ವಿದ್ಯುತ್ ಅಪಘಾತಕ್ಕೆ ತುತ್ತಾದ ದಿ.ಶಾಂತಪ್ಪ ಗಡಗಿಮನಿ ಕುಟುಂಬಕ್ಕೆ ಸಾಂತ್ವನ
ಸಿಂದಗಿ: ಶಾಂತಪ್ಪ ಗಡಗಿಮನಿ ಅವರು ವಿದ್ಯುತ್ ಅಪಘಾತದಿಂದ ಸಾವನ್ನಪ್ಪಿದ್ದು ದುರಂತ. ಅವರ ಕುಟುಂಬಸ್ಥರ ಜೊತೆ ಸದಾ ಸರ್ಕಾರವಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ತಾಲೂಕಿನ ವಿದ್ಯುತ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತಿದ್ದ ತಾಲೂಕಿನ ಖೈನೂರ ಗ್ರಾಮದ ಶಾಂತಪ್ಪ ವಿಶ್ವನಾಥ ಗಡಗಿಮನಿ ಎಂಬುವವರು ಕರ್ತವ್ಯ ವೇಳೆಯಲ್ಲಿ ಮಾರಣಾಂತಿಕ ವಿದ್ಯುತ್ ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು. ಈ ಹಿನ್ನಲೆಯಲ್ಲಿ ಅವರ ಕುಟುಂಬಸ್ಥರಿಗೆ ಶಾಸಕ ಅಶೋಕ ಮನಗೂಳಿ ಅವರು ಸರ್ಕಾರದಿಂದ ನೀಡಿರುವ ರೂ.೫ ಲಕ್ಷ ಪರಿಹಾರದ ಚೆಕ್ ವಿತರಿಸಿ ಸಾಂತ್ವಾನ ಹೇಳಿ ಮಾತನಾಡಿದ ಅವರು, ಕುಟುಂಬಸ್ಥರು ಭಯ ಪಡುವ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರಕ್ಕೆ ಈ ವರದಿಯನ್ನು ನೀಡಿದ ತಕ್ಷಣವೇ ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಮೃತರ ಕುಟುಂಬಕ್ಕೆ ಪರಿಹಾರವನ್ನು ನೀಡಿದೆ ಎಂದರು.
ಈ ವೇಳೆ ಹೆಸ್ಕಾಂ ಅಧಿಕಾರಿ ಚಂದ್ರಕಾಂತ ನಾಯಕ, ಕಾಂಗ್ರೆಸ್ ಬ್ಲಾಕ್ ತಾಲೂಕಾಧ್ಯಕ್ಷ ಸುರೇಶ ಪೂಜಾರಿ, ಶ್ರೀಕಾಂತ ಸೋಮಜ್ಯಾಳ, ಹೊನ್ನಪ್ಪಗೌಡ ಬಿರಾದಾರ, ಮೃತರ ತಂದೆ ವಿಶ್ವನಾಥ ಗಡಗಿಮನಿ, ದುಂಡಮ್ಮ ಗಡಗಿಮನಿ ಸೇರಿದಂತೆ ಇತರರು ಇದ್ದರು.

