ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಟೀಕೆ
ಬೆಂಗಳೂರು: ಕೇಂದ್ರ ಸರಕಾರವು ಸಾವಿರಾರು ಕೋಟಿ ರೂ. ಬರಗಾಲದ ಪರಿಹಾರಧನ ಕೊಟ್ಟಿದೆ. ಆದರೂ, ದೇವರು ಕೊಟ್ಟರೂ ಕೂಡ ಪೂಜಾರಿ ಕೊಡಲು ತಯಾರಿಲ್ಲ ಎಂಬಂತೆ ಕೇಂದ್ರ ಸರಕಾರ, ನರೇಂದ್ರ ಮೋದಿಯವರು ಬರಗಾಲದ ಮೊತ್ತವನ್ನು ಕೊಟ್ಟಿದ್ದರೂ ಅದನ್ನು ಸುಮಾರು 2 ಲಕ್ಷಕ್ಕಿಂತ ಹೆಚ್ಚು ರೈತರ ಖಾತೆಗಳಿಗೆ ಇವತ್ತಿಗೂ ನೀಡಿಲ್ಲ ಎಂದು ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರು ಟೀಕಿಸಿದರು.
ಈ ಕುರಿತು ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರವು ರೈತರ ಪಾಲಿಗೆ ಸತ್ತು ಹೋಗಿದೆ. ಕಳೆದ ಸುಮಾರು ಒಂದು ವರ್ಷದಿಂದ ಬರಗಾಲದಿಂದ ತತ್ತರಿಸಿ ಹೋದ ರೈತರಿಗೆ ಸಹಾಯ ಮಾಡುತ್ತಿಲ್ಲ, ಇದು ರೈತರ ಪಾಲಿಗೆ ಸತ್ತು ಹೋದ ಸರಕಾರದಂತಿದೆ ಎಂದು ಹೇಳಿದರು.
ಬರಗಾಲದಿಂದ ಬೆಂದಿರುವ ರೈತರಿಗೆ ಅತ್ಯಂತ ಕಡಿಮೆ ದರದಲ್ಲಿ ಬಿತ್ತನೆ ಬೀಜವನ್ನು ವಿತರಿಸುವ ಕೆಲಸವನ್ನು ಈ ಸರಕಾರ ಮಾಡಬೇಕಿತ್ತು. ಆದರೆ, ಕಾಂಗ್ರೆಸ್ ಸರಕಾರವು ಬಿತ್ತನೆ ಬೀಜಕ್ಕೂ ಅತಿ ಹೆಚ್ಚು ದರ ವಿಧಿಸುತ್ತಿದೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು. ಈಗ ಮುಂಗಾರು ಸಂದರ್ಭದಲ್ಲಿ ಬೆಳೆಯುವ ಹೆಸರು, ಶೇಂಗಾ, ಉದ್ದು, ಮೆಕ್ಕೆಜೋಳ ಮೊದಲಾದವುಗಳ ದರವನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಏರಿಸಿದ್ದಾರೆ ಎಂದು ಖಂಡಿಸಿದರು.
ಉದ್ದು ಪ್ರತಿ ಕೆಜಿಗೆ 43 ರೂ, ತೊಗರಿಗೆ 48 ರೂ., ಮೆಕ್ಕೆಜೋಳ 5 ಕೆಜಿ ಪೊಟ್ಟಣಕ್ಕೆ 24 ರೂ. ಹೆಚ್ಚಿಸಿದ್ದಾರೆ. ಸರಕಾರ ಈ ಹಿಂದಿನ ಬಿತ್ತನೆ ಬೀಜದ ದರವನ್ನೇ ಮುಂದುವರಿಸಬೇಕು. ಬಿತ್ತನೆ ಬೀಜ, ಗೊಬ್ಬರ ಸಮರ್ಪಕವಾಗಿ ಎಲ್ಲ ರೈತರಿಗೆ ಸಿಗುವಂತೆ ನೋಡಿಕೊಳ್ಳಲು ಆಗ್ರಹಿಸಿದರು.
ಕೊಬ್ಬರಿಯನ್ನು ಎಂಎಸ್‍ಪಿ ಅಡಿ ಖರೀದಿ ಮಾಡಲು ಕೇಂದ್ರದ ನರೇಂದ್ರ ಮೋದಿಜೀ ನೇತೃತ್ವದ ಸರಕಾರ ಮುಂದಾಗಿದೆ. ಪ್ರತಿ ಕ್ವಿಂಟಲ್‍ಗೆ ಸುಮಾರು 12 ಸಾವಿರ ರೂ. ಕೊಟ್ಟು ಖರೀದಿ ಅವಕಾಶ ನೀಡಿದ್ದು, ಈ ಸರಕಾರ ಚೀಲ ಇಲ್ಲ ಎಂಬ ನೆಪ ಹೇಳುತ್ತಿದೆ. ಇದು ಅತ್ಯಂತ ನಾಚಿಕೆಗೇಡು ಎಂದು ಆಕ್ಷೇಪ ಸೂಚಿಸಿದರು. ಈಗಾಗಲೇ ಖರೀದಿಸಿದ 35 ಸಾವಿರ ಟನ್ ಕೊಬ್ಬರಿಗೆ ಹಣವನ್ನೂ ನೀಡಿಲ್ಲ ಎಂದು ದೂರಿದರು.
ರೈತರು ಹಣ ಕೇಳಿದರೆ ಕೊಬ್ಬರಿ ತೆಗೆದುಕೊಂಡು ಹೋಗುವಂತೆ ಅಧಿಕಾರಿಗಳು ದರ್ಪದಿಂದ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಕೊಬ್ಬರಿಗೆ ಸಂಬಂಧಿಸಿ ರೈತರಿಗೆ ಹಣ ನೀಡಬೇಕು. ಚೀಲ ಇಲ್ಲ ಎಂಬ ಕುಂಟು ನೆಪ ಬಿಟ್ಟು ಕೊಬ್ಬರಿ ಖರೀದಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಹಿಂದೆ ಹೈನುಗಾರರಿಗೆ ನಮ್ಮ ಸರಕಾರ ಹಾಲು ಉತ್ಪಾದನೆಗೆ ಪ್ರೋತ್ಸಾಹಧನ ನೀಡುತ್ತಿತ್ತು. ಆದರೆ, ಈಗ ಹೈನುಗಾರಿಕೆಗೆ ಸಂಬಂಧಿಸಿ ಪ್ರತಿ ಲೀಟರ್‍ಗೆ 5 ರೂ. ಪ್ರೋತ್ಸಾಹಧನ ಸ್ಥಗಿತಗೊಂಡಿದೆ ಎಂದರಲ್ಲದೆ, ರೈತರಿಗೆ ಬಾಕಿ ಇರುವ 700ರಿಂದ 800 ಕೋಟಿ ಸಹಾಯಧನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಅವರು ಒತ್ತಾಯಿಸಿದರು.

