ಮತ ಎಣಿಕೆ ಸಿಬ್ಬಂದಿ ಕಡ್ಡಾಯವಾಗಿಗುರುತಿನ ಚೀಟಿ ಧರಿಸಲು ಜಿಲ್ಲಾಧಿಕಾರಿ ಸೂಚನೆ
ವಿಜಯಪುರ: ಮತ ಎಣಿಕೆ ಸಿಬ್ಬಂದಿ ಮತ ಎಣಿಕೆ ಕೇಂದ್ರದ ಒಳಗಡೆ ಮೊಬೈಲ್ ಪೋನ್, ಸ್ಮಾರ್ಟ್ ವಾಚ್, ಟ್ಯಾಬ್, ವೈರಲೆಸ್ ಉಪಕರಣಗಳನ್ನು ತರುವುದು ನಿಷೇಧಿಸಲಾಗಿದೆ. ಎಲ್ಲರೂ ಕಡ್ಡಾಯವಾಗಿ ಜಿಲ್ಲಾಡಳಿತ ನೀಡಿರುವ ಗುರುತಿನ ಚೀಟಿ ಧರಿಸಿಕೊಂಡು ಬರಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು
ನಗರದ ಸೈನಿಕ್ ಶಾಲೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಮತ ಎಣಿಕೆ ಪೂರ್ವ ಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ಮತಎಣಿಕೆ ಕೇಂದ್ರದಲ್ಲಿ ಯಾವುದೇ ಗೊಂದಲಕ್ಕೆ ಕಾರಣವಾಗಬಾರದು ಎಂಬ ಹಿನ್ನಲೆಯಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತಎಣಿಕೆ ಕೇಂದ್ರಗಳಲ್ಲಿ ಮೊಬೈಲ್ನೊಂದಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೆಲವು ಅಗತ್ಯತೆ ಅನುಗುಣವಾಗಿ ಸಹಾಯಕ ಚುನಾವಣೆ ಅಧಿಕಾರಿಗಳು, ತಾಂತ್ರಿಕ ಅಧಿಕಾರಿಗಳು ಅವಶ್ಯವಿದ್ದಲ್ಲಿ ಮತ ಎಣಿಕೆಯ ಹಾಲ್‌ನ ಹೊರಗಡೆ ಮಾತ್ರ ಬಳಸಬಹುದು ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ಮತ ಎಣಿಕೆ ನಡೆಯುವ ಸೈನಿಕ ಶಾಲೆಯ ಸುತ್ತಲೂ ೨೦೦ ಮೀಟರ್ ಅಳತೆಯಲ್ಲಿ ನಿಷೇಧಾಜ್ಞೆ ಇರಲಿದ್ದು, ಮತ ಎಣಿಕೆ ಕೇಂದ್ರದ ಒಳಗೆ ಹೋಗಲು ವಿವಿಧ ಹಂತಗಳಲ್ಲಿ ಭದ್ರತೆ ಇದ್ದು, ಮತ ಎಣಿಕೆ ಕರ್ತವ್ಯಕ್ಕೆ ಹಾಜರಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಜಿಲ್ಲಾಡಳಿತ ನೀಡಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಿಕೊಂಡು ಪ್ರವೇಶಿಸಬೇಕು ಎಂದು ಹೇಳಿದರು.
ಮತ ಎಣಿಕೆಯ ಸ್ಟ್ರಾಂಗ್ ರೂಂನ್ನು ಜೂನ್. ೪ ರಂದು ಬೆಳಿಗ್ಗೆ ೭ ಗಂಟೆಗೆ ತೆರೆಯಲಾಗುವುದು. ಸರಿಯಾಗಿ ಎಂಟು ಗಂಟೆಗೆ ಸರ್ವಿಸ್ ಓಟ್, ಪೋಸ್ಟಲ್ ಓಟ್, ಹಾಗೂ ಮತಯಂತ್ರಗಳ ಮತ ಎಣಿಕೆ ಆರಂಭವಾಗಿರುವುದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಗಧಿತ ಸಮಯದ ಮುಂಚೆ ಹಾಜರಿರಬೇಕು. ಅಧಿಕಾರಿಗಳಿಗೆ, ಮತ ಎಣಿಕೆ ಸಿಬ್ಬಂದಿ ಮತ್ತು ಚುನಾವಣಾ ಎಜೆಂಟ್‌ರಿಗೆ ಹಾಗೂ ಹೆಸ್ಕಾಂ, ವೈದ್ಯಕೀಯ ಸಿಬ್ಬಂದಿಗಳಿಗೆ ಗುರುತಿನ ಚೀಟಿಯನ್ನು ನೀಡಿದ್ದು ಕಡ್ಡಾಯವಾಗಿ ಅವುಗಳನ್ನು ಧರಿಸಿಕೊಂಡು ಹಾಜರಿರಬೇಕು ಎಂದು ಸೂಚಿಸಿದರು.
ಮತ ಎಣಿಕೆಯ ವೇಳೆ ಗಾಳಿ, ಮಳೆ ಇತ್ಯಾದಿ ಕಾರಣಕ್ಕೆ ವಿದ್ಯುತ್ ವ್ಯತ್ಯಯ ಉಂಟಾಗದಂತೆ ಮುನ್ನೆಚ್ಚರಿಕೆಯಾಗಿ ಜನರೇಟರ್ ವ್ಯವಸ್ಥೆ ಸಿದ್ದ ಮಾಡಿಕೊಳ್ಳಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಆರೋಗ್ಯ ಇಲಾಖೆಯ ಅಧಿಕಾರಿಗಳು ಆಂಬ್ಯುಲೆನ್ಸ ಸಿಬ್ಬಂದಿ ಮತ್ತು ಪ್ರಥಮ ಚಿಕಿತ್ಸೆ ವ್ಯವಸ್ಥೆ ಮಾಡಿಕೊಂಡಿರಬೇಕು ಎಂದು ಎಂದರು. ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಊಟೋಪಚಾರದ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯದಂತಹ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಹೇಳಿದರು.
ಅಗ್ನಿಶಾಮಕ ಹಾಗೂ ಪೊಲೀಸ್ ಅಧಿಕಾರಿಗಳು ಯಾವುದೇ ಅವಘಡ ಅಥವಾ ಅವ್ಯವಸ್ಥೆ ಉಂಟಾಗದತೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಸೇರಿದಂತೆ ಸಹಾಯಕ ಚುನಾವಣಾ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

