ತಿಕೋಟಾ: ಜುಲೈ 31 ರಿಂದ ಶಾಲೆಗಳು ಪುನರಾರಂಭಗೊಳ್ಳುತ್ತಿದ್ದು ಶಿಕ್ಷಕರು ಕರ್ತವ್ಯ ಪ್ರಜ್ಞೆಯಿಂದ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುತ್ತಾ ಮಕ್ಕಳಿಗೆ ಶೈಕ್ಷಣಿಕವಾಗಿ ಪ್ರಾಮಾಣಿಕವಾಗಿ ನ್ಯಾಯ ಕೊಡಬೇಕು ಎಂದು ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ.ಮೊಸಲಗಿ ಹೇಳಿದರು.
ಪಟ್ಟಣದ ಸರಕಾರಿ ಎಂಪಿಎಸ್ ಶಾಲೆಯಲ್ಲಿ ಗುರುವಾರ ನಡೆದ ಮುಖ್ಯಗುರುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಶಿಕ್ಷಕರು ಬೋಧನೆ ಮಾಡಿದ ನಂತರ ಮಕ್ಕಳಿಂದ ಎಷ್ಟು ಕಲಿಕಾ ಪ್ರತಿಫಲ ಬರುತ್ತದೆ ಎಂದು ಆತ್ಮವಲೋಕನ ಮಾಡಿಕೊಳ್ಳಬೇಕು. ಬೋಧನೆ ಯಶಸ್ವಿಯಾಗಬೇಕಾದರೆ ಮಕ್ಕಳ ಕಲಿಕೆಯ ಪ್ರತಿಫಲ ಖಾತ್ರಿಪಡಿಸಿಕೊಳ್ಳಬೇಕು.
ಶೈಕ್ಷಣಿಕ ವರ್ಷದ ಆರಂಭೋತ್ಸವವು ಹಬ್ಬದ ವಾತಾವರಣದಂತೆ ಇದ್ದು, ತಳಿರು ತೋರಣಗಳಿಂದ ಸಿಂಗರಿಸಿ ಮಕ್ಕಳಿಗೆ ಆಸಕ್ತಿದಾಯಕ ವಾತಾವರಣ ನಿರ್ಮಿಸಬೇಕು. ನಿರುಪಯುಕ್ತ ವಸ್ತುಗಳ ವಿಲೇವಾರಿ, ಶೌಚಾಲಯ ಮತ್ತು ವರ್ಗಕೋಣೆ ಸ್ವಚ್ಚತೆಯಿರಬೇಕು. ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ದಾಖಲಾತಿ ಮಾಡಬೇಕು. ಶಾಲೆಗಳಲ್ಲಿ ಸಿಗುವ ಸರ್ಕಾರಿ ಸೌಲಭ್ಯಗಳ ಕುರಿತು ಪಾಲಕರಿಗೆ ವಿವರಿಸಬೇಕು. ಅರ್ಹ ಮಕ್ಕಳ ದಾಖಲಾತಿ ಕಡ್ಡಾಯವಾಗಿ ಮಾಡಿಕೊಳ್ಳಬೇಕು. ದಾಖಲಾದ ಮಗು ನಿರಂತರವಾಗಿ ಶಾಲೆಗೆ ಹಾಜರಿರುವಂತೆ ಕ್ರಮ ವಹಿಸಬೇಕು.
ಎಲ್ಲ ಮಕ್ಕಳಿಗೆ ಸ್ಪಷ್ಟ ಓದು, ಶುದ್ದ ಬರಹ, ಗಣಿತದ ಮೂಲ ಕ್ರೀಯೆಗಳು ಮಕ್ಕಳಲ್ಲಿ ಕನಿಷ್ಟ ಕಲಿಕೆ ಆಗಲೇಬೇಕು. ಶೈಕ್ಷಣಿಕ ಯೋಜನೆ, ಶಾಲಾ ಅಭಿವೃದ್ಧಿ ಯೋಜನೆ, ವಿವಿಧ ಸಂಘಗಳ ನಿರ್ವಹಣೆ, ವಿಧ್ಯಾ ಪ್ರವೇಶ, ಸೇತುಬಂಧ ದಾಖಲೆಗಳನ್ನು ನಿರ್ವಹಿಸಿ ಮಿಂಚಿನ ಸಂಚಾರ ತಂಡ ಬಂದಾಗ ತೋರಿಸಬೇಕು. ಪೂರ್ವಸಿದ್ದತೆ ಇಲ್ಲದೇ ವರ್ಗಕೋಣೆಗೆ ಹೋಗಬಾರದು. ಶೈಕ್ಷಣಿಕವಾಗಿ ಬಲವರ್ಧನೆ ಮಾಡಲು ನಿಯತ್ತಿನಿಂದ ಕರ್ತವ್ಯ ನಿರ್ವಹಿಸಿ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕ ದೈಹಿಕ ಶಿಕ್ಷಣ ಪರಿವೀಕ್ಷಕ ಸಿ.ಎಂ.ಕೋರೆ, ಶಿಕ್ಷಣ ಸಂಯೋಜಕ ಜಿ.ಟಿ.ಕಾಗವಾಡ, ಎಸ್.ಬಿ.ಬಿರಾದಾರ, ಐ.ಎ.ತೇಲಿ, ಚನ್ನಯ್ಯ ಮಠಪತಿ, ಸಿಆರ್ಪಿಗಳು ಹಾಗೂ ಮುಖ್ಯಗುರುಗಳು ಇದ್ದರು.
ನಿರೂಪಣೆಯನ್ನು ಎಚ್.ಮುಲ್ಲಾ, ಸ್ವಾಗತವನ್ನು ಪಿ.ಬಿ.ವಾಲಿಕಾರ, ವಂದನಾರ್ಪಣೆಯನ್ನು ಬಿ.ವೈ.ಮೇಡೆಗಾರ ನೆರವೇರಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

