ಆಲಮಟ್ಟಿ ಹಸರೀಕರಣಕ್ಕೆ ಶ್ಲಾಘನೆ | ೧೦ ಸಾವಿರ ಗಿಡಗಳನ್ನು ನೆಡುವ ಯೋಜನೆಗೆ ಚಾಲನೆ
ಆಲಮಟ್ಟಿ: ಇಲ್ಲಿಯ ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯ ವತಿಯಿಂದ ಈ ವರ್ಷ ನಾನಾ ಕಡೆ ಸುಮಾರು ೧೦ ಸಾವಿರ ಗಿಡಗಳನ್ನು ಹಚ್ಚಲು ಉದ್ದೇಶಿಸಲಾಗಿದೆ, ಅದಕ್ಕೆ ಪರಿಸರ ದಿನಾಚರಣೆಯ ದಿನದಂದು ಚಾಲನೆ ನೀಡಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ ನಾಗಶೆಟ್ಟಿ ಹೇಳಿದರು.
ಆಲಮಟ್ಟಿಯ ರಾಕ್ ಉದ್ಯಾನದಲ್ಲಿ ಬುಧವಾರ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು.
ಕೃಷ್ಣಾ ಭಾಗ್ಯ ಜಲ ನಿಗಮ ಬೆಂಗಳೂರಿನ ಹಣಕಾಸು ವಿಭಾಗದ ಜನರಲ್ ಮ್ಯಾನೇಜರ್ ಬಿ. ಲಕ್ಷ್ಮೀಕಾಂತ ಮಾತನಾಡಿ,
ಪರಿಸರ ಮಾಲಿನ್ಯ, ಪ್ಲ್ಯಾಸ್ಟಿಕ್ ಮತ್ತೀತರ ಹಾನಿಕಾರಕ ವಸ್ತುಗಳ ಹೆಚ್ಚು ಬಳಕೆಯಿಂದ ಧ್ರುವ ಪ್ರದೇಶದ ಮಂಜುಗಡ್ಡೆ ಕರಗಿ ಸಮುದ್ರದ ಮಟ್ಟ ಏರಿಕೆಯಾಗಿ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಕೇವಲ ಸಸಿ ನೆಡುವುದು ಮುಖ್ಯವಲ್ಲ , ಆ ಸಸಿ ಮರವಾಗಲು ಶ್ರಮಿಸಬೇಕು ಎಂದರು.
ಕೆಬಿಜೆಎನ್ ಎಲ್ ಹಣಕಾಸು ಸಲಹೆಗಾರ ಆರ್.ಎಸ್. ಪಶುಪತಿ ಮಾತನಾಡಿ, ಆಲಮಟ್ಟಿ ಭಾಗದಲ್ಲಿ ನಡೆದಿರುವ ಸಸಿಗಳ ಬೆಳೆಸುವಿಕೆಯಿಂದ ವಿಜಯಪುರ ಜಿಲ್ಲೆಯಲ್ಲಿಯೇ ಹಸರೀಕರಣಗೊಂಡ ಪ್ರದೇಶವಾಗಿದೆ, ಇದಕ್ಕೆ ಕಾರಣರಾದ ಅರಣ್ಯ ವಿಭಾಗದ ಅಧಿಕಾರಿಗಳ, ದಿನಗೂಲಿ ಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದರು.
ಕೆಬಿಜೆಎನ್ಎಲ್ ಹಣಕಾಸು ವಿಭಾಗದ ಎಜಿಎಂ ಎ.ಆರ್. ಗಾಯತ್ರಿ, ರಾಜೇಂದ್ರ ಗಂಗಯ್ಯ, ಪ್ರಧಾನ ಮುಖ್ಯ ಲೆಕ್ಕಾಧಿಕಾರಿ ಎನ್.ಎಸ್. ವರದರಾಜು, ಹಿರಿಯ ಲೆಕ್ಕಾಧಿಕಾರಿ ಎಂ.ಎಸ್. ದಂಧರಗಿ, ಎಸಿಎಫ್ ರಮೇಶ ಚವ್ಹಾಣ, ಆರ್ ಎಫ್ ಓಗಳಾದ ಮಹೇಶ ಪಾಟೀಲ, ರಾಜಶೇಖರ ಲಮಾಣಿ, ಡಿಆರ್ ಎಫ್ ಓ ಸತೀಶ ಗಲಗಲಿ, ಪ್ರವೀಣ ಹಚ್ಯಾಳಕರ, ವಿಜಯಲಕ್ಷ್ಮಿ ರೆಡ್ಡಿ, ಎ.ಎಸ್. ಕಾಳೆ ಮತ್ತೀತರರು ಇದ್ದರು.

