ಮುದ್ದೇಬಿಹಾಳದ ಮಾರುತಿ ನಗರದ ನಿವಾಸಿಗಳಿಂದ ಪುರಸಭೆಗೆ ಮುತ್ತಿಗೆ
ಮುದ್ದೇಬಿಹಾಳ: ನಮ್ಮ ವಾರ್ಡನಲ್ಲಿ ಕುಡಿಯುವ ನೀರು ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸ್ಥಗಿತಗೊಳಿಸಲಾದ ಬೋರ್‌ವೆಲ್ ಕಾರ್ಯ ಕೂಡಲೇ ಪ್ರಾರಂಭಿಸಬೇಕು ಮತ್ತು ನಮ್ಮ ಎಲ್ಲ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿ ಪುರಸಭೆ ಸದಸ್ಯ ಸದಾಶಿವ ಮಾಗಿ ಸೇರಿದಂತೆ ಪಟ್ಟಣದ ಮಾರುತಿ ನಗರದ ನಿವಾಸಿಗಳು ಪುರಸಭೆ ಮುಖ್ಯದ್ವಾರದಲ್ಲಿ ಅಡ್ಡಲಾಗಿ ಕುಳಿತು ಶನಿವಾರ ದಿಢೀರ ಪ್ರತಿಭಟನೆ ನಡೆಸಿದರು.
ನಮ್ಮ ಬಡಾವಣೆಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತಿಲ್ಲ. ಮಳೆಯಾದರೆ ಸಾಕು ರಸ್ತೆ ತುಂಬೆಲ್ಲ ಚರಂಡಿಯ ಕೊಳಕು ನೀರು ಬಂದು ತಿರುಗಾಡಲು ಬಾರದಷ್ಟು ಸಮಸ್ಯೆ ತಂದೊಡ್ಡುತ್ತದೆ. ಹಿಂದಿನ ಶಾಸಕರ ಅವಧಿಯಲ್ಲಿ ರಸ್ತೆ ಮಾಡಲೆಂದು ಅಗೆದಿದ್ದ ರಸ್ತೆಯನ್ನು ಇನ್ನೂ ದುರಸ್ತಿ ಮಾಡಿಲ್ಲ. ಕುಡಿಯಲು ನೀರು ಸರಿಯಾಗಿ ಬರಲ್ಲ. ಹೀಗೆ ಒಂದಲ್ಲ ಎರಡಲ್ಲ ಸಾಕಷ್ಟು ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ನಮಗೆ ಕೂಡಲೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಬೇಕು ಎಂದು ಪಟ್ಟು ಹಿಡಿದರು.
ತಮ್ಮ ಆರೋಗ್ಯದಲ್ಲಿ ಏರುಪೇರಾದ ನಿಮಿತ್ಯ ಕಚೇರಿಗೆ ಮುಖ್ಯಾಧಿಕಾರಿ ಆಗಮಿಸಿಲ್ಲ ಎಂದು ಅರಿತ ಪ್ರತಿಭಟನಾಕಾರರು ತಮ್ಮ ವಾರ್ಡಗೆ ಬಂದು ಸಮಸ್ಯೆಯನ್ನು ಗಮನಿಸುವಂತೆ ವ್ಯವಸ್ಥಾಪಕರನ್ನು ಒತ್ತಾಯಿಸಿದರು. ಪ್ರತಿಭಟನಾಕಾರರ ಜೊತೆಗೂಡಿ ಆಗಮಿಸಿದ ವ್ಯವಸ್ಥಾಪಕರು ಸಮಸ್ಯೆಗಳನ್ನು ಪರಿಶೀಲಿಸಿದರು. ನ್ಯಾಯಾಧೀಶರ ನಿವಾಸದ ಬಳಿ ಸ್ಥಗಿತಗೊಂಡಿದ್ದ ಬೋರ್‌ವೆಲ್ ಅಳವಡಿವಡಿಸುವ ಕಾರ್ಯ ಮುಂದುವರೆಸಿದರು.
ಬೋರ್‌ವೆಲ್ ಕೊರೆಸುವ ಕಾರ್ಯ ಪ್ರಾರಂಭವಾಗುತ್ತಿದ್ದಂತೆ ಖುಷಿಯಾದ ಪ್ರತಿಭಟನಾಕಾರರು ಅದಷ್ಟು ಬೇಗ ನಮ್ಮ ಇನ್ನುಳಿದ ಎಲ್ಲ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ಮಹಾಂತೇಶ ಬಿರಾದಾರ ವಕೀಲರು, ಆನಂದ ತುಪ್ಪದ, ಸಂತೋಷ ಮಡಿವಾಳರ, ತಿಪ್ಪಣ್ಣ ಉಪನಾಳ, ರವಿ ಝಿಂಗಾಡೆ, ನೂರಲಂ ಖಾನ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು.

