ವಿಜಯಪುರ: ನಗರದಲ್ಲಿ ನಕಲಿ ಭೂ ದಾಖಲೆ ಸೃಷ್ಠಿಸಿ ಜನರನ್ನು ವಂಚಿಸುತ್ತಿರುವ ಭೂ-ಮಾಫಿಯಾವನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕೆಂದು ಮಾಜಿ ಸಚಿವ ಅಪ್ಪಾಸಾಹೇಬ(ಅಪ್ಪು) ಮ. ಪಟ್ಟಣಶೆಟ್ಟಿ ಆಗ್ರಹಿಸಿದ್ದಾರೆ.
ಈ ಕುರಿತು ಮಂಗಳವಾರ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಬೇಟಿ ಮಾಡಿ ಮನವಿ ಮಾಡಿದ ಅವರು, ನಗರದಲ್ಲಿ ನಕಲಿ ಭೂ-ದಾಖಲೆ ಸೃಷ್ಟಿ ಮಾಡಿ ಜನರನ್ನು ದೊಡ್ಡ ಪ್ರಮಾಣದಲ್ಲಿ ವಂಚನೆ ಮಾಡುತ್ತಿರುವ ಅನೇಕ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಬಡಜನರು ನಿತ್ಯ ಶೋಷಣೆಗೊಳಗಾಗುತ್ತಿದ್ದಾರೆ. ಜಮೀನು ಹಾಗೂ ನಿವೇಶನಗಳ ಖೊಟ್ಟಿ ದಾಖಲೆ ಸೃಷ್ಟಿ ಮಾಡಿ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಖರೀದಿ ಹಾಗೂ ಮಾರಾಟ ಮಾಡುವ ಕಾನೂನು ಬಾಹಿರ ಕೃತ್ಯಗಳು ಅವ್ಯಾಹತವಾಗಿ ನಡೆದಿವೆ. ಜನರನ್ನು ವಂಚಿಸುವ ವ್ಯವಸ್ಥಿತ ಜಾಲವೇ ಜಿಲ್ಲೆಯಲ್ಲಿ ಹುಟ್ಟಿಕೊಂಡಿದೆ. ಈ ಜಾಲಕ್ಕೆ ಈಗಾಗಲೇ ನೂರಾರು ಜನ ಹಣ-ಆಸ್ತಿ ಕಳೆದುಕೊಂಡಿದ್ದಾರೆ. ಇಂತಹ ವಂಚಕರ ಜಾಲ ವಿಜಯಪುರ ಜಿಲ್ಲೆ ಹಾಗೂ ನಗರದಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಸಾಕಷ್ಟು ಬಡ ಜನರು ಈಗಾಗಲೇ ಮೋಸ ಹೋಗಿದ್ದಾರೆ. ಕಷ್ಟಪಟ್ಟು ದುಡಿದು, ಸಾಲ-ಸೋಲ ಮಾಡಿ ನಿವೇಶನ, ಜಮೀನು ಖರೀದಿ ಮಾಡುವ ಬಡವರು, ಈ ರೀತಿಯ ವಂಚನೆಗೆ ಒಳಗಾಗಿ ತಮ್ಮ ಆಸ್ತಿ ಕಳೆದುಕೊಂಡು ಕಷ್ಟ ಅನುಭವಿಸುತ್ತಿದ್ದಾರೆ.
ಈ ಜಾಲಕ್ಕೆ ಸಿಲುಕಿ ವಂಚನೆಗೊಳಗಾದವರು ಹಾಗೂ ಜಮೀನು ಕಳೆದುಕೊಂಡವರು ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವ ಪ್ರಯೋಜನವೂ ಆಗುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ತನಿಖೆ ಸಮರ್ಪಕವಾಗಿ ನಡೆಯುತ್ತಿಲ್ಲ. ಹೀಗಾಗಿ ನೊಂದ ಬಡವರಿಗೆ ನ್ಯಾಯ ದೊರಕುತ್ತಿಲ್ಲ. ಬಡಜನರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಇಂತಹ ಪ್ರಕರಣಗಳನ್ನು ತ್ವರಿತಗತಿಯಲ್ಲಿ ತನಿಖೆ ಮಾಡಲು ವಿಶೇಷ ತನಿಖಾ ತಂಡ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಕೂಡಲೇ ಈ ರೀತಿಯ ಪ್ರಕರಣಗಳನ್ನು ಬೇಧಿಸಿ ಮೂಲ ಮಾಲೀಕರಿಗೆ ಅವರ ಜಮೀನು-ನಿವೇಶನ ಪುನ: ಹಂಚಿಕೆಯಾಗುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ಮಾಡಬೇಕು. ಜಿಲ್ಲೆಯಲ್ಲಿ ಈ ರೀತಿಯ ಭೂ ಮಾಫಿಯಾವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪಟ್ಟಣಶೆಟ್ಟಿ ಆಗ್ರಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

