ಚಡಚಣ: ದಿ. ಎಂ.ಆರ್.ಜಹಾಗೀರದಾರ ಜನ್ಮ ಶತಮಾನೋತ್ಸವ ಸಮಾರಂಭ
ಚಡಚಣ: ಸ್ಥಳೀಯ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ, ಸಂಗಮೇಶ್ವರ ಮಾಧ್ಯಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದ ದಿ. ಎಂ.ಆರ್.ಜಹಾಗೀರದಾರ ಇವರ ಜನ್ಮ ಶತಮಾನೋತ್ಸವವನ್ನು ಅತ್ಯಂತ ಸಡಗರದಿಂದ ಸಸಿಗೆ ನೀರುಣಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂ. ಶಿ.ಸಂಸ್ಥೆ ನಿರ್ದೇಶಕ ಬಸವರಾಜ ಯಂಕಂಚಿ ಅವರು, ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದಿಗೂ ಹುಸಿಯಾಗುವುದಿಲ್ಲ ಎನ್ನುವ ಹಾಗೆ ದಿ.ಜಹಾಗೀರದಾರ ಸರ್ ತಮ್ಮ ಶಿಷ್ಯರಿಗೆ ಕಲಿಸಿದ ಪಾಠ ಎಂದಿಗೂ ಮರೆಯಲಾಗದು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸತತವಾಗಿ ಪ್ರಯತ್ನ ಪಡುತ್ತಿದ್ದರು. ಅಲ್ಲದೆ ತಮ್ಮ ಜೀವನದುದ್ದಕ್ಕೂ ಹತ್ತನೇಯ ವರ್ಗದ ಮಕ್ಕಳಿಗೆ ಪುಕ್ಕಟೆಯಾಗಿ ಕ್ಲಾಸ್ ಹೇಳಿದರು. ಪ್ರತಿಯೊಬ್ಬ ಮಗುವಿನ ಮೇಲೆ ಅತೀ ಸೂಕ್ಷ್ಮವಾಗಿ ಲಕ್ಷ ವಹಿಸುತ್ತಿದ್ದರು ಅಲ್ಲದೆ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಸಹ ಮಾಡುತ್ತಿದ್ದರು. ಅವರು ವರ್ಗ ಕೋಣೆಗೆ ಬಂದರೆ ಮಕ್ಕಳು ಅತ್ಯಂತ ಶಾಂತ ರೀತಿಯಿಂದ ಕುಳಿತುಕೊಳ್ಳುತ್ತಿದ್ದರು. ದಿ. ಜಹಾಗೀರದಾರ ಸರ್ ಮುಂಬೈ ಕರ್ನಾಟಕದ ಸರ್ಕಾರದಲ್ಲಿ ಪಿಎಸ್ಐ ನೌಕರಿಯನ್ನು ಬಿಟ್ಟು ಶ್ರೀ ಸಂಗಮೇಶ್ವರ ಮಾಧ್ಯಮಿಕ ಶಾಲೆಯಲ್ಲಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿದರು. ಅವರು ಗುರುಗಳಿಗೆ ಗುರುಗಳಾಗಿದ್ದರು ಎಂದು ಶ್ಲಾಘಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಎಸ್. ಆರ್. ಡೋಣ ಗಾವ್ ಅಧ್ಯಕ್ಷರು ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆ ಇವರು ಮಾತನಾಡಿ, ದಿ. ಜಹೀರ್ದಾರ್ ಸರ್ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುವ ಶ್ರೀ ಸಂಗಮೇಶ್ವರ ಮಾಧ್ಯಮಿಕ ಶಾಲೆಯ ಮೊದಲ ಮುಖ್ಯೋಪಾಧ್ಯಾಯರಾಗಿದ್ದರು. ಅಲ್ಲದೆ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆ ಬೆಳೆಯಲು ಇವರ ಕೊಡುಗೆ ಅಪಾರ. ಇವರು ತಮ್ಮ ಶಿಷ್ಯ ಬಳಗಕ್ಕೆ ಕೇವಲ ಶಿಕ್ಷಕರಾಗಿರದೆ ಮಾರ್ಗದರ್ಶಕರು, ಒಡನಾಡಿಗಳು, ಸ್ನೇಹಿತರು, ಗುರುಗಳಾಗಿಯೂ ಇದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ಎಂ ಚೋಳಕೆ ನಿವೃತ್ತ ಪ್ರಿನ್ಸಿಪಾಲ್, ಡಾ. ಡಿ.ಬಿ. ಕಟಗೇರಿ, ಎಸ್ ಕೆ ಕುಲಕರ್ಣಿ ನಿವೃತ್ತ ಪ್ರಿನ್ಸಿಪಾಲ್, ಎಸ್ ಜಿ ಜಂಗಮಶೆಟ್ಟಿ ನಿವೃತ್ತ ಪ್ರಿನ್ಸಿಪಾಲ್, ಆರ್ ಪಿ ಬಗಲಿ ನಿವೃತ್ತ ಉಪನ್ಯಾಸಕರು, ಮುಚ್ಚಂಡಿ, ಗುರುಬಾಳಪ್ಪ ಗಿಡವೀರ್, ಡಾ. ಎಸ್ ಎಸ್ ಚೋರಗಿ ಎಡಿಎಂ. ಎಸ್ ಎಸ್ ಯರಗಲ್, ಮತ್ತು ದಿ. ಜಾಗಿರ್ದಾರ್ ಸರ್ ಇವರ ಮೊಮ್ಮಗಳಾದ ಶ್ರೀಮತಿ ಮೃಣಾಲಿನಿ ದೇಶಪಾಂಡೆ ಮಾತನಾಡಿದರು. ಮುಖ್ಯ ಗುರು ಎಚ್ ಆರ್ ಬಗಲಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಜಿ ಉಮಾರಾಣಿ ಸ.ಶಿ. ,ಮತ್ತು ಶ್ರೀಮತಿ ಅನುರಾಧ ಎಸ್ ಸ.ಶಿ. ನಿರೂಪಿಸಿದರು, ಅಲ್ಲದೆ ಶ್ರೀ ಟಿ. ಆರ್. ಕೋಳಿ ಸ.ಶಿ. ವಂದಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಎಲ್ಲಾ ಅಂಗ ಸಂಸ್ಥೆಗಳ ಮುಖ್ಯಸ್ಥರು ಸಿಬ್ಬಂದಿ ವರ್ಗದವರು ಹಾಗೂ ಶ್ರೀ ಸಂಗಮೇಶ್ವರ ಮಾಧ್ಯಮಿಕ ಶಾಲೆಯ ಎಲ್ಲ ಮಕ್ಕಳು, ಸಿಬ್ಬಂದಿ ವರ್ಗ, ಊರಿನ ಗಣ್ಯರು ದಿವಂಗತ ಎಂ.ಆರ್. ಜಾಗೀರ್ದಾರ್ ಸರ್ ಅವರ ಕುಟುಂಬದ ಸದಸ್ಯರು ಮತ್ತು ಶಿಷ್ಯಬಳಗ ಪಾಲ್ಗೊಂಡಿದ್ದರು.

