ದೇವರಹಿಪ್ಪರಗಿ: ಹುಣಶ್ಯಾಳ ಗ್ರಾಮದ ಕೆರೆಗೆ, ಕೆರೆ ತುಂಬುವ ಯೋಜನೆಯಡಿ ನೀರು ಹರಿಸಿ ಭರ್ತಿ ಮಾಡುವುದರ ಮೂಲಕ ಜನತೆಯ ಬಹುದಿನದ ಬೇಡಿಕೆ ಈಡೇರಿಸುವಂತೆ ರೈತರು, ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ತಾಲ್ಲೂಕಿನ ಹುಣಶ್ಯಾಳ ಕೆರೆಗೆ ನೀರು ಹರಿಸುವ ಮೂಲಕ ಈ ಭಾಗದ ಜನ, ಜಾನುವಾರುಗಳ ನೀರಿನ ತಾಪತ್ರಯಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಈ ಕುರಿತು ಗ್ರಾಮದ ಮೈನುದ್ದೀನ ಬಾಗವಾನ ಮಾತನಾಡಿ, ನಮ್ಮ ಗ್ರಾಮದ ಕೆರೆ ತುಂಬುವ ಯೋಜನೆ ಜಾರಿಗಾಗಿ ಕಲಕೇರಿಯಲ್ಲಿ ೩೧ ದಿನ ಧರಣಿ ಸತ್ಯಾಗ್ರಹ ಹಾಗೂ ಹೋರಾಟ ಮಾಡಲಾಗಿತ್ತು. ಸತ್ಯಾಗ್ರಹ ಹಾಗೂ ಹೋರಾಟದ ಫಲವಾಗಿ ಅಂದಿನ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಸ್ಥಳಕ್ಕೆ ಭೇಟಿ ನೀಡಿ, ಕೆರೆ ತುಂಬುವ ಯೋಜನೆಯಡಿ ಕಾರ್ಯಕ್ಕೆ ಮಂಜೂರಾತಿ ದೊರಕಿಸಿ, ಅದ್ದೂರಿಯಾಗಿ ಪೂಜೆ ಕೈಗೊಳ್ಳುವುದರ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ನಂತರ ಕಾಮಗಾರಿ ಪ್ರಾರಂಭವಾಗಿತ್ತು. ಆದರೆ ಏಕಾಏಕಿ ಗುತ್ತಿಗೆದಾರರು ಅರ್ಧಕ್ಕೆ ಬಿಟ್ಟು ಹೋಗಿದ್ದರಿಂದ ಕಾಮಗಾರಿ ಪೂರ್ಣಗೊಳ್ಳದ ಕಾರಣ ಕೆರೆಯಲ್ಲಿ ನೀರು ಬರಲಿಲ್ಲ.ನಂತರ ಶಾಸಕ ರಾಜುಗೌಡ ಪಾಟೀಲರು ಡಿಸೆಂಬರ್ ಅಂತ್ಯದಲ್ಲಿ ಕೆರೆಗೆ ನೀರು ಹರಿಸಲಾಗುತ್ತದೆ ಎಂಬ ಭರವಸೆ ನೀಡಿದ್ದರು. ನಂತರ ಭರವಸೆಯಂತೆ ನೀರು ಬರಲಿಲ್ಲ. ಈಗಲೂ ಕಾಲ ಮಿಂಚಿಲ್ಲ ಈ ವರ್ಷದ ಡಿಸೆಂಬರ್‌ದಲ್ಲಾದರೂ ಕೆರೆಗೆ ನೀರು ಬರಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಾರೆ.
ಕೆರೆಗೆ ನಿಗದಿತ ಸಮಯದಲ್ಲಿ ನೀರು ಹರಿಸದ ಕಾರಣ ಜನರ ಜೊತೆಗೆ ಜಾನುವಾರುಗಳು ಪರಿತಪಿಸುವಂತಾಗಿವೆ. ಕೆರೆ ತುಂಬಿಸುವ ಸಲುವಾಗಿ ಸಾರ್ವಜನಿಕರು ಸಾಕಷ್ಟು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ಭಾಗದ ಕೆರೆ ತುಂಬಿದರೆ ಹುಣಶ್ಯಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೂ ಕುಡಿಯುವ ನೀರು ಸಿಗಲಿದೆ. ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಅದಕ್ಕಾಗಿ ಜಿಲ್ಲಾಡಳಿತ ಹುಣಶ್ಯಾಳ ಕೆರೆ ತುಂಬುವ ಯೋಜನೆ ಜಾರಿಗೊಳಿಸಬೇಕು ಈ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮದ ಶಿವರಾಜ ಕುಂಟೋಜಿ, ಶಫೀಕ ಸಿಪಾಯಿ, ಶಂಕ್ರೆಪ್ಪ ಬಂಗಾರಗುಂಡ, ನಬಿಸಾಬ ತಾಳಿಕೋಟಿ, ಶಕೀಲ ಪೊಲಾಶಿ, ಮಹಮ್ಮದ ಬಾಗವಾನ, ಗೋಪಾಲ ನಾಯ್ಕೋಡಿ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

