ಮುದ್ದೇಬಿಹಾಳ: ನಮ್ಮ ಮಕ್ಕಳನ್ನು ಬಂಡವಾಳದ ಮಕ್ಕಳನ್ನಾಗಿ ಬೆಳೆಸದೇ ಸಮಾಜದ ಮಕ್ಕಳಾಗಿ, ಒಳ್ಳೆಯ ಸಂಸ್ಕಾರಯುತ ಮಕ್ಕಳಾಗಿ ಬೆಳೆಸಬೇಕು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಾಹಾಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶಾಂತೇಶ್ವರ ಶಿಕ್ಷಣ ಸಂಸ್ಥೆಯ ಶಾರದಾ ವಿದ್ಯಾಮಂದಿರದ ಆವರಣದಲ್ಲಿ ಬುಧವಾರ ಸಂಜೆ ದಿ.ಭೋಜರಾಜ ಬಿರಾದಾರ ಇವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಎಲ್ಲರೂ ತಮ್ಮ ಮಕ್ಕಳನ್ನು ದೇಶದ ಉಜ್ವಲ ಭವಿಷ್ಯ ರೂಪಿಸುವ ಪ್ರತಿಭಾನ್ವಿತ ವಿದ್ಯಾರ್ಥಿಯಾಗಬೇಕು ಎಂದು ಯೋಚಿಸುತ್ತಿಲ್ಲ, ಬಂಡವಾಳದ ಮಕ್ಕಳಾಗಿ ಬೆಳೆಸುವ ಪ್ರಯತ್ನ ನಡೆದಿದೆ. ಹಾಗಾಗಿ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಕಾಡುತ್ತಿದೆ. ನಮ್ಮ ಮಕ್ಕಳು ಡಾಕ್ಟರ್, ಇಂಜಿನೀಯರ ಆಗದೇ ಇದ್ದರೂ ಪರವಾಗಿಲ್ಲ ದೇಶಕ್ಕೆ ಮಾರಕವಾಗವಾರದು ಎಂದರು.
ಹುನಗುಂದ ಮತಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಜೀವಂತವಾಗಿದ್ದಾಗ ತಮ್ಮ ತಂದೆ ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳನ್ನು ಇಂದಿನ ಸಮಾಜದಲ್ಲಿ ನಾವು ಕಾಣುತ್ತೇವೆ. ದಿವಂಗತರ ಸ್ಮರಣಾರ್ಥ ಪ್ರತಿಭಾನ್ವಿತರಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಪುಣ್ಯಸ್ಮರಣೆ ಆಚರಿಸುತ್ತಿರೋದು ಶ್ಲಾಘನೀಯ ಎಂದರು.
ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಅಶೋಕ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.
ಗಣ್ಯ ವ್ಯಾಪಾರಿ ಬಸವರಾಜ ಮೋಟಗಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರಣ್ಣ ತಾರನಾಳ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಕಾಂಗ್ರೇಸ್ ಮುಖಂಡ ಶಿವಶಂಕರಗೌಡ ಹಿರೇಗೌಡರ, ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ, ಸಂಸ್ಥೆಯ ಸದಸ್ಯರಾದ ಶಿವು ಬಿರಾದಾರ, ಶಾಂತು ಬಿರಾದಾರ, ಕಾಮರಾಜ ಬಿರಾದಾರ, ಸುರೇಶ ಬಿರಾದಾರ ಸೇರಿದಂತೆ ಮತ್ತೀತರರು ಇದ್ದರು.
ಎಪಿಎಂಸಿ ನಿರ್ದೇಶಕ ವಾಯ್.ಎಚ್.ವಿಜಯಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಗುರುರಾಜ ಚಟ್ಟೇರ ಮತ್ತು ಶಿವಾನಂದ ಚೌವ್ಹಾಣ ನಿರೂಪಿಸಿದರು.

ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಯಲ್ಲಿರುವ ತಹಶೀಲ್ದಾರ ವಿನಯಾ ಹೂಗಾರ, ರೇಲ್ವೆ ಇಲಾಖೆಯ ಸುಹಾಸ ಚೌವ್ಹಾಣ, ಪಿಎಸ್‌ಐ ವಿಠ್ಠಲ ತಳವಾರ, ಇಂಜಿನೀಯರ ಸಂಜೀವ ಕುರಿ, ಬ್ಯಾಂಕ್ ಮ್ಯಾನೇಜರ ಚೇತನ ಕಲಹಾಳ, ಪೂಜಾ ಪತಂಗಿ, ಶಿವರಾಜ ಕಾರಕೂರ, ರಶ್ಮಿ ರಾಠೋಡ, ಅಕ್ಷತಾ ಲಮಾಣಿ, ಇನಾಯತ್ ವಾಲಿಕಾರ, ಹುಲಿಗೆಮ್ಮ ಬಾಚಿಹಾಳ, ಚಂದ್ರು ಸಜ್ಜನ, ವಿರೇಶ ವಡವಡಗಿ, ಹಬೀಬ ಬಾಗೇವಾಡಿ, ರಾಧಿಕಾ ನಾಯಕ, ಮಂಜುನಾಥ ನಾಯಕ, ವಿನುತಾ ಚಟ್ಟಿ, ವರ್ಷಾ ಚಟ್ಟಿ, ಸತೀಶ ನಾಯಕ, ಶ್ವೇತಾ ಕುರಿ, ಬಸವರಾಜ ಮಾಳಿ, ಚಂದ್ರು ಗುಬ್ಬಚ್ಚಿ, ಪವನ ಡೊಣೂರ, ಮಲ್ಲಿಕಾರ್ಜುನ ಹುಣಶ್ಯಾಳ, ಕಿರಣ ಇಂಡಿಮಠ, ಅಶೋಕ ರಾಠೋಡ, ಬಸವರಾಜ ಬ್ಯಾಕೋಡ, ಮಂಜುನಾಥ ಬಳವಾಟ, ಪವನ ಲಮಾಣಿ ಸೇರಿದಂತೆ ಮತ್ತೀತರರನ್ನು ಪುರಸ್ಕರಿಸಲಾಯಿತು.
” ಮನುಷ್ಯರಲ್ಲಿ ಭಿನ್ನಾಭಿಪ್ರಾಯಗಳು ಬಂದಾಗ ಅದನ್ನು ಹಿರಿಯರ ಸಮ್ಮುಖ ಕುಳಿತು ಬಗೆಹರಿಸುವ ಪ್ರಯತ್ನ ಮಾಡಿ. ಕೊಲೆ ಮಾಡುವ, ಸುಡುವ ಹೀಗೆ ಕಾನೂನು ಕೈಗೆತ್ತಿಗೊಳ್ಳುವ ಮಟ್ಟಿಗೆ ಯಾರೂ ಹೋಗಬಾರದು.”
– ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಕೂಡಲಸಂಗಮ

