ಕಲಕೇರಿಯ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಕಲಕೇರಿ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪರಿಸರದ ರಕ್ಷಣೆಯಾದಾಗ ಮಾತ್ರ ಜೀವ ಸಂಕುಲದ ರಕ್ಷಣೆಯಾಗುತ್ತದೆ ಎಂಬುದನ್ನು ನಾವು ಅರಿತು ನಡೆಯಬೇಕು. ಅಂದಾಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯಯುತ ಮತ್ತು ಸುಂದರ ಪರಿಸರವನ್ನು ಬಿಟ್ಟು ಹೋಗಲು ಸಾಧ್ಯ ಎಂದು ಆದರ್ಶ ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಎಮ್.ಸಜ್ಜನ ಅವರು ಹೇಳಿದರು.
ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಆದರ್ಶ ಪದವಿ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರುಣಿಸಿದ ನಂತರ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಅಭಿವೃದ್ಧಿಯ ನೆಪದಲ್ಲಿ ಗಿಡಮರಗಳನ್ನು ಕಡಿದು ಕಾಂಕ್ರೀಟ್ ಪರಿಸರವನ್ನು ನಿರ್ಮಾಣ ಮಾಡುತ್ತಿದ್ದು, ಇದರಿಂದ ಕಾಲಕಾಲಕ್ಕೆ ಮಳೆಯಾಗದೇ ವಾತಾವರಣದಲ್ಲಿ ತಾಪಮಾನ ಹೆಚ್ಚಾಗಿ ಭೂಮಿಯಲ್ಲಿ ಕಾಲಮಾನಗಳ ಬದಲಾವಣೆಯಾಗುವ ಮೂಲಕ ಜೀವಸಂಕುಲಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಇದರಿಂದ ಜನಜೀವನ ದುಸ್ತರವಾಗಿ ವಿನಾಶದ ಅಂಚಿಗೆ ತಲುಪುವ ಸ್ಥಿತಿ ಉಂಟಾಗಿದ್ದು, ಜೀವ ಸಂಕುಲದ ಉಳಿವಿಗಾಗಿ ಮತ್ತು ಆರೋಗ್ಯ್ತ, ಆಯಸ್ಸು ಹೆಚ್ಚಾಗಬೇಕಾದರೆ ಪರಿಸರದ ಆರೋಗ್ಯದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಪ್ರತಿಯೊಬ್ಬರೂ ಗಿಡಮರಗಳನ್ನು ಉಳಿಸಿ ಬೆಳೆಸುವುದನ್ನು ನಮ್ಮ ಆದ್ಯ ಕರ್ತವ್ಯವಾಗಿಸಿಕೊಳ್ಳಬೇಕು ಎಂದರು.
ಈ ವೇಳೆ ಸಂಸ್ಥೆಯ ಪದವಿ, ಪಿಯುಸಿ, ಪ್ಯಾರಾಮೆಡಿಕಲ್ ಹಾಗೂ ಡಿ.ಫಾರ್ಮಸಿ ಕಾಲೇಜು ಪ್ರಾಚಾರ್ಯರು ಮತ್ತು ಉಪನ್ಯಾಸಕರು ಉತ್ಸಾಹದಿಂದ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರುಣಿಸುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು.

