ಚಿಮ್ಮಡದ ಯುವಕರ ಪರಿಸರ ಪ್ರೇಮ | ಅರಣ್ಯ ಇಲಾಖೆ & ಗ್ರಾಮ ಪಂಚಾಯತಿ ಸಾಥ್
– ಇಲಾಹಿ ಇ. ಜಮಖಂಡಿ
ಚಿಮ್ಮಡ: ಕಾಡು ಬೆಳೆಸಿ, ನಾಡು ಉಳಿಸಿ. ಅರಣ್ಯ ಇಲಾಖೆಯ ಈ ಘೋಷವಾಕ್ಯವನ್ನು ಅಕ್ಷರಶಃ ನಿಜವಾಗಿಸಿದ್ದಾರೆ ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಪರಿಸರ ಪ್ರೇಮಿ ಯುವಕರು.
ಮನೆಯ ಮಂದೆ ಒಂದು ಸಸಿ ನೆಟ್ಟು ಪೋಷಣೆ ಮಾಡಲಾಗದ ಇಂದಿನ ದಿನಮಾನದಲ್ಲಿ ಯಾವುದೇ ಫಲಾಪೆಕ್ಷೆ ಇಲ್ಲದೇ ಗ್ರಾಮದ ಗುಡ್ಡದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ಸುತ್ತ ೨೪ ಎಕರೆ ಬರಡು ತಗ್ಗು ದಿನ್ನೆ ಇರುವ ಪ್ರದೇಶದಲ್ಲಿ ಹಾಗೂ ಹಿಂದೂ ರುದ್ರಭೂಮಿಯ ೮ ಎಕರೆ ಭೂಮಿಯಲ್ಲಿ ವಿವಿಧ ಬಗೆಯ ಸುಮಾರು ೫ ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡುವ ಮೂಲಕ ಈ ಭಾಗದಲ್ಲಿ ಪರಿಸರ ಕ್ರಾಂತಿಯನ್ನೇ ಮಾಡಿದ್ದಾರೆ.
ಕಳೆದ ೨೦ ವರ್ಷಗಳ ಹಿಂದೆ ಗ್ರಾಮದ ಲಾಲಸಾಬ ಸರ್ಕಾವಸ ಎಂಬಾತ ದೇವಸ್ಥಾನದ ಆವರಣದಲ್ಲಿ ನೂರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಘಟಪ್ರಭಾ ಎಡದಂಡೆ ಕಾಲುವೆಯಿಂದ ಹೆಗಲ ಮೇಲೆ ನೀರು ಹೊತ್ತು ತಂದು ನೀರುಣಿಸಿ ಅವುಗಳನ್ನು ಪೋಷಣೆ ಮಾಡಿದ್ದರು, ಅನಾರೋಗ್ಯದಿಂದ ಲಾಲಸಾಬ ಮೃತನಾದ ನಂತರ ಆ ಜವಾಬ್ದಾರಿಯನ್ನು ಸಮಾಜ ಮುಖಿ ಯುವಕರು ಸಂಘಟಿತರಾಗಿ ಗಿಡಗಳ ಪೋಷಣೆಗೆ ಮುಂದಾದರು, ಅಂದಿನಿಂದ ಇದುವರೆಗೆ ಮೂರು ಹಂತಗಳಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು ಅವುಗಳ ಪೋಷಣೆ ಮಾಡುತಿದ್ದಾರೆ. ನೀರಿನ ಅಭಾವ ಉಂಟಾದಾಗ ಟ್ಯಾಂಕರ ಮೂಲಕ ನೀರು ಪೋರೈಸುತಿದ್ದರು. ನಂತರ ಗ್ರಾಮಸ್ಥರ ಸಹಕಾರ ದೊಂದಿಗೆ ಎರಡು ಸ್ವಂತ ಕೊಳವೇಬಾವಿಗಳನ್ನೇ ಕೊರೆದು ಹನಿ ನೀರಾವರಿ ಪದ್ದತಿಯ ಮೂಲಕ ನೀರು ಪೋರೈಸಿ ನೆಡಲಾದ ಗಿಡಗಳಲ್ಲಿ ಒಂದೂ ಗಿಡ ಹಾಳಾಗದಂತೆ ಬೆಳೆಸುವ ಮೂಲಕ ಗ್ರಾಮವನ್ನು ತಂಪಾಗಿಸಿದ್ದಾರಲ್ಲದೇ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಓರ್ವ ಕಾವಲುಗಾರನನ್ನೂ ನೇಮಕ ಮಾಡಿ ಗಿಡ ಮರಗಳನ್ನು ಪೋಷಿಸಲಾಗುತ್ತಿದೆ.
ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಶ್ರೀ ಪ್ರಭುಲಿಂಗೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಜನ ಪ್ರಸಾದ ಸ್ವೀಕರಿಸುವ ಮೈದಾನದಲ್ಲಿ ಬಿಸಿಲೇ ಬಾರದಂತೆ ದಟ್ಟ ಮರಗಳನ್ನು ಬೆಳೆಸಿ ಇಡೀ ವಾತಾವರಣವನ್ನೇ ಕಾಡಿನಂತೆ ಬೆಳೆಸಲಾಗಿದೆ. ಇಂಪಾಗಿ ಬೆಳೆದಿರುವ ಈ ಗಿಡಗಳ ಅಂದ ನೇರೆಯ ಗ್ರಾಮ ಪಟ್ಟಣದ ಯುವಕರಿಗೆ ಸೆಲ್ಫಿ ಸ್ಫಾಟ್, ರೀಲ್ಸ ಚಿತ್ರೀಕರಣದ ತಾಣವಾಗಿ ಪರಿಚಿತವಾಗಿದೆ.

“ಸಂಘಟಣೆಯಲ್ಲಿ ಸಮಾನ ಮನಸ್ಕ ಸದಸ್ಯರಿರುವುದರಿಂದ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗಿದೆ, ಗ್ರಾಮದುದ್ದಕ್ಕೂ ಹಸಿರು ವನ ನಿರ್ಮಿಸಿ ಬೆಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುವಂತೆ ನೂರಾರು ಹಣ್ಣು ಹಂಪಲಗಳ ಗಿಡಗಳನ್ನು ನೆಡಲಾಗಿದೆ. ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ, ಗ್ರಾಮ ಪಂಚಾಯತಿ ಹಾಗೂ ಗ್ರಾಮದ ಪ್ರಮುಖರು ನಮ್ಮ ಪ್ರತಿಯೊಂದು ಕಾರ್ಯಕ್ಕೆ ಸಹಕಾರ ನೀಡುತಿದ್ದು ಮುಂಬರುವ ದಿನಗಳಲ್ಲಿ ಗ್ರಾಮವನ್ನು ಪ್ರವಾಸಿ ಸ್ಥಳವನ್ನಾಗಿ ರೂಪಿಸುವ ಯೋಚನೆಯಿದೆ.”
– ಬಸವರಾಜ ಬಳಗಾರ,
ಅಧ್ಯಕ್ಷರು ಬಸವೇಶ್ವರ ಯುವಕ ಸಂಘ ಚಿಮ್ಮಡ.

