ಶಿಥಿಲ ಕೊಠಡಿಯಲ್ಲೇ ಮಕ್ಕಳಿಗೆ ವಿದ್ಯಾರ್ಜನೆ | ಮಕ್ಕಳನ್ನು ಶಾಲೆಗೆ ಸೇರಿಸಲು ಪಾಲಕರ ಹಿಂದೇಟು
– ಇಲಾಹಿ ಇ. ಜಮಖಂಡಿ
ಚಿಮ್ಮಡ: ಗ್ರಾಮದ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಎರಡೂ ಕೋಣೆಗಳ ಛಾವಣಿ ಶಿಥಿಲಗೊಂಡು ಕುಸಿಯುವ ಹಂತದಲ್ಲಿದ್ದರೂ ಮಕ್ಕಳು ಪ್ರತಿದಿನ ಅನಿವಾರ್ಯವಾಗಿ ಇಂತಹ ಕಟ್ಟಡದಲ್ಲಿಯೇ ವಿದ್ಯಾರ್ಜನೆ ಮಾಡುವ ಸ್ಥಿತಿ ನಿರ್ಮಾಣಗೊಂಡಿದ್ದು ಮಕ್ಕಳನ್ನು ಶಾಲೆಗ ಕಳುಹಿಸಲು ಪಾಲಕರು ಹಿಂದೇಟು ಹಾಕುತಿದ್ದಾರೆ.
ಸುಮಾರು ಇಪ್ಪತೈದು ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಈ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿದ್ದು ಗೋಡೆಗಳು ಬಿರುಕುಗೊಂಡಿವೆ, ಪಿಲ್ಲರ್ ಗಳಂತೂ ಸಿಮೆಂಟೆಲ್ಲ ಉದುರಿ ಅಸ್ತಿಪಂಜರದಂತಾಗಿವೆ ಇಂತಹ ಶಾಲೆಗಳಲ್ಲಿ ಮಕ್ಕಳು ವಿದ್ಯಾರ್ಜನೆ ಮಾಡುವುದಾದರೂ ಹೇಗೆ? ಎಂದು ಪಾಲಕರು ಪ್ರಶ್ನಿಸುತಿದ್ದಾರೆ.
ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಲವಾರು ಬಾರಿ ಲಿಖಿತವಾಗಿ, ಮೌಖಿಕವಾಗಿ ಮನವಿ ಮಾಡಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕೈ ಮುಗಿದು ಒಳಗೆ ಬರಬೇಕಾದಂತಹ ಜ್ಞಾನದೇಗುಲಗಳು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ ದೋರಣೆಯಿಂದ ಜೀವ ಕೈಯ್ಯಲ್ಲಿ ಹಿಡಿದು ಒಳಗೆ ಬರುವ ಸ್ಥಿತಿ ನಿರ್ಮಾಣಗೊಂಡಿದೆ.
ವಿಚಿತ್ರವೆಂದರೆ ಈ ಶಿಥಿಲ ಶಾಲಾ ಕಟ್ಟಡಗಳ ಹಿಂಬದಿಯಲ್ಲಿಯೇ ಕಳೆದ ಹದಿನೈದು ವರ್ಷಗಳ ಹಿಂದೆ ಉರ್ದು ಶಾಲೆಗಾಗಿ ಎರಡು ಹಾಗೂ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗಾಗಿ ಎರಡು ಒಟ್ಟು ನಾಲ್ಕು ಕೊಠಡಿಗಳನ್ನು ನಿರ್ಮಿಸಲಾಗಿದೆ, ಆದರೆ ಕಳಪೆ ದರ್ಜೆಯ ಕಿಟಕಿ ಬಾಗಿಲುಗಳನ್ನು ಆ ಕಟ್ಟಡಗಳಿಗೆ ಅಳವಡಿಸಿದ್ದರಿಂದಾಗಿ ಹಾಗೂ ಅವೈಜ್ಷಾನಿಕ ರೀತಿಯಲ್ಲಿ ಕೆರೆಗೆ ಹೊಂದಿಕೊಂಡು ಅವುಗಳನ್ನು ನಿರ್ಮಾಣ ಮಾಡಿದ್ದರಿಂದ ಮಳೆಗಾಲದಲ್ಲಿ ಕೆರೆಯ ನೀರು ಕಟ್ಟಡಗಳಲ್ಲಿ ಬಸಿದು ಕೆರೆದಂಡೆಯ ಎರಡೂ ಕೋಣೆಗಳಲ್ಲಿ ನೀರು ಜಿನುತ್ತದೇ ಅಲ್ಲದೇ ಕೆರೆಯ ದಂಡೆಯ ಮೇಲೆ ಸಾರ್ವಜನಿಕರು ಬಯಲು ಬಹಿರ್ದೆಸೆಗೆ ಹೋಗುವುದರಿಂದ ದುರ್ವಾಸನೆ ಬರುವುದೆಂಬ ಕಾರಣದಿಂದ ಆ ಭಾಗದ ನಾಲ್ಕೂ ಕೋಣೆಗಳನ್ನು ನಿರ್ಮಾಣಗೊಳಿಸಿದಾಗಿನಿಂದ ಇದುವರೆಗೂ ತರಗತಿಗಳಿಗೆ ಬಳಸಲಾಗಿಲ್ಲ, ಈಗ ಆ ನಾಲ್ಕೂ ಕೊಠಡಿಗಳು ಅನೈತಿಕ ಚಟುವಟಿಗಳ ತಾಣವಾಗಿದ್ದು ಕಿಡಿಗೇಡಿಗಳು ಆ ಕಟ್ಟಡಗಳಲ್ಲಿ ಕುಡಿತ, ಇಸ್ಪಿಟ್, ಹಾಗೂ ಅಕ್ರಮ ಚಟುವಟಿಕೆಗಳ ತಾಣವಾಗಿಸಿದ್ದಾರೆ.
