ಮುದ್ದೇಬಿಹಾಳ: ತಂಬಾಕು ಸೇವನೆಯಿಂದಾಗುವ ಅಪಾಯಗಳ ಕುರಿತು ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ತಂಬಾಕು ಬಳಕೆ ಕಡಿಮೆಯಾಗುತ್ತಿಲ್ಲ. ಸಾರ್ವಜನಿಕರು ಎಚ್ಚೆತ್ತು ಪ್ರಾಣಕ್ಕೆ ಅಪಾಯ ತಂದೊಡ್ಡುವ ತಂಬಾಕು ಸೇವನೆಯನ್ನು ಸಂಪೂರ್ಣ ತ್ಯಜಿಸಿ ತಮ್ಮ ಆರೋಗ್ಯದ ಜೊತೆಗೆ ಪರಿಸರವನ್ನು ರಕ್ಷಿಸಲು ಮುಂದಾಗಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.
ಪಟ್ಟಣದ ಹೊರಪೇಟೆ ಗಲ್ಲಿಯಲ್ಲಿರುವ ಸಿದ್ಧಗಂಗಾ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿದ್ಧಗಂಗಾ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂಬಾಕು ಮುಕ್ತ ವಲಯಗಳಲ್ಲಿ ತಂಬಾಕು ಮಾರಾಟ ಮಾಡುವವರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಎಲ್ಲಂದರಲ್ಲಿ ಬೀಡಿ, ಸಿಗರೇಟ್, ಗುಟಕಾ ಜಗಿದು ಉಗಿಯುವವರಿಗೆ ಪೊಲೀಸರು ಸೂಕ್ತ ಶಿಕ್ಷೆಗೆ ಗುರಿಪಡಿಸಬೇಕು. ತಂಬಾಕು ಸೇವನೆಯಿಂದಾಗುವ ಗಂಭೀರ ಪರಿಣಾಮಗಳ ಕುರಿತು ಆರೋಗ್ಯ ಇಲಾಖೆ ಮೇಲಿಂದ ಮೇಲೆ ಜಾಗೃತಿ ಮೂಡಿಸಬೇಕು ಅಂದಾಗ ತಂಬಾಕು ಬಳಕೆಯ ಪ್ರಮಾಣ ಕಡಿಮೆಯಾಗಲು ಸಾಧ್ಯವಿದೆ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ ತಂಬಾಕು ಸೇವನೆಯಿಂದ ಜಾಗತಿಕ ಮಟ್ಟದಲ್ಲಾಗುವ ಹಾನಿಯ ಅರಿವು ಮೂಡಿಸುವ ಉದ್ದೇಶದಿಂದ ಪ್ರತೀ ವರ್ಷ ಮೇ೩೧ ರಂದು ವಿಶ್ವ ತಂಬಾಕು ರಹಿತ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ. ಯುವಕರಲ್ಲಿ ಶೋಕಿಗಾಗಿ ಪ್ರಾರಂಭವಾಗುವ ಈ ತಂಬಾಕು ಸೇವನೆ ಅಭ್ಯಾಸ ಮುಂದೆ ಚಟವಾಗಿ ಮಾರ್ಪಡುತ್ತದೆ. ಜೇಬಿಗೆ ಕತ್ತರಿ ಹಾಕಿಕೊಂಡು ಪ್ರಾಣಕ್ಕೆ ಆಪತ್ತು ತಂದುಕೊಳ್ಳುವ ಬದಲು ತಂಬಾಕು ಸೇವನೆಯಿಂದ ದೂರವಿರುವದು ಉತ್ತಮ ಎಂದರು.
ತಾಲೂಕು ಆರೋಗ್ಯ ಆಧಿಕಾರಿ ಡಾ.ಸತೀಶ ತಿವಾರಿ ಮಾತನಾಡಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ, ಸೇವನೆಯಿಂದ ಹೊರಬಂದಲ್ಲಿ ಆರೋಗ್ಯದಲ್ಲಾಗುವ ಲಾಭಗಳ ಕುರಿತು ಸುಧೀರ್ಘವಾಗಿ ವಿವರಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅನಸೂಯಾ ತೇರದಾಳ ವಿಶೇಶ ಉಪನ್ಯಾಸ ನೀಡಿದರು. ಇದೇ ವೇಳೆ ತಾಲೂಕು ಆರೋಗ್ಯ ಇಲಾಖೆಯ ವತಿಯಿಂದ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಇರುವ ವಾಲ್‌ಪೋಸ್ಟರ್‌ಗಳನ್ನು ಬಿಡುಗಡೆ ಗೊಳಿಸಲಾಯಿತು. ಗ್ರೇಡ್ ೨ ತಹಶೀಲ್ದಾರ ಜಿ.ಎನ್.ಕಟ್ಟಿ, ತಾಲೂಕು ಪಂಚಾಯತ ಕಾರ್ಯಾಲಯದ ಡಿ.ಬಿ.ಅಂಜುಟಗಿ, ಸಿಡಿಪಿಓ ಶಿವಮೂರ್ತಿ ಕುಂಬಾರ, ಪ್ರಾಂಶುಪಾಲೆ ರಾಜಶ್ರೀ ಮೇಟಿ, ಎಂ.ಎಸ್.ನಾಶಿ, ನ್ಯಾಯಾಲಯದ ಸಿಬ್ಬಂದಿ ಅರವಿಂದ ಕುಂಬಾರ ಮತ್ತು ಮಹಾಂತೇಶ ಹಚರಡ್ಡಿ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ ಸೇರಿದಂತೆ ಮತ್ತೀತರರು ಇದ್ದರು.
ತಂಬಾಕು ಸೇವನೆಗೆ ಅಂಡಿಕೊಂಡು ಅದರಿಂದಾಚೆ ಬರಲು ಇಚ್ಛಿಸುವ ಆಸಕ್ತರಿಗೆ ವಿಜಯಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ಅವಕಾಶ ಕಲ್ಪಿಸಲಾಗಿದೆ. ಈ ಚಿಕಿತ್ಸೆ ಪಡೆದಲ್ಲಿ ತಂಬಾಕು ಸೇವನೆಯಿಂದ ಆಚೆ ಬರಲು ಖಂಡಿತ ಸಾಧ್ಯವಿದೆ. ಈ ಬಗ್ಗೆ ತಾಲೂಕು ಆಸ್ಪತ್ರೆಗಳಲ್ಲಿ ಓಪಿಡಿ ಮಾಡಿಸುವ ಮೂಲಕವೂ ಭೇಟಿ ನೀಡಬಹುದು.”
– ಡಾ.ಸತೀಶ ತಿವಾರ., ತಾಲೂಕು ಆರೋಗ್ಯ ಅಧಿಕಾರಿ.

