ಬಸವನಬಾಗೇವಾಡಿ: ಗ್ರಾಮೀಣ ಪ್ರದೇಶದಲ್ಲಿ ಮಕ್ಕಳನ್ನು ಉನ್ನತ ವಿದ್ಯಾಭ್ಯಾಸ ಮಾಡಿಸಲು ಮುಂದಾಗುತ್ತಿರುವುದು ಅತ್ಯುತ್ತಮ ಬೆಳವಣಿಗೆ. ಇದರಿಂದಾಗಿ ದೇಶದಲ್ಲಿ ಅನಕ್ಷರಸ್ಥರ ಸಂಖ್ಯೆ ಕಡಿಮೆಯಾಗಿ ದೇಶದ ಪ್ರಗತಿಗೆ ಪೂರಕವಾಗುತ್ತದೆ ಎಂದು ಡೋಣೂರ ಕಟ್ಟೀಮನಿ ಹಿರೇಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಡೋಣೂರ ಗ್ರಾಮದ ಕಟ್ಟೀಮನಿ ಹಿರೇಮಠದ ಗುರು ಮರುಳಸಿದ್ದೇಶ್ವರ,ಚೌಡಮ್ಮದೇವಿ ಜಾತ್ರಾಮಹೋತ್ಸವ ಹಾಗೂ ಹಜರತ್ ಸುಲೇಮಾನ ಉರುಸು ಅಂಗವಾಗಿ ಹಮ್ಮಿಕೊಂಡಿರುವ ಕಲಬರುಗಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಬುಧವಾರ ಸಂಜೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು, ಇಂದು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಪ್ರತಿಭಾವಂತರಾಗಿ ನಾಡಿಗೆ ಉತ್ತಮ ಸೇವೆ ಸಲ್ಲಿಸುವಂತಾಗಬೇಕು. ವಿದ್ಯಾರ್ಥಿಗಳು ತಮ್ಮ ಅಧ್ಯಯನದೊಂದಿಗೆ ಉತ್ತಮ ಸಂಸ್ಕಾರ, ಸಂಸ್ಕ್ರತಿಯನ್ನು ಮೈಗೂಡಿಸಿಕೊಳ್ಳಬೇಕು. ಗುರು-ಹಿರಿಯರಿಗೆ ಗೌರವ ನೀಡಬೇಕು. ಸದಾಚಾರ ವ್ಯಕ್ತಿತ್ವ ಮೈಗೂಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಸ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. ೮೫ ಕ್ಕಿಂತ ಹೆಚ್ಚು ಅಂಕ ಪಡೆದ ೩೦ ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು , ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಯೋಗ ಪ್ರದರ್ಶನದ ಮೂಲಕ ಪ್ರಶಸ್ತಿ ಪಡೆದ ಹಾಗೂ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯಲ್ಲಿ ಅಗ್ರ ಅಂಕಗಳಿಸಿ ಬಂಗಾರ ಪದಕ ಪಡೆದ ವಿದ್ಯಾರ್ಥಿಯನ್ನು ಶ್ರೀಮಠದಿಂದ ಶ್ರೀಗಳು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಶಿವಾನಂದೀಶ್ವರ ಶಾಸ್ತ್ರೀಜಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