ಶಿಕ್ಷಣ ಹಾಗೂ ಅಭಿವೃದ್ದಿಗಾಗಿ ಕೋಟ್ಯಾಂತರ ಅನುದಾನ ನೀಡುವ ಸರಕಾರ ಅವುಗಳ ಸದ್ಬಳಕೆ ಮಾಡುವಲ್ಲಿ ವಿಫಲವಾಗುತ್ತಿವೆ. ಶಾಲೆಗಳ ಕುಂದು ಕೊರತೆ ನಿವಾರಣೆಗಾಗಿ, ಉಸ್ತುವಾರಿಗಾಗಿಯೇ ಸರಕಾರ ಹಲವು ಅಧಿಕಾರಿಗಳನ್ನು ನೇಮಕಗೊಳಿಸಿದ್ದರೂ ಈ ರೀತಿ ಅನುದಾನ ಪೋಲಾಗುತ್ತಿರುವುದು ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಗ್ರಾಮದ ಮೂರು ಮತ್ತು ನಾಲ್ಕನೇ ವಾರ್ಡಿನ ಮತಗಟ್ಟೆಗಳಾಗಿದ್ದ ಈ ಶಾಲಾ ಕೊಠಡಿಗಳು ಈ ಬಾರಿಯ ಲೋಕಸಭಾ ಚುನಾವಣೆಗಾಗಿ ಕಟ್ಟಡಗಳನ್ನು ಪರಿಶೀಲಿಸಿದ ಚುನಾವಣಾಧಿಕಾರಿಗಳು ಸದರೀ ಕಟ್ಟಡಗಳು ಕುಸಿಯುವ ಹಂತದಲ್ಲಿದ್ದು ಮತದಾನ ಪ್ರಕ್ರಿಯೆಗೆ ಬಳಸಲು ಯೋಗ್ಯವಾಗಿಲ್ಲ ಎಂಬ ಕಾರಣದಿಂದ ಈ ಎರಡೂ ಕೊಠಡಿಗಳಲ್ಲಿ ನಡೆಸಲಾಗುತಿದ್ದ ಮತದಾನ ಸ್ಥಳಿಯ ಸರಕಾರಿ ಹೆಣ್ಣು ಮಕ್ಕಳ ಶಾಲೆಗೆ ವರ್ಗಾಯಿಸಲಾಯಿತು. ವಿಪರ್ಯಾಸವೆಂದರೆ ಆ ಕೊಠಡಿಗಳಲ್ಲಿಯೇ ಈಗ ವಿದ್ಯಾರ್ಥಿಗಳು ಜ್ಞಾನಾರ್ಜನೆ ಪಡೆಯಬೇಕು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂದು ಹೇಳುವ ಅಧಿಕಾರಿಗಳು, ಜನಪ್ರತಿನಿಧಿಗಳು ಇವರತ್ತ ಕಣ್ಣು ಬಿಟ್ಟು ನೋಡದಿರುವುದು ದುರ್ದೈವ. ಸಂಬಂಧಿಸಿದ ಅಧಿಕಾರಿಗಳೂ ಈಗಲಾದರೂ ಈ ಕುರಿತು ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಪಾಲಕರು, ಎಸ್ಡಿಎಂಸಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

” ಈ ಶಿಥಿಲ ಕಟ್ಟಡಗಳ ದುರಸ್ತಿಗಾಗಿ ಅಧಿಕಾರಿಗಳಿಗೆ ಹಲವಾರು ಬಾರಿ ಛಾಯಾಚಿತ್ರಗಳ ಸಮೇತ ಲಿಖಿತವಾಗಿ ಹಾಗೂ ಮೌಖಿಕವಾಗಿ ಹಲವಾರು ಬಾರಿ ಮನವಿ ಮಾಡಿದ್ದೇವಲ್ಲದೇ ಗ್ರಾಮಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಆಗಮಿಸಿದ ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿಯವರನ್ನು ಶಾಲೆಗೆ ಖುದ್ದು ಕರಿಸಿ ಕೊಠಡಿಗಳ ನೈಜ ಸ್ಥಿತಿ ತೋರಿಸಿದ್ದು, ಈ ಕುರಿತು ಕೂಡಲೆ ಕ್ರಮ ಕೈಗೊಳ್ಳುವುದಾಗಿ ಹೇಳಿಹೋದ ಅಧಿಕಾರಿಗಳು ನಂತರ ವರ್ಗಾವಣೆಗೊಂಡರು.”
– ಅಮೀರಲಿ ಸರಕಾವಸ,
ಎಸ್ಡಿಎಂಸಿ ಅಧ್ಯಕ್ಷರು

