ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದಲ್ಲಿ ಪರಿಸರ ದಿನ ಆಚರಣೆ
ತಿಕೋಟಾ: ತಾಲೂಕಿನ ಬಾಬಾನಗರ ಗ್ರಾಮದ ಶ್ರೀ ಬಸವೇಶ್ವರ ಅಮೃತ ಸರೋವರದ ಆವರಣದಲ್ಲಿ ಹಾಗೂ ಸರಕಾರಿ ಶಾಲೆ ಆವರಣದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಿದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕಿ ಶೋಭಕ್ಕ ಶಿಳೀನ ಅವರು ಮಾತನಾಡಿದರು.
ನಮ್ಮ ತಿಕೋಟಾ ತಾಲೂಕಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿಗಳ ಮೂಲಕ ಒಟ್ಟು ೦೭ ಅಮೃತ ಸರೋವರಗಳನ್ನು ಸರ್ಕಾರದ ನಿಯಮಾನುಸಾರ ನಿರ್ಮಿಸಲಾಗಿದೆ. ಮಳೆಯ ನೀರನ್ನು ತಡೆಹಿಡಿದು ಇಂಗಿಸುವ ಮೂಲಕ ಅಂತರ್ಜಲ್ಲ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಈ ಸರೋವರಗಳನ್ನು ನಿರ್ಮಾಣ ಮಾಡಲಾಗಿದೆ ಮುಂದಿನ ದಿನಮಾನದಲ್ಲಿ ಲಭ್ಯ ಅನುದಾನದಲ್ಲಿ ಸರೋವರಗಳ ಸುತ್ತಲೂ ಉದ್ಯಾನವನಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಇಂದು ಪರಿಸರ ದಿನಾಚರಣೆ ಪ್ರಯುಕ್ತ ಎಲ್ಲ ಅಮೃತ ಸರೋವರಗಳ ಆವರಣದಲ್ಲಿ ಸಸಿಗಳನ್ನು ನೇಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರೇಣುಕಾ ಸೋಲಾಪುರ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ನಮ್ಮ ಗ್ರಾಮದಲ್ಲಿ ಅಮೃತ ಸರೋವರ ಮತ್ತು ಸರಕಾರ ಶಾಲೆಗಳಲ್ಲಿ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. ಪರಿಸರ ದಿನಾಚರಣೆಯ ಮುಖ್ಯ ಉದ್ದೇಶವೆಂದರೆ ಜಾಗತಿಕ ತಾಪಮಾನ ಏರಿಕೆ ನಿಯಂತ್ರಿಸುವುದು, ಹಸಿರು ಪರಿಸರ ನಿರ್ಮಿಸುವುದು, ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಈ ವರ್ಷ ಸರಕಾರದ ಆದೇಶದಂತೆ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಅಮೃತ ಸರೋವರದ ದಡದ ಮೇಲೆ ಸಸಿಗಳನ್ನು ನೀಡಲಾಗಿದೆ ಅವುಗಳ ಪೋಷಣೆಯನ್ನು ಸಹ ಮಾಡುವುದು ನಮ್ಮ ಕರ್ತವ್ಯವಾಗಿದೆ. ಆದಕಾರಣ, ಎಲ್ಲರೂ ಸ್ವಚ್ಚ ಸುಂದರ ಪರಿಸರ ನಿರ್ಮಾಣಕ್ಕಾಗಿ ಪಣ ತೊಡಬೇಕು ಹಾಗೂ ಅದರ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರು ಎಸ್.ಐ.ಬಾಗಲಕೋಟೆ, ತಾಂತ್ರಿಕ ಸಂಯೋಜಕ ಸಂಜೀವಕುಮಾರ ಬಿರಾದಾರ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಅರಣ್ಯ ಇಲಾಖೆಯ ಯಲ್ಲಪ್ಪ ಶಿಂಧಖೇಡ, ಸಾಮಾಜಿಕ ಲೆಕ್ಕ ಪರಿಶೋಧಕ ಸಂಗಮೇಶ ಎಮ್ಮಿ, ತಾಂತ್ರಿಕ ಸಹಾಯಕ ಅಭಿಯಂತರ ಶ್ರೀಧರ ಸಾವಳಗಿ, ಆಡಳಿತ ಸಹಾಯಕ ಸುನೀಲ ಬನಸೋಡೆ, ಶಾಲೆಯ ಶಿಕ್ಷಕರು, ಗ್ರಾಮ ಪಂಚಾಯತಿ ಸಿಬ್ಬಂದಿ ಸೇರಿ ಇತರರು ಹಾಜರಿದ್ದರು.

