ವಿಜಯಪುರ :ಶಿವಮೊಗ್ಗದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆಗೆ ಕಾರಣರಾದ ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ ಸಚಿವ ನಾಗೇಂದ್ರ ಅವರನ್ನು ತಕ್ಷಣವೇ ವಜಾ ಮಾಡಿ, ಬಂಧಿಸಿ ತನಿಖೆ ನಡೆಸುವಂತೆ ಬಿಜೆಪಿಯ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಜಯಕುಮಾರ ಕುಡಿಗನೂರ ಅವರು ಆಗ್ರಹಿಸಿದರು.
ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ ಚಂದ್ರಶೇಖರ್ ಬರೆದಿಟ್ಟ ಡೆತ್ ನೋಟ್ನಲ್ಲಿ, ಪರಿಶಿಷ್ಟ ಪಂಗಡದ ಬಡವರಿಗೆ ಸೇರಬೇಕಾದ ೧೮೭ ಕೋಟಿ ರೂ.ಗಳನ್ನು ಸಚಿವರ ಸೂಚನೆ ಮೇರೆಗೆ ನಕಲಿ ಖಾತೆಗಳಿಗೆ ವರ್ಗಾಯಿಸಿ ಅವ್ಯವಹಾರ ನಡೆಸಲಾಗಿದೆ ಎಂದು ನೇರ ಆರೋಪ ಮಾಡಿದ್ದಾರೆ. ನಿಗಮದ ಆಡಳಿತ ನಿರ್ದೇಶಕ ಹಾಗೂ ಅಧಿಕಾರಿಗಳು ನಕಲಿ ಖಾತೆಗಳನ್ನು ತೆರೆದು ಈ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಎಲ್ಲರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸರಕಾರದ ಭ್ರಸ್ಟಾಚಾರಕ್ಕೆ ಇದಕ್ಕಿಂತ ದೊಡ್ಡ ಸಾಕ್ಷ್ಯ ಬೇರೆ ಅಗತ್ಯವಿಲ್ಲ. ಅಂದು ಬಿಜೆಪಿ ಸರಕಾರವಿದ್ದಾಗ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆಗಿನ ವಿಪಕ್ಷ ನಾಯಕ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಿನ ಕಂದಾಯ ಸಚಿವ ಕೆ.ಎಸ್.ಈಶ್ವರಪ್ಪನವರ ವಜಾಕ್ಕೆ ಆಗ್ರಹಿಸಿದ್ದರು. ಕಾನೂನು, ಸಂವಿಧಾನ ಎಂದೆಲ್ಲ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತ ಭಾರೀ ಗದ್ದಲವೆಬ್ಬಿಸಿದ್ದರು. ಈಗ ಅವರದೇ ಸರಕಾರವಿದೆ. ಅದೇ ಮಾತುಗಳನ್ನು ಈಗ ಹೇಳಲಿ ನೋಡೋಣ ಎಂದು ಪತ್ರಿಕಾ ಪ್ರಕಠಣೆಯಲ್ಲಿ ಹೇಳಿದರು. ಈ ಪ್ರಕರಣದಲ್ಲಿ ಸಚಿವ ನಾಗೇಂದ್ರ ಮತ್ತು ಇಲಾಖೆಯ ಆಪಾದಿತ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ಹಾಗೂ ಎಸ್ಸಿ, ಎಸ್ಟಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಬರೀ ಲೂಟಿಯಲ್ಲ, ಹಗಲು ದರೋಡೆ..
ಈ ಸರಕಾರದಲ್ಲಿ ನಡೆಯುತ್ತಿರುವುದು ಬರೀ ಲೂಟಿಯಲ್ಲ, ಹಗಲು ದರೋಡೆ. ಅಧಿಕಾರಿ ಚಂದ್ರಶೇಖರ್ ಸಾವಿಗೆ ಸಚಿವರೇ ನೇರ ಕಾರಣವಾಗಿದ್ದು, ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟಿನ ಹಾಲಿ ನ್ಯಾಯಾಧೀಶರಿಂದ ಸಮಗ್ರ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಜಯಕುಮಾರ ಕುಡಿಗನೂರ ಹೇಳಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

