಕ್ಕಿ ಉತ್ಸವದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಹನ್ನೊಂದು ಪೂಜಾರಿಗಳಿಂದ ಹೇಳಿಕೆಗಳು (ಶಿವವಾಣಿ) ಜರುಗಿದವು. ಪೂಜಾರಿಗಳಿಂದ ಹಿಂಗಾರು ಮುಂಗಾರು ಮಳೆ ಉತ್ತಮ. ಹತ್ತಿ,ತೊಗರಿ ಬೆಳೆ ಉತ್ತಮವಾಗಿ ಬೆಳೆಯುತ್ತದೆ. ಹಿಂಗಾರಿನಲ್ಲಿ ಜೋಳ ಮುಂದಾಗುತ್ತದೆ ಸೇರಿದಂತೆ ಅನೇಕ ಹೇಳಿಕೆಗಳು ಕೇಳಿಬಂದವು. ಪಲ್ಲಕ್ಕಿ ಉತ್ಸವದಲ್ಲಿ ಇವಣಗಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಅಪಾರ ಸಂಖ್ಯೆ ಜನರು ಭಾಗವಹಿಸಿದ್ದರು.
ಜಾತ್ರೆಯಂಗವಾಗಿ ರಾತ್ರಿ ೯ ಗಂಟೆಗೆ ರಾಯಭಾಗ ತಾಲೂಕಿನ ಹಾಲಶಿರಬೂರದ ಅಮೋಘಸಿದ್ದೇಶ್ವರ ಗಾಯನ ಸಂಘ ಹಾಗೂ ವಿಜಯಪುರ ತಾಲೂಕಿನ ಶಿವಣಗಿಯ ಮರಡಿ ಸಿದ್ದೇಶ್ವರ ಗಾಯನ ಸಂಘದಿಂದ ವಾದಿ-ಪ್ರತಿವಾದಿ ಡೊಳ್ಳಿನ ಪದಗಳು ಜರುಗಿದವು.
ಜಾತ್ರೆಯಂಗವಾಗಿ ಜೂ.೭ ರಂದು ಬೆಳಗ್ಗೆ ೯ ಗಂಟೆಗೆ ಭಾರ ಎತ್ತುವ ಸ್ಪರ್ಧೆ, ಗುಂಡು, ಸಂಗ್ರಾಣಿ ಕಲ್ಲು, ಚೀಲ ಎತ್ತುವ ಕಾರ್ಯಕ್ರಮ, ಮಧ್ಯಾನ್ಹ ೩ ಗಂಟೆಗೆ ಜಂಗೀ ಕುಸ್ತಿಗಳು, ರಾತ್ರಿ ೯ ಗಂಟೆಗೆ ಹಿರಿತನ ಹೆಣ್ಣು ನಾಟಕ ಪ್ರದರ್ಶನ, ಜೂ.೮ ರಂದು ಬೆಳಗ್ಗೆ ೮ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಪ್ರಸಿದ್ಧ ಗೀಗೀ ಪದಗಳು, ರಾತ್ರಿ ೯ ಗಂಟೆಗೆ ಹಾಸ್ಯ ರಸಮಂಜರಿ ಕಾರ್ಯಕ್ರಮ, ಜೂ. ೯ ರಂದು ಬೆಳಗ್ಗೆ ೮ ಗಂಟೆಗೆ ಎತ್ತಿನಗಾಡಿ ರೇಸ್, ಮಧ್ಯಾನ್ಹ ೨ ಗಂಟೆಗೆ ತೇರ ಬಂಡಿ ಸ್ಪರ್ಧೆ, ರಾತ್ರಿ ೮ ಗಂಟೆಗೆ ಪುರಾಣ ಮಂಗಲ, ನಂತರ ೯ ಗಂಟೆಗೆ ಹಿರಿತನದ ಹೆಣ್ಣು ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ ಎಂದು ಜಾತ್ರಾಮಹೋತ್ಸವ ಸಮಿತಿ ಪದಾಧಿಕಾರಿಗಳು ತಿಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

