ಮುದ್ದೇಬಿಹಾಳದಲ್ಲಿ ಪರಿಸರ ದಿನಾಚರಣೆಗೆ ಗಿಡ ನೆಡುವ ಮೂಲಕ ಚಾಲನೆ
ಮುದ್ದೇಬಿಹಾಳ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪ್ರಾಣಿಗಳೂ ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಪರಿಸರದ ಮೇಲೆ ಅವಲಂಬಿತವಾಗಿರುವದರಿಂದ ಪ್ರತಿಯೊಬ್ಬರೂ ಗಿಡಗಳನ್ನು ನೆಡುವ ಮೂಲಕ ಪರಸರವನ್ನು ರಕ್ಷಿಸಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಅರವಿಂದ ಬಡಾವಣೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅರಣ್ಯ ಇಲಾಖೆ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಈ ನೆಲ ಮತ್ತು ಜಲ ಕಾಪಾಡುವದು ನಮ್ಮೆಲ್ಲರ ಆದ್ಯ ಕರ್ತವ್ಯ. ಭೂಮಿಗೆ ಬೇಕಾಗುವಷ್ಟು ಗಿಡ ಮರಗಳಿಲ್ಲದೆ ಮಳೆಯ ಅಭಾವ ಉಂಟಾಗಿ ಬರಗಾಲಕ್ಕೆ ಸಿಕ್ಕು ಜನ ಜೀವನ ತತ್ತರಿಸಿ ಹೋಗುತ್ತಿದೆ. ಹಾಗಾಗಿ ಪ್ರತಿಯೊಬ್ಬರು ಸಸಿಗಳನ್ನು ನೆಡುವ ಕಾರ್ಯವನ್ನು ಕಾನೂನು ಬದ್ಧ ಹೊಣೆಗಾರಿಕೆ ಅಂತಾ ಭಾವಿಸಿ ಸಸಿಗಳನ್ನು ನೆಡಲು ಮುಂದಾಗಬೇಕು ಎಂದರು.
ಕಿರಿಯ ಶ್ರೇಣಿ ಸಹಾಯಕ ಸರ್ಕಾರಿ ಅಭಿಯೋಜಕ ಬಸವರಾಜ ಆಹೇರಿ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಮನೆಯ ಬಳಿ ಅಥವಾ ಜಮೀನುಗಳಲ್ಲಿ ವರ್ಷಕ್ಕೆ ಎರಡರಂತೆ ಗಿಡಗಳನ್ನು ನೆಡುತ್ತ ಬಂದಲ್ಲಿ ಮುಂದಿನ ಪೀಳಿಗೆಗೆ ಆಂಮ್ಲಜನಕದ ಕೊರತೆ ಕಾಣಿಸುವದಿಲ್ಲ, ಹವಾಮಾನದ ವೈಪರೀತ್ಯ ಉಂಟಾಗುವದಿಲ್ಲ ಮತ್ತು ಮಾನವನಿಗೆ ಯಾವುದೇ ರೀತಿಯ ತೊಂದರೆ ಬರುವದಿಲ್ಲ. ರಸ್ತೆಗಳ ಪಕ್ಕದಲ್ಲಿ ವಿದ್ಯುತ್ ಕಂಬಗಳ ಬಳಿ ಗಿಡ ನೆಡುವಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಸರಿಯಾದ ಕ್ರಮಗಳನ್ನು ಪಾಲಿಸಬೇಕು. ರಸ್ತೆ ಅಗಲೀಕರಣಗಳ ಸಂದರ್ಭ ಗಿಡಗಳ ತೆರವು ಆಗದಂತೆ ಮುಂದಾಲೋಚನೆ ನಡೆಸಿ ನೆಡಬೇಕು ಎಂದು ಸಲಹೆ ನೀಡಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಿರಿಯ ಶ್ರೇಣಿ ನ್ಯಾಯಾಧೀಶ ಸಂಪತ್ತಕುಮಾರ ಬಳೂಲಗಿಡದ ಉಪಸ್ಥಿತಿಯಲ್ಲಿ ಹಿರಿಯ ಶ್ರೇಣಿ ಸಹಾಯಕ ಸರ್ಕಾರಿ ಅಭಿಯೋಜಕ ನಾಗರಾಜ ಪೂಜಾರ, ವಲಯ ಅರಣ್ಯಾಧಿಕಾರಿ ಬಿ.ಐ.ಬಿರಾದಾರ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಜಿ.ಸಂಗಾಲಕ, ಹಸಿರುತೋರಣ ಗೆಳೆಯರ ಬಳಗದ ಅಧ್ಯಕ್ಷ ಡಾ.ವಿರೇಶ ಇಟಗಿ, ಮಹಾಬಳೇಶ್ವರ ಗಡೇದ, ಅಶೋಕ ರೇವಡಿ, ನಾಗಭೂಷಣ ನಾವದಗಿ, ಹಿರಿಯ ನ್ಯಾಯವಾದಿಗಳಾದ ಜೆ.ಎ.ಚಿನಿವಾರ, ಎಂ.ಎಚ್.ಹಾಲಣ್ಣವರ, ನ್ಯಾಯಾಲಯದ ಸಿಬ್ಬಂದಿಗಳಾದ ಅರವಿಂದ ಕುಂಬಾರ, ಮಹಾಂತೇಶ ಹಚರೆಡ್ಡಿ, ಅರಣ್ಯ ಇಲಾಖೆಯ ಮಲ್ಲಪ್ಪ ತೇಲಿ, ಯಶವಂತ ರಾಠೋಡ, ರಮೇಶ ಮೆಟಗುಟ್ಟ, ಅಶೋಕ ಚೌವ್ಹಾಣ, ಯಲ್ಲಪ್ಪ ಹಿರೇಕುರುಬರ, ವಿಠ್ಠಲ ಬೋರಟಗಿ, ವಿಜಯಕುಮಾರ ಕಿತ್ತೂರ, ಗುರಣ್ಣ ಮಾಡಗಿ ಸೇರಿದಂತೆ ಮತ್ತೀತರರು ಇದ್ದರು.

