ಮುದ್ದೇಬಿಹಾಳ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ. ಪ್ರತಿಯೊಬ್ಬರೂ ಗಿಡಗಳನ್ನು ನೆಡಲು ಮುಂದಾಗದೇ ಹೋದರೆ ಮುಂದೊಂದು ದಿನ ದೊಡ್ಡ ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಶಾಸಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.
ಪಟ್ಟಣದ ಹುಡ್ಕೋದಲ್ಲಿರುವ ಉದ್ಯಾನವನದಲ್ಲಿ ಹಸಿರು ತೋರಣ ಗೆಳೆಯರ ಬಳಗ, ಪುರಸಭೆ ಮತ್ತು ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನವ ಅಧುನಿಕ ಯುಗದ ಹಿಂದೆ ಬಿದ್ದು ಪರಿಸರವನ್ನು ಸಂಪೂರ್ಣ ನಾಶ ಮಾಡುತ್ತಿದ್ದಾನೆ. ತನ್ನ ಅನುಕೂಲಕ್ಕಾಗಿ ದೊಡ್ಡ ದೊಡ್ಡ ಮರಗಳನ್ನು ಕಡಿದು ಬಿಸಾಕುತಿದ್ದಾನೆ. ಇದರ ಪರಿಣಾಮಗಳಿಂದಾಗಿ ಮಳೆ ಇಲ್ಲದೆ ಬೆಳೆ ಬಾರದೆ ರೈತರು ಸಂಕಷ್ಟಕ್ಕೆ ಎದುರಾಗುತ್ತಿದ್ದಾರೆ. ಜನ ಜೀವನ ಸುಗಮವಾಗಿ ಸಾಗಬೇಕಾದರೆ ಪರಿಸರದ ಅವಶ್ಯಕತೆ ಸಾಕಷ್ಟಿದೆ ಎಂಬ ಬಗ್ಗೆ ಪ್ರಯೊಬ್ಬರೂ ಅರಿತುಕೊಂಡು ಅಲ್ಲಲ್ಲಿ ಗಿಡಗಳನ್ನು ನೆಡಲು ಮುಂದಾಗಬೇಕು ಎಂದರು.
ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಿ.ಐ.ಬಿರಾದಾರ ಮಾತನಾಡಿ, ಜೀವ ವೈವಿಧ್ಯತೆ ಇದ್ದರೆ ಮಾತ್ರ ನಾವು ಉಳಿಯುತ್ತೇವೆ. ಹೆಚ್ಚು ಫಸಲು ಪಡೆಯುವ ದುರಾಸೆಯಿಂದ ಕೀಟ ನಾಶಕ, ರಾಸಾಯನಿಕ ಗೊಬ್ಬರ ಬಳಸುತ್ತ ನಡೆದಿರುವುದರಿಂದ ಸೂಕ್ಷ್ಮ ಜೀವ ಸಂಕುಲ ನಾಶವಾಗುತ್ತಿದೆ. ನಮ್ಮ ಭೂಮಿ, ನಮ್ಮ ಭವಿಷ್ಯ ಈಗಿನ ಧ್ಯೇಯವಾಗಿದ್ದು ಭೂಮಿಯ ಸಂರಕ್ಷಣೆಗೆ ಪ್ರತಿಯೊಬ್ಬರೂ ನಿಲ್ಲಬೇಕು ಎಂದರು.
ತಾಲ್ಲೂಕು ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಜಿ.ಸಂಗಾಲಕ ಮಾತನಾಡಿ, ಅರಣ್ಯ ಸಂಪತ್ತು ಕ್ರಮೇಣ ಕಡಿಮೆಯಾಗುತ್ತಿದೆ. ನಾವೂ ಉಳಿಯಬೇಕು. ನಮ್ಮ ಭವಿಷ್ಯದ ಪೀಳಿಗೆಯ ಉಳಿವಿಗೆ ಅರಣ್ಯ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸಮತೋಲನದ ಅರಣ್ಯ ಇಲ್ಲದಿದ್ದರೆ ಕರಾಳ ದಿನಗಳು ಬರಲಿವೆ ಎಂಬ ಎಚ್ಚರಿಕೆ ನಿತ್ಯ ನೋಡುತ್ತಿದ್ದೇವೆ. ಅರಣ್ಯ ಇಲಾಖೆ ಮಾಡುತ್ತಿರುವ ಕೆಲಸಕ್ಕೆ ಜನರ ಸಂಘ, ಸಂಸ್ಥೆಗಳ ಸಹಕಾರ ಅವಶ್ಯಕ ಎಂದರು.
ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಡಾ.ವೀರೇಶ ಇಟಗಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಮೌಢ್ಯಗಳನ್ನು ಕಳೆದು ವೈಚಾರಿಕತೆ ಮೂಡಿಸುವ ಕಾರ್ಯವನ್ನು ಬಳಗ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಮಾಡುತ್ತ ಬಂದಿದೆ ಎಂದರು.
ಪರಿಸರ ಸಂರಕ್ಷಣೆಗಾಗಿ ಪಟಾಕಿ ಬೇಡ ಅಭಿಯಾನ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ ಬೇಡ ಅಭಿಯಾನ, ನೀರು ಉಳಿಸಿ ಅಭಿಯಾನಗಳ ಜೊತೆಗೆ ಕಾರ್ಯಕ್ರಮದಲ್ಲಿ ಪರಿಸರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ರೇಶ್ಮಾ ಇಕ್ಬಾಲ ಮಾಳನೂರ, ಶಿವಪ್ಪ ಸೋಮಲೆಪ್ಪ ರಾಠೋಡ, ಸುರೇಶ ತಾಳಿಕೋಟಿ, ಮೌಲಾಸಾಬ ಜಂಗ್ಲೀಸಾಬ ನದಾಫ ಅವರಿಗೆ “ಪರಿಸರ ರಕ್ಷಕ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಸಂಪತ್ತಕುಮಾರ ಢವಳಗಿ ಪ್ರಥಮ, ಪ್ರಿಯಾ ಆನಂದ ಚಿನಿವಾರ ದ್ವಿತೀಯ, ಗಂಗೋತ್ರಿ ಕುಂಬಾರ ತೃತೀಯ ಅವರಿಗೆ ಬಹುಮಾನ ವಿತರಿಸಲಾಯಿತು. ಕಲಾವಿದ ಸಿದ್ದರಾಜ ಹೊಳಿ ನಿರ್ಣಾಯಕರಾಗಿದ್ದರು.
ಕೆಬಿಜೆಎನ್‌ಎಲ್ ವಲಯ ಅರಣ್ಯಾಧಿಕಾರಿ ಯಶವಂತ ರಾಠೋಡ, ಪುರಸಭೆಯ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಹೋರಾಟಗಾರ ಬಸವರಾಜ ನಂದಿಕೇಶ್ವರಮಠ, ಪುರಸಭೆ ಸದಸ್ಯೆಯರಾದ ಸಂಗಮ್ಮ ದೇವರಳ್ಳಿ ಮತ್ತು ಸಹನಾ ಬಡಿಗೇರ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ನಾಲತವಾಡ, ಬಿ.ವಿ.ಕೋರಿ, ರುದ್ರೇಶ ಕಿತ್ತೂರು, ಬಳಗದ ಉಪಾಧ್ಯಕ್ಷ ಬಸವರಾಜ ಬಿಜ್ಜೂರ, ಮಾಜಿ ಅಧ್ಯಕ್ಷರಾದ ಕೆ.ಆರ್.ಕಾಮಟೆ, ಬಿ.ಎಸ್.ಮೇಟಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ, ಸುರೇಶ ಕಲಾಲ, ವೆಂಕನಗೌಡ ಪಾಟೀಲ, ಅಮರೇಶ ಗೂಳಿ, ಕಿರಣ ಕಡಿ, ರವಿ ತಡಸದ, ವೀರೇಶ ಹಂಪನಗೌಡ್ರ, ಬಿ.ಎಂ.ಪಲ್ಲೇದ, ವಿಲಾಸ ದೇಶಪಾಂಡೆ, ಮನೆಯಲ್ಲಿ ಮಹಾಮನೆ ಬಳಗದ ಸದಸ್ಯರು, ವೈದ್ಯರ ಸಂಘ, ನಿವೃತ್ತ ನೌಕರರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ಕಾರ್ಯದರ್ಶಿ ಬಿ.ಎಚ್.ಬಳಬಟ್ಟಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

