ದೇವರಹಿಪ್ಪರಗಿ: ಪಟ್ಟಣದ ಕನಕದಾಸ ವೃತ್ತದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಹಾಗೂ ಪಾನ ಶಾಪ್‌ಗಳಲ್ಲಿ ಮಾವಾ ಎಂಬ ಮಾದಕ ಪದಾರ್ಥ ಮಾರಾಟ ತಡೆದು ಬಡ ಕುಟುಂಬಗಳ ಸಂಸಾರ ನಿರ್ವಹಣೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಮಹಿಳೆಯರು ತಹಶೀಲ್ದಾರ ಕಾರ್ಯಾಲಯದ ಮುಂದೆ ಸುಮಾರು ೪ ಗಂಟೆಗಳ ಕಾಲ ಧರಣಿ ಕುಳಿತು ಪ್ರತಿಭಟಿಸಿದರು.
ನಂತರ ಶಿರಸ್ತೇದಾರ ಡಿ.ಎಸ್.ಭೋವಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿಗೆ ಸೋಮವಾರ ಗಂಗಾನಗರ, ಕರಿಸಿದ್ಧೇಶ್ವರ, ರಾವುತರಾಯಗುಡಿ ಓಣಿ ಹಾಗೂ ತಾಂಡಾ ರಸ್ತೆಯ ಮಹಿಳೆಯರು ಆಗಮಿಸಿ ಕನಕದಾಸ ವೃತ್ತದಲ್ಲಿ ಮಾಡಲಾಗುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಮಲಾ ಬಿರಾದಾರ ಮಾತನಾಡಿ, ಪಟ್ಟಣದ ಕನಕದಾಸ ವೃತ್ತದಲ್ಲಿ ಅಕ್ರಮ ಮದ್ಯ ಹಾಗೂ ಪಾನ ಶಾಪ್‌ಗಳಲ್ಲಿ ಮಾದಕ ಮಾವಾ ಮಾರಾಟದ ಫಲವಾಗಿ ಸ್ಥಳೀಯ ಯುವಕರು ಹಾಗೂ ಗಂಡಸರು ಕುಡಿಯುವ, ತಿನ್ನುವ ಚಟಕ್ಕೆ ಅಂಟಿಕೊಂಡಿದ್ದಾರೆ ಇದರಿಂದ ಮನೆ ನಿರ್ವಹಣೆ ಮಾಡುವ ಮಹಿಳೆಯರು ಅಸಹಾಯಕತೆಯಿಂದ ಬೇಸತ್ತಿದ್ದಾರೆ ಕೂಡಲೇ ತಾಲ್ಲೂಕಾಡಳಿತ ಈ ಕುರಿತು ಕ್ರಮ ವಹಿಸುವಂತೆ ಆಗ್ರಹಿಸಿದರು.
ಬೋರಮ್ಮ ಜೋಂಡಿ ಮಾತನಾಡಿ, ಅಕ್ರಮ ಮದ್ಯ ಹಾಗೂ ಮಾದಕ ಮಾವಾ ಮಾರಾಟದಲ್ಲಿ ಈಗಾಗಲೇ ಹಲವು ಯುವಕರು ಬಲಿಯಾಗಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಬಡಕುಟುಂಬಗಳು ಹಾಳಾಗುವುದರಲ್ಲಿ ಸಂದೇಹವಿಲ್ಲ. ಈಗ ಮದ್ಯ ಮಾರಾಟ ಮಾಡುವ ಅಂಗಡಿ ಪಕ್ಕದಲ್ಲಿ ಶಾಲೆ, ಕಾಲೇಜುಗಳಿವೆ. ಕುಡುಕರ ಹಾವಳಿಯಿಂದ ವಿದ್ಯಾರ್ಥಿನೀಯರು ಬರಹೋಗಲು ಮುಜುಗರ ಪಡುವಂತಾಗಿದೆ. ಆದ್ದರಿಂದ ಅಬಕಾರಿ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಈ ಕುರಿತು ತುರ್ತು ಕ್ರಮವಹಿಸಬೇಕು ಎಂದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಆಗಮಿಸಿದ ಅಬಕಾರಿ ಇಲಾಖೆಯ ಸಿಬ್ಬಂದಿಗೆ ಮಹಿಳೆಯರು ತಮ್ಮೊಂದಿಗೆ ಮದ್ಯ ಮಾರಾಟ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದಾಗ ಅವರ ಆಗ್ರಹಕ್ಕೆ ಮಣಿದ ಸಿಬ್ಬಂದಿ ಅಕ್ರಮ ಮದ್ಯ ಮಾರಾಟ ಸ್ಥಳಕ್ಕೆ ಭೇಟಿ ನೀಡಿದರು.
ಶೇಖು ಸಣ್ಣಕ್ಕಿ, ಲಕ್ಷ್ಮೀಬಾಯಿ ಪೂಜಾರಿ, ಸುಂದ್ರಾಬಾಯಿ ಬಿರಾದಾರ(ಹಿಟ್ನಳ್ಳಿ), ಬಸಮ್ಮ ಕುಂಬಾರ, ತಾರಾಬಾಯಿ ಹಿಟ್ನಳ್ಳಿ, ಲಕ್ಷ್ಮೀ ಸಣ್ಣಕ್ಕಿ, ಸಾವಿತ್ರಿ ಸಣ್ಣಕ್ಕಿ, ವಿಜಯಲಕ್ಷ್ಮೀ ಕುಂಬಾರ, ಲತಾ ನಾಶೀಮಠ, ಮಹಾದೇವಿ ಭಾವಿಕಟ್ಟಿ, ಗಂಗಾಬಾಯಿ ಇಂಗಳಗಿ, ರೇಣುಕಾ ಕುಂಬಾರ,ಶಾರದಾ ಕುಂಬಾರ, ರೇಖಾ ಬಬಲೇಶ್ವರ, ಬಸಮ್ಮ ಹಿಕ್ಕನಗುತ್ತಿ, ಮರಿನಿಂಗವ್ವ, ನೀಲಕ್ಕ ಮಿಂಚನಾಳ, ಪಾರ್ವತಿ ರಾಮಗೊಂಡ, ಕಮಲಾ ಕುಂಬಾರ, ಕಸ್ತೂರಿ ನಾಟೀಕಾರ, ಮುದುಕವ್ವ ಪೂಜಾರಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

