ದೇವರಹಿಪ್ಪರಗಿ: ಕೊಂಡಗೂಳಿ ಗ್ರಾಮದ ಶ್ರೀಸದ್ಗುರು ಸಮರ್ಥ ಚಂದ್ರಶೇಖರ ಶಿವಯೋಗಿಗಳ ಹಾಗೂ ಶ್ರೀಶಾಂತಾನಂದ ಸ್ವಾಮಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ತಾಲ್ಲೂಕಿನ ಕೊಂಡಗೂಳಿ ಗ್ರಾಮದ ಸಿದ್ಧಾರೂಢಮಠದ ಶಾಂತಾಶ್ರಮದ ಆವರಣದಲ್ಲಿ ಭಾನುವಾರ ಶಿವಯೋಗಿಗಳು ಹಾಗೂ ಸ್ವಾಮೀಜಿಯವರ ಪುಣ್ಯಸ್ಮರಣೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳು ದಿನಪೂರ್ತಿ ಜರುಗಿದವು.
ಬೆಳಿಗ್ಗೆ ೧೦ ಗಂಟೆಗೆ ಆರಂಭಗೊಂಡ ಪಲ್ಲಕ್ಕಿಉತ್ಸವ ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿ ಮಧ್ಯಾನ ಆಶ್ರಮ ತಲುಪಿತು. ನಂತರ ಪೂಜ್ಯರ ಆಶ್ವಾರೂಢ ರಥ ಮೆರವಣಿಗೆ ಜರುಗಿತು. ಈ ಸಂದರ್ಭದಲ್ಲಿ ಕುಂಭ, ಕಳಶ ಹೊತ್ತ ಮಹಿಳೆಯರು ತಮ್ಮ ಭಕ್ತಿ ಭಾವ ಮೆರೆದರು. ಗೊಂಬೆಕುಣಿತ, ಡೊಳ್ಳು ಕುಣಿತ ಸಹಿತ ವಿವಿಧ ವಾಧ್ಯವೃಂದಗಳು ಜನರ ಗಮನ ಸೆಳೆದವು. ಸಾಯಂಕಾಲ ಶಿವಯೋಗಿಗಳ ಜನ್ಮಸ್ಥಳ ಗೋಟಖಂಡಕಿ ಗ್ರಾಮದಿಂದ ಕಳಶ ಆಗಮನ ಆಗುವುದರ ಮೂಲಕ ರಥೋತ್ಸವ ಆರಂಭಗೊಂಡಿತು. ತಳಿರು ತೋರಣ, ಬಾವುಟಗಳಿಂದ ಸಿಂಗಾರಗೊಂಡ ರಥವನ್ನು ಅಧಿಕವಾಗಿ ಮಹಿಳೆಯರೇ ಎಳೆದು ತಮ್ಮ ಭಕ್ತಿ ಸಮರ್ಪಿಸಿದರು.
ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ೧೦ ದಿನಗಳ ಕಾಲ ಚಿಕ್ಕರೂಗಿಯ ಈರಣ್ಣಶಾಸ್ತ್ರಿ ಅವರಿಂದ ಆಧ್ಯಾತ್ಮೀಕ ಪ್ರವಚನ ಹಾಗೂ ಶನಿವಾರ ಸಾಯಂಕಾಲ ಮಹಾಂತಯ್ಯ ಹಿರೇಮಠ ಅವರಿಂದ ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮಗಳು ಜರುಗಿದವು.
ಮಾಗಣಗೇರಿ ಬ್ರಹನ್ಮಠದ ವಿಶ್ವರಾಧ್ಯಶ್ರೀಗಳು, ಕೊಂಡಗೂಳಿ, ಆಲೂರು, ಚಳಕಾಪುರ ಸಿದ್ಧಾರೂಢಮಠದ ಶಂಕರಾನಂದಶ್ರೀ, ಕಲಕೇರಿ ಗದ್ದಿಗೆಮಠದ ಗುರುಮಡಿವಾಳೇಶ್ವರಶ್ರೀ, ಪ್ರಶಾಂತದೇವರು, ಕೊಂಡಗೂಳಿ ಗದ್ದಿಗೆಮಠದ ಬಸಲಿಂಗಯ್ಯ ಸ್ವಾಮೀಜಿ, ಗೋಟಖಂಡಕಿಯ ಮಲ್ಲಯ್ಯಸ್ವಾಮೀಜಿ, ಕೊಂಡಗೂಳಿ ಹಿರೇಮಠದ ಬಸಲಿಂಗಯ್ಯ ಸ್ವಾಮೀಜಿ ಸೇರಿದಂತೆ ಹಲವು ಪೂಜ್ಯರು ಹಾಗೂ ಗೋಟಖಂಡಕಿಯ ಸಚ್ಚಿದಾನಂದಮಠದ ಚನ್ನಬಸವಶರಣರು, ಬಸವರಾಜ ಮಾಗಣಗೇರಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

