ದೇವರಹಿಪ್ಪರಗಿ ರೈತ ಸಂಪರ್ಕ ಕೇಂದ್ರ | ಕೃಷಿ ಇಲಾಖೆಯಿಂದ ಚಾಲನೆ
ದೇವರಹಿಪ್ಪರಗಿ: ರೈತರು ನೆಟೆರೋಗ ನಿರೋಧಕ ಹಾಗೂ ಅಧಿಕ ಇಳುವರಿ ತಳಿಗಳನ್ನು ಬಿತ್ತನೆ ಮಾಡಬೇಕು ಎಂದು ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಇತ್ತೀಚಿಗೆ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ ೮೨ ಕ್ವಿಂಟಲ್ ತೊಗರಿ, ೩ ಕ್ವಿಂಟಲ್ ಹೆಸರು, ೨೦ ಕ್ವಿಂಟಲ್ ಮೆಕ್ಕೆಜೋಳ, ೩ ಕ್ವಿಂಟಲ್ ಸಜ್ಜೆ, ೨ ಕ್ವಿಂಟಲ್ ಸೂರ್ಯಕಾಂತಿಯನ್ನು ದಾಸ್ತಾನಿಕರಿಸಲಾಗಿದೆ. ಮುಖ್ಯವಾಗಿ ತೊಗರಿಯಲ್ಲಿ ನೀರಾವರಿ ಹಾಗೂ ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳುವ ಜಮೀನುಗಳಿಗೆ ಹೊಸದಾಗಿ ಅಭಿವೃದ್ಧಿ ಪಡಿಸಿದ ನೆಟೆ ರೋಗ ನಿರೋಧಕ ತಳಿಗಳಾದ ಜಿಆರ್‌ಜಿ-೧೫೨, ಜಿಆರ್‌ಜಿ-೮೧೧ ಗಳನ್ನು ರೈತರು ಬಳಸಬೇಕು ಮತ್ತು ಬಿತ್ತನೆ ಬೀಜಗಳನ್ನು ಪಡೆಯಲು ಕಡ್ಡಾಯವಾಗಿ ಎಫ್‌ಐಡಿ ಮತ್ತು ಜಾತಿಪ್ರಮಾಣ ಪತ್ರ ದಾಖಲಾತಿಗಳನ್ನು ಸಲ್ಲಿಸಿ ಸಹಾಯಧನದಲ್ಲಿ ಪ್ರಮಾಣಿಕೃತ ಬಿತ್ತನೆ ಬೀಜಗಳನ್ನು ಪಡೆಯಬೇಕು ಎಂದು ತಿಳಿಸಿದರು.
ಕೃಷಿ ಅಧಿಕಾರಿ ಎಚ್.ಕೆ.ಪಾಟೀಲ ಮಾತನಾಡಿ, ಸರ್ಕಾರದ ಆದೇಶದಂತೆ ಈ ಬಾರಿ ಬೀಜ ವಿತರಣೆಯನ್ನು ಕ್ಯೂಆರ್ ಕೋಡ್ ಮೂಲಕ ವಿತರಿಸಲಾಗುತ್ತಿದ್ದು, ರೈತರು ಗರಿಷ್ಠ ೫ ಎಕರೆವರೆಗೆ ಸಹಾಯಧನದಲ್ಲಿ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಬಹುದು ಎಂದರು.
ಸಹಾಯಕ ಕೃಷಿ ಅಧಿಕಾರಿ ರಾಜು ಸದಾನಂದ, ಆತ್ಮಾ ಸಿಬ್ಬಂದಿ ಸುಧಾಕರ ಇರಸೂರ್, ಗೊಲ್ಲಾಳ ಪಾಟೀಲ, ರೈತರಾದ ರವಿಕಾಂತ ಹುಗ್ಗೆನವರ, ಮೌಲಾಸಾಬ್ ಗೌಂಡಿ, ಶಂಕ್ರೆಪ್ಪ ಗುಂದಗಿ, ಶ್ರೀಮಂತ ಹುಗ್ಗಿ, ಕರೆಪ್ಪ ಸೇರಿದಂತೆ ಇತರರು ಇದ್ದರು.

