ಬಸವನಬಾಗೇವಾಡಿ: ಇಂದಿನ ಆಧುನಿಕ ಯುಗದಲ್ಲಿ ಶುದ್ಧವಾದ ಆಹಾರ ಸೇವನೆ, ಶುದ್ಧ ಜೀವನ ನಡೆಸದೇ ಇರುವದರಿಂದಾಗಿ ಶತಾಯುಷಿಗಳಾಗಿ ಬಾಳುವುದು ಅಪರೂಪವಾಗಿದೆ. ಡೋಣೂರು ಗ್ರಾಮದಲ್ಲಿ ಇಬ್ಬರು ಶುದ್ಧ ಜೀವನ, ಶುದ್ಧ ಆಹಾರ ಸೇವನೆಯಿಂದಾಗಿ ಶತಾಯುಷಿಗಳಿರುವುದು ವಿಶೇಷ. ಇವರನ್ನು ಗುರುತಿಸಿ ಡೋಣೂರ ಕಟ್ಟೀಮನಿ ಹಿರೇಮಠದಿಂದ ಶ್ರೀಗಳು ಸನ್ಮಾನಿಸುತ್ತಿರುವುದು ಯುವಜನಾಂಗಕ್ಕೆ ಉತ್ತಮ ಸಂದೇಶ ನೀಡುತ್ತದೆ ಎಂದು ಬೆಂಗಳೂರಿನ ವಿಭೂತಿಪುರಮಠ ಹಾಗೂ ಮನಗೂಳಿ ಪಟ್ಟೀಕಂಥಿ ಹಿರೇಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಡೋಣೂರು ಗ್ರಾಮದ ಕಟ್ಟೀಮನಿ ಹಿರೇಮಠದ ಗುರುಮರುಳಸಿದ್ದೇಶ್ವರ ಹಾಗೂ ಚೌಡಮ್ಮದೇವಿ ಜಾತ್ರಾಮಹೋತ್ಸವ ಹಾಗೂ ಹಜರತ್ ಸುಲೇಮಾನ್ ಉರುಸು ಅಂಗವಾಗಿ ಹಮ್ಮಿಕೊಂಡಿರುವ ಕಲಬುರಗಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಸೋಮವಾರ ಸಂಜೆ ಶತಾಯುಷಿಗಳನ್ನು ಶ್ರೀಮಠದಿಂದ ಸನ್ಮಾನಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಆಧುನಿಕತೆಯ ಬದುಕಿಗೆ ಮಾರುಹೋಗಿ ಉಡುಗೆ-ತೊಡುಗೆ ಆಟ-ಪಾಠ, ನಂಬಿಕೆ, ಶ್ರದ್ಧೆ, ಆಚಾರ-ವಿಚಾರ, ಸಂಸ್ಕ್ರತಿ, ಸಂಪ್ರದಾಯಗಳ ಬಹುದೊಡ್ಡ ಬದಲಾವಣೆ ಮತ್ತು ಅಂತರವನ್ನು ಕಾಣಲಾಗುತ್ತಿದೆ. ಜೀವನ ಶ್ರದ್ಧೆ ಶಿಥಿಲಗೊಳ್ಳುತ್ತಿರುವ ಬಗ್ಗೆ ಆತಂಕ ಪಡಿಸುತ್ತಾ ೪೬ ವರ್ಷಗಳಿಂದ ಪುರಾಣ ಪ್ರವಚನ, ಶತಾಯುಷಿಗಳಾಗಿರುವವರ ಸನ್ಮಾನ ನಿಜಕ್ಕೂ ಮೆಚ್ಚುವಂತಹದ್ದು ಎಂದರು.
ನೇತೃತ್ವ ವಹಿಸಿದ್ದ ಕಟ್ಟೀಮನಿ ಹಿರೇಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಾತ್ರಾಮಹೋತ್ಸವದಂಗವಾಗಿ ಶ್ರೀಮಠದಿಂದ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬರಲಾಗುತ್ತಿದೆ. ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಬೆಂಗಳೂರಿನಲ್ಲಿ ತಮ್ಮ ಶ್ರೀಮಠದಿಂದ ಬಡ ಗ್ರಾಮೀಣ ಪ್ರತಿಭಾವಂತ ನೂರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಕೈಂಕರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಪ್ರವಚನಕರಾದ ಹನುಮನಾಳದ ಶಿವಾನಂದೀಶ್ವರ ಶಾಸ್ತ್ರೀಜಿ, ಗವಾಯಿಗಳಾದ ರಾಜು ಗುಬ್ಬೇವಾಡ, ತಬಲಾ ವಾದಕ ಬಸವರಾಜ ಹಿರೇಮಠ ಇದ್ದರು. ಶತಾಯುಷಿಗಳಾದ ಡೋಣೂರ ಗ್ರಾಮದ ಪರಸಪ್ಪ ಯಲ್ಲಪ್ಪ ಕಠಾರಿ(೧೦೮), ಬಸಪ್ಪ ರಾಜನಾಳ (೧೦೭), ಮುಳ್ಳಾಳ ಗ್ರಾಮದ ಈರಮ್ಮ ಹಿರೇಮಠ(೧೧೧), ಪ್ರತಿಭಾವಂತ ವಿದ್ಯಾರ್ಥಿ ಮಯನ ಶಿವಲಿಂಗಯ್ಯ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಶಿಕ್ಷಕ ಸಿದ್ದರಾಮ ಹಳ್ಳಿ ಸ್ವಾಗತಿಸಿ, ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

